ಸಮರ್ಪಕವಾಗಿ ಜಾರಿಯಾಗದ ಗ್ಯಾರಂಟಿ ಯೋಜನೆ: ಕಾಗೇರಿ

| Published : Apr 19 2024, 01:08 AM IST

ಸಾರಾಂಶ

ಅಲ್ಪಸಂಖ್ಯಾತರು ಸಹ ಬಿಜೆಪಿಯನ್ನು ಬೆಂಬಲಿಸಿ ರಾಷ್ಟ್ರಭಕ್ತಿಯನ್ನು ಮೆರೆಯಬೇಕು ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.

ಹೊನ್ನಾವರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ. ಮೋದಿಯವರ ಗ್ಯಾರಂಟಿ ಎದುರು ರಾಜ್ಯದ ಗ್ಯಾರಂಟಿ ಠುಸ್ ಆಗಲಿದೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ತಾಲೂಕಿನ ಮಂಕಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಮನಮೋಹನ್ ಸಿಂಗ್ ಇದ್ದಾಗ ಕೇವಲ ಹಗರಣಗಳೇ ನಡೆದಿದ್ದವು. ಆದರೆ ಈಗ ೧೦ ವರ್ಷದ ಆಡಳಿಯ ಅವಧಿಯಲ್ಲಿ ಯಾವ ಹಗರಣವೂ ಇಲ್ಲ. ಪಾರದರ್ಶಕ ಆಡಳಿತ ನೀಡಿ ಭ್ರಷ್ಟಾಚಾರ ಮುಕ್ತ ಮಾಡಲಾಗಿದೆ. ಮೋದಿಯವರ ಆಡಳಿತದಲ್ಲಿ ಅಭಿವೃದ್ಧಿಗೆ ಮಾತ್ರ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಈ ಹಿಂದಿನ ಸರ್ಕಾರದಲ್ಲಿ ಭಟ್ಕಳ ಕ್ಷೇತ್ರ ಸೇರಿದಂತೆ ಅಂದಿನ ಶಾಸಕರು ಹೆಚ್ಚಿನ ಅನುದಾನ ತಂದು ಕೆಲಸ ಮಾಡಿದ್ದರು. ಈಗಲೂ ಅಂದು ತಂದಿರುವ ಕೆಲಸವೇ ನಡೆದಿದೆ. ಹೊಸ ಕಾಮಗಾರಿಗಳು ಮಂಜೂರಾಗುತ್ತಿಲ್ಲ ಎಂದು ಟೀಕಿಸಿದ ಕಾಗೇರಿ, ಜೆಡಿಎಸ್, ಬಿಜೆಪಿ ಮೈತ್ರಿ ಶಕ್ತಿಯಿಂದ ರಾಜ್ಯದಲ್ಲಿ ೨೮ಕ್ಕೆ ೨೮ ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರು ಸಹ ಬಿಜೆಪಿಯನ್ನು ಬೆಂಬಲಿಸಿ ರಾಷ್ಟ್ರಭಕ್ತಿಯನ್ನು ಮೆರೆಯಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸುನೀಲ್ ನಾಯ್ಕ ಹಾಗೂ ಇತರ ಬಿಜೆಪಿ, ಜೆಡಿಎಸ್ ಮುಖಂಡರು ಇದ್ದರು.‌

ಬಿಜೆಪಿ ನಾಯಕರ ಸಮ್ಮಿಲನ: ಹೊನ್ನಾವರದ ಪ್ರಚಾರದ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ ಅವರನ್ನು ಕಾಗೇರಿ ಭೇಟಿ ಮಾಡಿ ಸಹಕಾರ ಕೇಳಿದರು. ಗಣಪಯ್ಯ ಗೌಡ ಅವರ ಸ್ವಗೃಹದಲ್ಲಿ ಜೆಡಿಎಸ್, ಬಿಜೆಪಿ ನಾಯಕರ ಸಮ್ಮಿಲನ ನಡೆಯಿತು. ಮೈತ್ರಿ ಮಾತುಕತೆಯಂತೆ ಬಿಜೆಪಿಯ ಗೆಲುವಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷರು ತಿಳಿಸಿದರು.