ಸಾರಾಂಶ
ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಯುವ ನಾಯಕ, ನಿವೃತ್ತ ಯೋಧ. ಆರ್‌ಎಸ್‌ಎಸ್ ಸಕ್ರಿಯ ಕಾರ್ಯಕರ್ತನಾಗಿರುವ ಇವರು ಪ್ರಸಕ್ತ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ. ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಪ್ರವೇಶ ಮಾಡಿದ ಇವರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ, ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಚುನಾವಣಾ ಕಾರ್ಯ ನಿರ್ವಹಿಸಿದ್ದಾರೆ. ಈ ಬಾರಿ ಹೊಸ ಮುಖವಾಗಿ ಕಣಕ್ಕೆ ಇಳಿದಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಇವರು ‘ಕನ್ನಡಪ್ರಭ’ ಜತೆ ಮಾತನಾಡಿದಾಗ..-ನಿವೃತ್ತ ಯೋಧನಾದ ನಿಮಗೆ ರಾಜಕೀಯ ಪ್ರವೇಶ ಯಾಕೆ ಅನಿವಾರ್ಯವಾಯಿತು?
ಉತ್ತರ- ಬಾಲ್ಯದಿಂದಲೇ ನನಗೆ ಆರ್‌ಎಸ್‌ಎಸ್, ಹಿರಿಯರ ಜತೆ ಒಡನಾಟ, ಸಂಘದ ಚಟುವಟಿಕೆಯಿಂದಾಗಿ ದೇಶಸೇವೆಯ ಪ್ರೇರಣೆ. ಭಾರತೀಯ ಸೇನೆ ಸೇರಿ ಸ್ವಂತ ಪರಿಶ್ರಮದಿಂದ ಕ್ಯಾಪ್ಟನ್ ಹುದ್ದೆಯವರೆಗೆ ಸೇವೆ ಸಲ್ಲಿಸಿದೆ. ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ಹಂಬಲದೊಂದಿಗೆ ಹುಟ್ಟೂರು ಮಂಗಳೂರಿಗೆ ಬಂದೆ. ದೇಶಭಕ್ತಿ, ರಾಷ್ಟ್ರೀಯತೆ ಹಾಗೂ ತತ್ವಸಿದ್ಧಾಂತದ ಕಾರಣಕ್ಕೆ ಬಿಜೆಪಿ ಸೇರ್ಪಡೆಯಾದೆ. ವಿವಿಧ ಹಂತದ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ ನನಗೆ ಪಕ್ಷ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಮಹತ್ತರ ಅವಕಾಶ ಕೊಟ್ಟಿದೆ. ಆ ಕಾರಣಕ್ಕೆ ಪಕ್ಷದ ಎಲ್ಲ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.- ಓರ್ವ ಅಭ್ಯರ್ಥಿಯಾಗಿ ದ.ಕ. ಮತದಾರರಿಗೆ ಏನು ಹೇಳಲು ಬಯಸುತ್ತೀರಿ?-ಸೈನಿಕನಾಗಿ ದೇಶ ರಕ್ಷಣೆಯನ್ನು ಬದ್ಧತೆತೆಯಿಂದ ಕೆಲಸ ಮಾಡಿದ ನನಗೆ ಜನಸೇವೆ ಮಾಡಲು ಬಿಜೆಪಿ ಅವಕಾಶ ನೀಡಿದೆ. ದ.ಕ. ಜಿಲ್ಲೆಯ ಮತದಾರರ ಆಶೀರ್ವಾದದಿಂದ ಗೆಲುವು ನನ್ನದಾಗಲಿದೆ, ಕರಾವಳಿ ಭಾಗದ ಅಭಿವೃದ್ಧಿಗೆ ಪ್ರಧಾನ ಮಂತ್ರಿಯವರ ‘ವಿಕಸಿತ ಭಾರತ-2047’ರ ಕಲ್ಪನೆಗೆ ಪೂರಕವಾಗಿ ‘ವಿಕಸಿತ ದಕ್ಷಿಣ ಕನ್ನಡ’ ನಿರ್ಮಾಣ ಮಾಡಲು ನಾನು ಕಟಿಬದ್ಧನಾಗಿದ್ದೇನೆ ಎಂಬ ಭರವಸೆ ನೀಡುತ್ತೇನೆ.- ಪ್ರಸ್ತುತ ಚುನಾವಣಾ ಪ್ರಚಾರ ಕಾರ್ಯ ಹೇಗೆ ನಡೆಯುತ್ತಿದೆ?
-ದ.ಕ. ಜಿಲ್ಲೆ ಹಿಂದುತ್ವದ ಭದ್ರಕೋಟೆ, ಪಕ್ಷದ ಎಲ್ಲ ಕಾರ್ಯಕರ್ತರ, ಜಿಲ್ಲೆಯ ಶಾಸಕರುಗಳ, ಹಿರಿಯ ಮುಖಂಡರ ಪರಿಶ್ರಮದಿಂದ, ಸಂಘಟನೆಯ ಪ್ರಮುಖರ ಮಾರ್ಗದರ್ಶನದಲ್ಲಿ ನಾನು ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಈ ಚುನಾವಣೆಯಲ್ಲಿ ಅತ್ಯಧಿಕ ಅಂತರದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಜೊತೆಗೆ ರಾಜ್ಯಾಧ್ಯಕ್ಷ ವಿಜಯೇಂದ್ರ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅಲ್ಲದೆ ಇತರೆ ರಾಷ್ಟ್ರ ಹಾಗೂ ರಾಜ್ಯ ನಾಯಕರುಗಳು ಪ್ರಚಾರ ಮಾಡಲಿದ್ದಾರೆ-ಕ್ಷೇತ್ರದ ಮತದಾರರಿಗೆ ನಿಮ್ಮ ಭರವಸೆ ಏನು?-ದ.ಕ. ಜಿಲ್ಲೆ ‘ಸಾಧ್ಯತೆಗಳ ಸಾಗರ’ ಎಂಬುದು ನನ್ನ ನಂಬಿಕೆ. ಬಂದರು ನಗರಿ ಮಂಗಳೂರು ಕರ್ನಾಟಕ ರಾಜ್ಯದ ಆರ್ಥಿಕತೆಗೆ ಶಕ್ತಿ ನೀಡುವ ಹೆಬ್ಬಾಗಿಲಾಗುವ ಎಲ್ಲ ಅವಕಾಶವಿದೆ. ಶಿಕ್ಷಣ ಕ್ಷೇತ್ರದ ಹಬ್ ಆಗಿರುವ ಇಲ್ಲಿನ ಇತಿಹಾಸ ಪ್ರಸಿದ್ದ ದೇವಾಲಯಗಳು, ಪಶ್ಚಿಮ ಘಟ್ಟಗಳ ಸಾಲು, ಅತಿ ಉದ್ದದ ಕಡಲು, ಪ್ರವಾಸೋಧ್ಯಮದ ಆಕರ್ಷಣೆಯಾಗಿದೆ. ಮೀನುಗಾರಿಕೆ ವಹಿವಾಟು ಹೆಚ್ಚಿಸಲು, ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳ ಆಹ್ವಾನಿಸಿ ಉದ್ಯೋವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗಮನಹರಿಸಲಿದ್ದೇನೆ.- ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ, ಏನನ್ನಿಸುತ್ತಿದೆ?
-ಸೇನೆಯಲ್ಲಿ ಸೇವೆ ಸಲ್ಲಿಸಿ ಜನಸೇವೆ ಮಾಡಲು ಇಚ್ಚಿಸಿರುವ ನನಗೆ ಪಕ್ಷವು ನೀಡಿರುವ ಬಹುದೊಡ್ಡ ಅವಕಾಶ ಹಾಗೂ ಜವಾಬ್ದಾರಿ ಎಂದು ಭಾವಿಸುತ್ತೇನೆ. ವಿಶ್ವದ ಅತಿದೊಡ್ಡ ಪಕ್ಷ ಹಾಗೂ ದೊಡ್ಡ ಸಂಘಟನೆ ಹೊಂದಿರುವ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಈ ಜವಾಬ್ದಾರಿಯನ್ನು ಯಶಸ್ವಿಗೊಳಿಸುವ ನಂಬಿಕೆಯಿದೆ.-ದ.ಕ. ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಸಹಕಾರ ಹೇಗೆ ಇದೆ?-ದ.ಕ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಾಸಕರಿದ್ದಾರೆ, ಜೊತೆಗೆ ಓರ್ವ ವಿಧಾನ ಪರಿಷತ್ ಸದಸ್ಯರಿದ್ದು, ಅವರೆಲ್ಲರೂ ಎಲ್ಲ ಸಮಯದಲ್ಲೂ ಕ್ರಿಯಾಶೀಲರಾಗಿದ್ದಾರೆ. ಸಂಸದರು ಹಾಗೂ ಶಾಸಕರುಗಳ ಪೂರ್ಣ ಸಹಕಾರ ಹಾಗೂ ಬೆಂಬಲದೊಂದಿಗೆ ಪ್ರಚಾರ ಕಾರ್ಯ ಸುಲಲಿತವಾಗಿದೆ. ಈಗಾಗಲೇ ಜಿಲ್ಲೆಯಾದ್ಯತ ಎರಡು ಸುತ್ತಿನ ಪ್ರಚಾರ ಮುಗಿಸಿ ಮೂರನೇ ಸುತ್ತಿನ ಪ್ರಚಾರಲ್ಲಿ ತೊಡಗಿಸಿಕೊಂಡಿದ್ದೇನೆ. - ನೀವು ಸಂಸದನಾಗಿ ಆಯ್ಕೆಯಾದರೆ ಹಾಲಿ ಯೋಜನೆಗಳ ಮುಂದುವರಿಕೆ ಬಗ್ಗೆ?
-ಖಂಡಿತವಾಗಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟ ಎಲ್ಲ ಯೋಜನೆಗಳು ಅನುಷ್ಠಾನ ಹಂತದಲ್ಲಿದೆ. ಅವುಗಳು ಪೂರ್ಣಗೊಳ್ಳುವುದರಿಂದ ನಮ್ಮ ಜಿಲ್ಲೆಗೆ ಹೆಚ್ಚು ಅನುಕೂಲವಾಗಿದೆ. ಮತ್ತು ಇದು ನನ್ನ ಮೊದಲ ಆದ್ಯತೆಯಾಗಲಿದೆ, - ಕಾಂಗ್ರೆಸ್‌ನ ಜಾತಿ ಓಲೈಕೆ ಹಾಗೂ ಅಲ್ಪಸಂಖ್ಯಾತ ಮತ ಬ್ಯಾಂಕ್ ಕಸಿಯುವ ಯತ್ನವನ್ನು ಹೇಗೆ ಎದುರಿಸುತ್ತೀರಿ?-ಪ್ರಧಾನಿ ನರೇಂದ್ರ ಮೋದಿಯವರದ್ದು ಸಬ್-ಕಾ ಸಾತ್, ಸಬ್-ಕ ವಿಕಾಸ್ ಮಂತ್ರವಾದರೆ, ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಾ ನಂತರದಿಂದಲೂ ಓಲೈಕೆಯ ರಾಜಕಾರಣವನ್ನೇ ಮಾಡುತ್ತಿದೆ. ಅವರು ಒಂದು ಧರ್ಮಕ್ಕೆ ಅತಿಯಾದ ತುಷ್ಠೀಕರಣ ಹಾಗೂ ಸುಳ್ಳು ಹೇಳಿ ಜನರನ್ನು ಮೂರ್ಖರನ್ನಾಗಿಸಲು ಹೊರಟಂತಿದೆ. ಸದಾ ಜನರನ್ನು ಒಡೆದು ವೈಷಮ್ಯದ ವಿಷಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲುವ ತಂತ್ರ ಫಲಿಸುವುದಿಲ್ಲ. ನಾವು ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಹಿಂದುತ್ವದ ಬದ್ಧತೆ ನಮ್ಮದು. - ಮಂಗಳೂರಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಬಳಿಕದ ವಾತಾವರಣ ಹೇಗಿದೆ?
-ದ.ಕ. ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರದ್ದು ಮೊದಲ ರೋಡ್ ಶೋ ಅದಾಗಿತ್ತು, ಇದರಿಂದಾಗಿ ಮೋದಿಯವರನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕ ಜಿಲ್ಲೆಯ ಲಕ್ಷಾಂತರ ಜನ ಸಂಭ್ರಮದಿಂದ ಬರಮಾಡಿಕೊಂಡು ಬೆಂಬಲ ಸೂಚಿಸಿ ಆಶೀರ್ವದಿಸಿದ್ದಾರೆ. ನಮ್ಮೆಲ್ಲಾ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದ್ದು ಚೈತನ್ಯದಿಂದ ಪ್ರಚಾರದಲ್ಲಿ ತೊಡಗಿದ್ದು, ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಬಿಜೆಪಿಗೆ ಸಿಗಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮಂಗಳೂರಿನಲ್ಲಿ ಸಿಕ್ಕ ಜನಸ್ಪಂದನೆ ಹಾಗೂ ಕರಾವಳಿಯ ಜನರ ಜತೆಗಿನ ಅವರ ಬಾಂಧವ್ಯದ ಜತೆಗೆ X ಖಾತೆಯಲ್ಲಿ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.- ದ.ಕ. ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಬಗ್ಗೆ ನಿಮ್ಮ ಅಜೆಂಡಾ ಏನು?-ಅನುಷ್ಠಾನ ಹಂತದಲ್ಲಿರುವ ಹೆದ್ದಾರಿ ಕಾಮಗಾರಿ ಶೀಘ್ರವಾಗಿ ಮುಗಿಸುವುದು, ಹೆದ್ದಾರಿ ಹಾಗೂ ರೈಲು ಮಾರ್ಗ ಮೂಲಕ ಕಡಿಮೆ ಅವಧಿಯಲ್ಲಿ ಮಂಗಳೂರು-ಬೆಂಗಳೂರು ಸಂಪರ್ಕಕ್ಕೆ ಯೋಜನೆ, ಪ್ಲಾಸ್ಟಿಕ್ ಪಾರ್ಕ್, ಕೋಸ್ಟ್‌ಗಾರ್ಡ್ ತರಬೇತಿ ಕೇಂದ್ರ ಶೀಘ್ರ ಕಾರ್ಯಾರಂಭ, ಜಲಜೀವನ್ ಮಿಷನ್ ಸಂಪೂರ್ಣ ಕಾರ್ಯಗತಕ್ಕೆ ಯತ್ನ, ಟೆಂಪಲ್ ಟೂರಿಸಂ, ಸಸಿಹಿತ್ಲುವಿನಲ್ಲಿ ಜಲಸಾಹಸ ಪ್ರವಾಸೋದ್ಯಮ, ಮಹಿಳಾ ಸ್ವಾಲಂಬನೆ ಉದ್ಯೋಗ, ಯುವಕರಿಗೆ ಸ್ಟಾರ್ಟ್‌ಅಪ್, ಆಹಾರ ಕ್ಲಸ್ಟರ್, ಸರ್ಕಾರದ ವ್ಯವಸ್ಥೆಯನ್ನು ಜೋಡಿಸುವುದು, ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. -ದ.ಕ. ಕ್ಷೇತ್ರದ ಜನತೆಗೆ ನೀವು ಏನು ಹೇಳಲು ಬಯಸುತ್ತೀರಿ?
-ಕೇಂದ್ರದಲ್ಲಿ ನೆಚ್ಚಿನ ನರೇಂದ್ರ ಮೋದಿಯವರು ಮೂರನೇ ಭಾರಿಗೆ ಪ್ರಧಾನಿಯಾಗಲು ದಕ್ಷಿಣ ಕನ್ನಡದ ಜಿಲ್ಲೆಯ ಜನತೆ ಆಶೀರ್ವಾದ ಮಾಡಲಿದ್ದಾರೆ, ಹಾಗೆಯೇ ಮಂಗಳೂರಿಗೆ ಅಗತ್ಯವಾದ ಯೋಜನೆಗಳಿಗೆ ಪೂರಕ ಸಹಕಾರ ಕೇಂದ್ರದಿಂದ ಸಿಗಲಿದೆ.