ಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ: ಶಿವರಾಜ ತಂಗಡಗಿ

| Published : Oct 05 2025, 01:01 AM IST

ಕೋರ್ಟ್ ತೀರ್ಪು ಸ್ವಾಗತಿಸುತ್ತೇನೆ: ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಯಲ್ಲಾಲಿಂಗ ಕೊಲೆ ಆರೋಪದ ವೇಳೆಯಲ್ಲಿ ವಿನಾಕಾರಣ ನನ್ನ ವಿರುದ್ಧ ಪಾದಯಾತ್ರೆ ಮಾಡಿದ್ದರು.

ಕೊಪ್ಪಳ: ವಿದ್ಯಾರ್ಥಿ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆ ಮಾಡಿ ಕೋರ್ಟ್ ತೀರ್ಪು ನೀಡಿದನ್ನು ನಾನು ಸ್ವಾಗತಿಸುತ್ತೇನೆ, ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಿ ಗೌರವಿಸಲೇಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಾಲಿಂಗ ಕೊಲೆ ಆರೋಪದ ವೇಳೆಯಲ್ಲಿ ವಿನಾಕಾರಣ ನನ್ನ ವಿರುದ್ಧ ಪಾದಯಾತ್ರೆ ಮಾಡಿದ್ದರು. ಬಿಜೆಪಿ ನಾಯಕರು ಇನ್ನಿಲ್ಲದ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಅದೆಲ್ಲಕ್ಕೂ ನ್ಯಾಯಾಲಯದ ತೀರ್ಪಿನಿಂದ ಉತ್ತರ ಸಿಕ್ಕಂತಾಗಿದೆ ಎಂದರು.

ನನಗೂ ಅದಕ್ಕೂ ಸಂಬಂಧವೇ ಇರಲಿಲ್ಲ. ಅಷ್ಟಕ್ಕೂ ಅಂಥ ಯಾವುದೇ ಘಟನೆಗೂ ನನ್ನ ಬೆಂಬಲ ಇರಲು ಸಾಧ್ಯವಿಲ್ಲ. ಆದರೂ ರಾಜಕೀಯಕ್ಕಾಗಿ ವಿರೋಧ ಮಾಡಿ ಕೊಲೆ ಆರೋಪಿಗಳು ನನ್ನ ಆಪ್ತರು ಎಂದೆಲ್ಲ ಟೀಕೆ ಮಾಡಿದ್ದರು ಎಂದರು.

ಮುಖ್ಯಮಂತ್ರಿಗಳ ಬದಲಾವಣೆ ಸೇರಿದಂತೆ ಪಕ್ಷದ ಚಟುವಟಿಕೆಯ ಕುರಿತು ಮಾತನಾಡುವುದಿಲ್ಲ. ನಿಮ್ಮ ನಿಮ್ಮ ಕೆಲಸ ಮಾಡಿ ಎಂದು ಹೈಕಮಾಂಡ್ ವಾರ್ನಿಂಗ್ ಮಾಡಿದೆ. ಅಷ್ಟಕ್ಕೂ ಮುಖ್ಯಮಂತ್ರಿಗಳ ಬದಲಾವಣೆ ಕುರಿತು ಮಾತನಾಡುವಷ್ಟು ದೊಡ್ಡವನು ನಾನಲ್ಲ ಎಂದರು.

ಸಚಿವ ಎಚ್.ಸಿ. ಮಹದೇವಪ್ಪ ಅವರ ಮೊಮ್ಮಗ ಸಣ್ಣ ಹುಡುಗ, ಆ ಹುಡುಗ ಸಿಎಂ ಇದ್ದ ವಾಹನ ಏರಿದರೆ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಲ್ಲದೇ ಆ ಬಗ್ಗೆ ಚರ್ಚೆ ಅನಗತ್ಯ ಎಂದರು.

ವಿಮಾನ ನಿಲ್ದಾಣದ ನಿರ್ಮಾಣ ಕುರಿತು ಈ ಹಿಂದೆಯೇ ಪ್ರಸ್ಥಾವನೆ ಆಗಿದ್ದು ನಿಜ. ಈಗ ಸ್ಥಳ ಫೈನಲ್ ಮಾಡಬೇಕಾಗಿದೆ ಎಂದರು.

ಕೊಪ್ಪಳ ವಿವಿಯನ್ನು ಕೊಪ್ಪಳದಲ್ಲಿಯೇ ಸ್ಥಾಪನೆ ಮಾಡುವ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಕುರಿತು ನಾನು ಚರ್ಚೆ ಮಾಡಿ ತೀರ್ಮಾನ ಮಾಡುತ್ತೇನೆ. ಯಲಬುರ್ಗಾ ಶಾಸಕ ಬಸರಾಜ ರಾಯರಡ್ಡಿ ಯಲಬುರ್ಗಾದಲ್ಲಿಯೇ ಮಾಡಬೇಕು ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದರು.