ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ತಂತ್ರಜ್ಞಾನಗಳ ಅಷ್ಟೊಂದು ಅಭಿವೃದ್ಧಿ ಇಲ್ಲದ ಆ ದಿನಗಳು ಮತ್ತು ಬದಲಾದ ನೂತನ ತಂತ್ರಜ್ಞಾನ ಯುಗದ ಈ ದಿನಗಳ ಅಂಚೆ ಸೇವೆ ನನಗೆ ಜೀವಮಾನದ ವರೆಗೂ ತೃಪ್ತಿ ನೀಡಿದೆ ಎಂದು ರಬಕವಿ ಅಂಚೆ ಇಲಾಖೆಯ ಅಂಚೆ ಸಹಾಯಕರಾಗಿ ಸೇವಾ ನಿವೃತ್ತಿ ಹೊಂದಿದ ಶ್ರೀಶೈಲ ಗು ಮೊಕಾದಮ ಹೇಳಿದರು.
ರಬಕವಿ ಶಿವದಾಶಿಮಯ್ಯ ಸಮುದಾಯ ಭವನದಲ್ಲಿ ಭಾನುವಾರ ಅಂಚೆ ಮನೋರಂಜನ ಕೂಟದಡಿಯಲ್ಲಿ ಹಮ್ಮಿಕೊಂಡ ತಮ್ಮ ಸೇವಾ ನಿವೃತ್ತಿ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಆಗಿನ ಕಾಲದಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಅಂಚೆ ಸಿಬ್ಬಂದಿಗೆ ತುಂಬಾ ಗೌರವವಿತ್ತು. ಪ್ರತಿಯೊಂದು ಸಂದೇಶಗಳನ್ನು ನಾವೇ ಮುಟ್ಟಿಸುವವರಾಗಿದ್ದರಿಂದ ಗ್ರಾಮಸ್ಥರು ನಮ್ಮನ್ನು ಕಂಡರೆ ಅಷ್ಟೊಂದು ಗೌರವ, ಪ್ರೀತಿ ತೋರಿಸುತ್ತಿದ್ದರು. ಆ ಸೇವೆ, ಗೌರವ ಮರೆಯುವಂತಿಲ್ಲ. ಅಂಚೆಯಣ್ಣ ಅಂದರೆ ಜನರು ಕೈಮುಗಿದು ಗೌರವ ನೀಡಿ ಒಂದಿಷ್ಟು ಸಮಯ ಮನೆಗಲ್ಲಿ ಕುಡ್ರಿಸಿ ಮಜ್ಜಿಗೆ ಸೇರಿ ಅನೇಕ ಬಗೆಯ ತಿಂಡಿಗಳನ್ನು ತಿನಿಸಿ ಕಳಿಸುವ ಕಾಲ ಒಂದಿತ್ತು. ಅದು ನಮ್ಮ ಕಾಲ. ಈಗ ಬದಲಾದ ಜಗತ್ತು. ಅದಕ್ಕೆ ತಕ್ಕಂತೆ ತಗ್ಗಿ ಬಗ್ಗಿ ಒಗ್ಗಿ ಕೆಲಸ ಮಾಡಿದ ಅನುಭವ ನಮಗೆ ತೃಪ್ತಿ ತಂದಿದೆ ಎಂದು ಕಣ್ಣಂಚಿನಲ್ಲಿ ಕಂಬನಿ ಹರಿಸಿ ನಗರದ ಜನರಿಗೆ ಕೃತಜ್ಞತೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಧಾರವಾಡ ವಿಭಾಗ ಅಂಚೆ ಅಧೀಕ್ಷಕ ಮೋಹನ ಮಳೋದೆ ಮಾತನಾಡಿ, ನಮ್ಮ ಸೇವಾ ಕಾಲದಲ್ಲಿ ಅಂಚೆ ಇಲಾಖೆಗೆ ಜನ ಸಾಲಾಗಿ ಬಂದು ನಿಂತು ಪತ್ರಪಡೆದು ನಾವೇ ಬರೆದು ಪೋಸ್ಟ್ ಮಾಡುವಂತಿತ್ತು. ಈಗ ಕಾಲ ಬದಲಾಗಿ ಮೇಲ್, ವಾಟ್ಸಪ್ ಹೀಗೆ ಹಲವು ರೀತಿಯ ಸಂದೇಶ ಮಾರ್ಗಗಳು ಬಂದಿವೆ. ನಿವೃತ್ತಿ ನಂತರವೂ ನಮಗೆ ಶಿಕ್ಷಕರಷ್ಟೆ ಸಮಾಜ ನಮ್ಮನ್ನು ಗೌರವಿಸುವುದು ಸಂತಸ ವೆನಿಸುತ್ತದೆ ಎಂದರು.ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು, ಚಿಮ್ಮಡ ಸಾಧುಮಹಾರಾಜ ಮಠದ ಜನಾರ್ಧನ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರಬಕವಿ ಸಿದ್ದಲಿಂಗ ಗುರೂಜಿ, ರಬಕವಿ ಪೋಸ್ಟ್ ಮಾಸ್ಟರ್ ಎಸ್.ಬಿ.ಗದ್ಯಾಳ, ಬಿ.ಜಿ.ಸೋನಕರ, ಎಂ.ಆರ್.ಕಾಮಗೌಡರ, ಎಚ್.ಬಿ.ಹಸಬಿ, ಡಾ.ಎನ್.ವಿ.ಅಸ್ಕಿ, ಎಸ್.ಐ.ಜತ್ತಿ, ಸಿ.ಜಿ.ಕಾಂಬಳೆ, ರವೀಂದ್ರ ನಾಯಕ, ಸುಭಾಸ ಬಸಲಿಗುಂದಿ, ಶಿವಾನಂದ ದಾಶ್ಯಾಳ ಮುಂತಾದವರು ಇದ್ದರು.