ಸಿಎಂರಿಂದ ₹2500 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನಾಳೆ

| Published : Oct 05 2025, 01:01 AM IST

ಸಿಎಂರಿಂದ ₹2500 ಕೋಟಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನಾಳೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂದಾಜು ₹2500 ಕೋಟಿ ವೆಚ್ಚದ ಯೋಜನೆಗಳಾಗಿದ್ದು, ಇದು ಸುಮಾರು ₹3 ಸಾವಿರ ಕೋಟಿ ಆಗಲಿದೆ

ಕೊಪ್ಪಳ: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟನೆ ಹಾಗೂ ಸೂಪರ್ ಸ್ಪೇಷಾಲಿಟ ಆಸ್ಪತ್ರೆ ಶಂಕುಸ್ಥಾಪನೆ ಸೇರಿದಂತೆ ಸುಮಾರು ₹2500 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಾಜು ₹2500 ಕೋಟಿ ವೆಚ್ಚದ ಯೋಜನೆಗಳಾಗಿದ್ದು, ಇದು ಸುಮಾರು ₹3 ಸಾವಿರ ಕೋಟಿ ಆಗಲಿದೆ ಸಿದ್ದರಾಮಯ್ಯ ಸಿಎಂ ಆದ ನಂತರ ಕೊಪ್ಪಳ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ ಎಂದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಅ.6 ರಂದು ಬೆಳಗ್ಗೆ 11 ಗಂಟೆಗೆ ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಮಾರುತಿ ಸುಜುಕಿ ಶೋ ರೂಂ ಎದುರುಗಡೆಯ ಅಗಡಿ ಲೇಔಟ್‌ನಲ್ಲಿ ಆಯೋಜಿಸಲಾಗಿದೆ. ಲಕ್ಷಕ್ಕೂ ಅಧಿಕ ಫಲಾನುಭವಿಗಳು ಸೇರುವ ನಿರೀಕ್ಷೆಯಿದೆ ಎಂದರು.

ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು.

ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪಾಲ್ಗೊಳ್ಳುವರು. ರಾಜ್ಯ ಸಭೆ ಸದಸ್ಯ ರಣದೀಪ್ ಸಿಂಗ್ ಸುರ್ಜೇವಾಲಾ, ಸಮಾರಂಭದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ ಜಾರ್ಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಸೇರಿದಂತೆ ಅನೇಕ ಸಚಿವರು ಭಾಗವಹಿಸುವರು ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 2024-25 ನೇ ಸಾಲಿನ ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 34 ವಸತಿ ನಿಲಯಗಳ ಹಾಗೂ 2025-26ನೇ ಸಾಲಿನ ಕಲ್ಯಾಣ ಕರ್ನಾಟಕ ಭಾಗದ 41ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2 ವಸತಿ ನಿಲಯಗಳ ಶಂಕುಸ್ಥಾಪನೆ. ಜಿಟಿಟಿಸಿ ಬಹು ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಕಲ್‌ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಡಿಯಲ್ಲಿ ಸ್ಥಾಪಿಸಲಾಗುವುದು. ಕಂದಾಯ ಇಲಾಖೆಯ ಕುಕನೂರು, ಯಲಬುರ್ಗಾ, ಕಾರಟಗಿ ಹಾಗೂ ಕನಕಗಿರಿ ತಾಲೂಕುಗಳ ಪ್ರಜಾಸೌಧ ಶಂಕುಸ್ಥಾಪನೆ, ನಗರಾಭಿವೃದ್ಧಿ ಇಲಾಖೆಯ ಅಮೃತ್ 2.0 ಯೋಜನೆಯಡಿಯಲ್ಲಿ ತುಂಗಭದ್ರಾ ಜಲಾಶಯ ಮೂಲದಿಂದ ಕುಕನೂರು, ಕನಕಗಿರಿ ಕಾರಟಗಿ ಮತ್ತು ಯಲಬುರ್ಗಾ ಪಟ್ಟಣಗಳಿಗೆ ಹಾಗೂ ಮಾರ್ಗ ಮಧ್ಯದ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ತಳಕಲ್, ತಳಬಾಳ, ಭಾನಾಪುರ ಗ್ರಾಮಗಳಿಗೆ ಮತ್ತು ಟಾಯ್ ಕ್ಲಸ್ಟರ್ ಇಂಡಸ್ಟ್ರೀಗಳಿಗೆ ಸಂಯುಕ್ತ ಕುಡಿಯುವ ನೀರು ಸರಬರಾಜು ಕಲ್ಪಿಸುವ ಯೋಜನೆ ಶಂಕುಸ್ಥಾಪನೆ, ಕೊಪ್ಪಳ ನಗರದಲ್ಲಿ ಭಕ್ತ ಕನಕದಾಸ ಪುತ್ಥಳಿ ಅನಾವರಣ ಹಾಗೂ ಭಾಗ್ಯನಗರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ.

ಜಲಸಂಪನ್ಮೂಲ ಇಲಾಖೆಯಿಂದ ಗಂಗಾವತಿ ತಾಲೂಕಿನಲ್ಲಿರುವ ಇಂದರಗಿ ಹಾಗೂ ಇತರೆ 27 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಮತ್ತು ಮುಕ್ಕುಂಪಿ ಹಾಗೂ ಇತರೆ 5 ಕೆರೆಗಳಿಗೆ ಅಚ್ಚುಕಟ್ಟು ಭಾಗದಲ್ಲಿ ನೀರಾವರಿ ವಂಚಿತ 15,605 ಎಕರೆ ಪ್ರದೇಶಕ್ಕೆ ನೀರೊದಗಿಸುವ ಏತ ನೀರಾವರಿ ಯೋಜನೆ ಉದ್ಘಾಟನೆ, ವೈದ್ಯಕೀಯ ಶಿಕ್ಷಣ ಇಲಾಖೆ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೊಪ್ಪಳ ಅಧೀನದ ನೂತನ 450 ಹಾಸಿಗೆ ಸಾಮರ್ಥ್ಯದ ಬೋಧಕ ಆಸ್ಪತ್ರೆಯ ನಾಲ್ಕನೇ ಅಂತಸ್ತಿನ ಮೇಲೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ನಿರ್ಮಾಣ ಮತ್ತು 450 ಹಾಸಿಗೆಗಳ ಬೋಧಕ ಆಸ್ಪತ್ರೆ ಉದ್ಘಾಟನೆ ನೆರವೇರಿಸುವರು.

ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹಳೆಯ ಕಟ್ಟಡ ತೆರವುಗೊಳಿಸಿ ಕಲ್ಲಿನಿಂದ ಹೊಸದಾಗಿ ಕಟ್ಟಡ ನಿರ್ಮಾಣ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕುಷ್ಟಗಿ ತಾಲೂಕಿನ ಎಂ.ಸಿ.ಎಚ್ ಆಸ್ಪತ್ರೆ (100 ಹಾಸಿಗೆ), ಡಿ.ಎಚ್.ಓ ಕಚೇರಿ, ಜಿಲ್ಲಾ ಆಯುಷ್ ಕಚೇರಿ ಕಟ್ಟಡ,ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ,ವಸತಿ ಗೃಹಗಳ ಕಟ್ಟಡ ಹಾಗೂ ಆರೋಗ್ಯ ಕ್ಷೇಮ ಕೇಂದ್ರಗಳ ನಿರ್ಮಾಣ. ಇಂಧನ ಇಲಾಖೆಯಿಂದ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕು ಮುಸ್ಟೂರು ಗ್ರಾಮದಲ್ಲಿ 110 ಎಂವಿಎ, 110/11 ಕೆವಿ ವಿದ್ಯುತ್ ಉಪ ಕೇಂದ್ರ ನಿರ್ಮಾಣ, ಕೃಷಿ ಇಲಾಖೆಯಿಂದ ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಕ್ಯಾಂಪ್‌ನಲ್ಲಿ ರೈತರ ವಸತಿ ನಿಲಯದ ಉದ್ಘಾಟನೆ ಜರುಗಲಿದೆ.