ಸಾರಾಂಶ
ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ಉದಯಗಿರಿ ಗಲಾಟೆ ಹಿಂದೆ ಆರ್ ಎಸ್ಎಸ್ ಕೈವಾಡವಿದೆ. ನನ್ನ ಮಾತಿಗೆ ನಾನು ಈಗಲೂ ಬದ್ಧ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಹೇಳಿದರು.ನಗರದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಾಟೆಯ ಹಿಂದೆ ಬಿಜೆಪಿ ಹಾಗೂ ಆರ್ ಎಸ್‌ಎಸ್ ಕೈವಾಡ ಇದೆ. ನಾನು ಇದರ ಬಗ್ಗೆ ಲಿಖಿತವಾಗಿ ಉದಯಗಿರಿ ಪೊಲೀಸರಿಗೆ ಈಗಾಗಲೇ ದೂರು ಕೊಟ್ಟು ಕ್ರಮ ಕೈಗೊಳ್ಳಲು ಕೋರಿದ್ದೇನೆ. ಈ ತನಿಖೆಯನ್ನು ಪೊಲೀಸರು ಒನ್ ಸೈಡ್ ಮಾಡಬಾರದು ಎಂದರು.ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಅಪ್ರಾಪ್ತ ಸೇರಿದಂತೆ ಒಂದು ಸಾವಿರ ಜನರ ಮೇಲೆ ಎಫ್ಐಆರ್ ಆಗಿದೆ. ಹಲವರನ್ನು ವಶಕ್ಕೆ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಎಷ್ಟು ಜನರನ್ನು ಅರೆಸ್ಟ್ ಮಾಡ್ತಾರೆ ಎಂಬ ಮಾಹಿತಿ ಇಲ್ಲ ಎಂದು ಅವರು ಹೇಳಿದರು.ಪೊಲೀಸ್ ಠಾಣೆ ಮುಂಭಾಗ ಒಂದು ಸಾವಿರ ಮಂದಿ ಇದ್ದರಾ? ಅಷ್ಟು ಜನ ಇದ್ದರು ಎಂಬುದಕ್ಕೆ ನಿಮ್ಮ ಬಳಿ ಮಾಹಿತಿ ಇದಿಯಾ? ಅಲ್ಲಿ ನೆರೆದಿದ್ದ ಜನರ ಪೈಕಿ ಒಂದು ಸಾವಿರ ಜನ ಇರಲೇ ಇಲ್ಲ. ಘಟನೆ ಸಂಬಂಧ ಬೆಳಿಗ್ಗೆ 10.30ಕ್ಕೆ ದೂರು ಕೊಡಲು ಬಂದಾಗ ತೆಗೆದುಕೊಂಡಿಲ್ಲ ಎಂದರು.ವಿಪಕ್ಷ ನಾಯಕರು, ಮಾಜಿ ಶಾಸಕರನ್ನು ಪೊಲೀಸ್ ಠಾಣೆ ಒಳಗೆ ಸಭೆ ಮಾಡ್ತಾರೆ. ಪೊಲೀಸ್ ಠಾಣೆ ಒಳಗೆ ಸಭೆ ಮಾಡಲು ಅವಕಾಶ ಇದಿಯಾ? ನಮ್ಮನ್ನು ಯಾಕೆ ಒಳಗೆ ಬಿಡಲಿಲ್ಲ? ಜನ ಸಾಮಾನ್ಯರಿಗೆ ಈ ವಿಚಾರವಾಗಿ ಗೊಂದಲ ಇದೆ. ಪೊಲೀಸರು ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು ಎಂದು ಅವರು ಆಗ್ರಹಿಸಿದರು.ಯಾರೇ ಗಲಾಟೆ ಮಾಡಿದ್ದರೂ ಕ್ರಮ ಜರುಗಿಸಲಿಕ್ಕೆ ನಮ್ಮ ಅಭ್ಯಂತರವಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಖಿಲೇಶ್ ಯಾದವ್, ಕೇಜ್ರಿವಾಲ್ ಅವರನ್ನು ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ. ಧರ್ಮದ ಬಗ್ಗೆ ಅವಹೇಳನ ಮಾಡಲಾಗಿದೆ. ಸತೀಶ್ ಎಂಬಾತ ಆರ್ ಎಸ್ಎಸ್ ಗೆ ಸೇರಿದ ವ್ಯಕ್ತಿ. ಉದಯಗಿರಿ ಪೊಲೀಸ್ ಠಾಣೆ ಗಲಾಟೆಗೆ ಕಾರಣವಾಗಿರೋದೇ ಸತೀಶ್ ಎಂದು ಅವರು ಆರೋಪಿಸಿದರು.ಈಗ ಪೊಲೀಸರು ಅರೆಸ್ಟ್ ಮಾಡಿರುವವರ ಪೈಕಿ ಕೆಲವರು ಮುಗ್ದರು ಇದ್ದಾರೆ. ನನಗೆ ಅವರ ಬಗ್ಗೆ ಮಾಹಿತಿ ಇದೆ. ವಿಪಕ್ಷ ನಾಯಕ ಆರ್. ಅಶೋಕ್ ಪೊಲೀಸ್ ಅಧಿಕಾರಿಗಳಿಗೆ ಧಮ್ಕಿ ಹಾಕಿದ್ದಾರೆ. ಧಮ್ಕಿಗೆ ಹೆದರಿ ಪೊಲೀಸರು ಎಫ್ಐಆರ್ ಹಾಕಿದ್ದಾರೆ ಎಂದು ಅವರು ದೂರಿದರು.ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ದೊಡ್ಡ ಜೋಕರ್ಸ್. ಆರ್ ಎಸ್ಎಸ್ ಚಡ್ಡಿಯನ್ನು ತೊಳಿಯಲಿಕ್ಕೆ ನಿಮ್ಮನ್ನು ಇಟ್ಟುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರನ್ನು ಬೈಯಲು ನಿಮ್ಮನ್ನು ಇರಿಸಿಕೊಳ್ಳಲಾಗಿದೆ. ಎಲ್ಲಿಗೆ ಬೇಕಾದರೂ ನಾನು ಬರ್ತೀನಿ ಬನ್ನಿ. ನಿಮಗೆ ಉತ್ತರ ಕೊಡುವ ಕೆಲಸ ಮಾಡುತ್ತೇನೆ ಎಂದು ಅವರು ಸವಾಲು ಹಾಕಿದರು.ಸತೀಶ್ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ತನಿಖೆ ಆಗಬೇಕು. ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ನನ್ನನ್ನು ಕೂಡ ತನಿಖೆ ಮಾಡಬೇಕು ಅಂತ ಕೆಲವರು ಒತ್ತಾಯ ಮಾಡಿದ್ದಾರೆ. ನನ್ನನ್ನು ಕೂಡ ಮಂಪರು ಪರೀಕ್ಷೆ ಮಾಡಲಿ ಎಂದರು.