ಡಿಕೆಶಿ ಬಿಜೆಪಿಗೆ ಬಂದರೆ ಒಪ್ಪಲ್ಲ : ರಮೇಶ ಜಾರಕಿಹೊಳಿ

| N/A | Published : Nov 25 2025, 03:15 AM IST

Ramesh Jarkiholi
ಡಿಕೆಶಿ ಬಿಜೆಪಿಗೆ ಬಂದರೆ ಒಪ್ಪಲ್ಲ : ರಮೇಶ ಜಾರಕಿಹೊಳಿ
Share this Article
  • FB
  • TW
  • Linkdin
  • Email

ಸಾರಾಂಶ

 ಒಂದು ವೇಳೆ ಡಿ.ಕೆ.ಶಿವಕುಮಾರ ಬಿಜೆಪಿಗೆ ಬಂದರೆ ನಾನು ಒಪ್ಪಲ್ಲ. ಜೀವನದಲ್ಲಿ ಡಿಕೆಶಿಯನ್ನು ನಾನು ಒಪ್ಪುವ ಪ್ರಶ್ನೆಯೇ ಇಲ್ಲ. ಅಂತಹ ಸಂದರ್ಭ ಸೃಷ್ಟಿಯಾದರೆ, ಆಗ ದೇವರು ಏನು ಬುದ್ಧಿ ಕೊಡುತ್ತಾನೋ ನೋಡೋಣ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

 ಬೆಳಗಾವಿ : ಒಂದು ವೇಳೆ ಡಿ.ಕೆ.ಶಿವಕುಮಾರ ಬಿಜೆಪಿಗೆ ಬಂದರೆ ನಾನು ಒಪ್ಪಲ್ಲ. ಜೀವನದಲ್ಲಿ ಡಿಕೆಶಿಯನ್ನು ನಾನು ಒಪ್ಪುವ ಪ್ರಶ್ನೆಯೇ ಇಲ್ಲ. ಅಂತಹ ಸಂದರ್ಭ ಸೃಷ್ಟಿಯಾದರೆ, ಆಗ ದೇವರು ಏನು ಬುದ್ಧಿ ಕೊಡುತ್ತಾನೋ ನೋಡೋಣ ಎಂದು ಮಾಜಿ ಸಚಿವ ಹಾಗೂ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. 

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಯಾರನ್ನೂ ಬೇಕಾದರೂ ಸಿಎಂ ಮಾಡಲಿ. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಇವತ್ತಿನ ಸಂಘರ್ಷದಲ್ಲಿ ಬಿಜೆಪಿ ತಟಸ್ಥವಾಗಿ ಉಳಿಯಬೇಕು. ಕಾಂಗ್ರೆಸ್ ನಾಯಕರು ಬೇಕಾದರೆ ಕಚ್ಚಾಡಲಿ, ಬಡಿದಾಡಲಿ. ಅವರ ಹೊಲಸು ನಮ್ಮ ಮೈಮೇಲೆ ಹಾಕಿಕೊಳ್ಳಬಾರದು. ಪೂರ್ಣ ಪ್ರಮಾಣದ ಸರ್ಕಾರ ಅಧಿಕಾರಕ್ಕೆ ತರಲು ಚುನಾವಣೆಗೆ ಹೋಗುವುದು ಒಳ್ಳೆಯದು ಎಂದರು.

ನಂಬರ್ ಗೇಮ್‌ನಲ್ಲಿ ಬಹಳಷ್ಟು ವ್ಯತ್ಯಾಸ ಇದೆ

ಮಹಾರಾಷ್ಟ್ರ ಮಾದರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಆಗುತ್ತದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ಕರ್ನಾಟಕದಲ್ಲಿ ಆ ರೀತಿ ಆಗುವ ಪ್ರಶ್ನೆ ಬರಲ್ಲ. ನಂಬರ್ ಗೇಮ್‌ನಲ್ಲಿ ಬಹಳಷ್ಟು ವ್ಯತ್ಯಾಸ ಇದೆ. ಡಿ.ಕೆ.ಶಿವಕುಮಾರ ಕಡೆ ಶಾಸಕರ ಸಂಖ್ಯೆ ಬಹಳ ಕಡಿಮೆ ಇದೆ. ಸುಮ್ಮನೇ ಟಿವಿಯಲ್ಲಿ ಅಷ್ಟು ಇಷ್ಟು ಅಂತಾ ತೋರಿಸುತ್ತಿದ್ದಾರೆ. 50 ಶಾಸಕರನ್ನು ತೋರಿಸಿದರೆ ಇವತ್ತೆ ಡಿ.ಕೆ.ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡೋಣ ಸವಾಲು ಹಾಕಿದರು.

ರಾಜ್ಯ ಬಿಜೆಪಿಯಲ್ಲಿ ಡಿಸೆಂಬರ್‌ನಲ್ಲಿ ಕ್ರಾಂತಿ ಆಗುತ್ತಾ ಎಂಬ ಮಾಧ್ಯಮಗಳ ಪ್ರಶ್ನೆ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ನಾವು ಏನು ಹೇಳಬೇಕೋ ಅದನ್ನು ಪಕ್ಷದ ಚೌಕಟ್ಟಿನಲ್ಲಿ ಹೇಳಿದ್ದೇವೆ. ಹೇಗೆ ಡಿಕೆಶಿಯನ್ನು ನಾವು ಒಪ್ಪುವುದಿಲ್ಲವೋ, ವಿಜಯೇಂದ್ರನನ್ನು ಅದೇರೀತಿ ಒಪ್ಪಲ್ಲ ಎಂದು ಸ್ಪಷ್ಟಪಡಿಸಿದರು.

ಸಮ್ಮಿಶ್ರ ಸರ್ಕಾರ ಪತನ ಆಗಲು ಮೂಲಕಾರಣ ಡಿ.ಕೆ.ಶಿವಕುಮಾರ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿ, ದೇವೇಗೌಡರು ಹಿರಿಯ ನಾಯಕರು. ಪ್ರಧಾನಮಂತ್ರಿ ಆಗಿದ್ದವರು. ಅವರ ಮಾತಿಗೆ ನಾನು ಕೌಂಟರ್ ಕೊಡಲು ಆಗುವುದಿಲ್ಲ. ಯಾವ ದೃಷ್ಟಿಕೋನದಿಂದ ದೇವೇಗೌಡರು ಹೇಳಿದ್ದಾರೋ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರ ಪತನ ಆಗಲು ಮೂಲಕಾರಣ ಡಿ.ಕೆ.ಶಿವಕುಮಾರ. ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ನಾನೇ ಮುಂಚೂಣಿಯಲ್ಲಿ ನಿಂತು ಸರ್ಕಾರ ಕೆಡವಿದೆ. 

ನನ್ನ ಜೊತೆಗೆ ಮಿತ್ರ ಮಂಡಳಿ ಕೂಡ ಇತ್ತು. ಈಗ ಏನಾಗುತ್ತೋ ಗೊತ್ತಿಲ್ಲ ಎಂದು ಹೇಳಿದರು.2004-05ರಲ್ಲಿ ಸಿದ್ದರಾಮಯ್ಯ, ಸತೀಶ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ ಸೇರಿ ಪಕ್ಷಾತೀತವಾಗಿ ನಾನು ಕೂಡ ಅಹಿಂದ ಸಂಘಟನೆಗೆ ಬೆಂಬಲ ನೀಡಿದ್ದೆ. ಆ ಸಂಘಟನೆ ಮೂಲಕವೇ ಇಂದು ಹಿಂದುಳಿದ ವರ್ಗದ ಸಿದ್ದರಾಮಯ್ಯ ರಾಜ್ಯದಲ್ಲಿ ಮುಖ್ಯಮಂತ್ರಿ, ದಲಿತ ಸಮುದಾಯದ ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ, ಪರಮೇಶ್ವರ ಗೃಹ ಸಚಿವ, ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇಷ್ಟಿದ್ದರೂ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗಿದೆ. ಹಾಗಾಗಿ, ಹಿಂದುಳಿದ, ದಲಿತ ಸಮುದಾಯದ ರಕ್ಷಣೆಗೆ ಕೇಂದ್ರ ಸರ್ಕಾರ ಮತ್ತು ನ್ಯಾಯಾಲಯ ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಜೊತೆಗೆ ನಮ್ಮ ಸಮಾಜದ ಸ್ವಾಮೀಜಿ, ಮುಖಂಡರ ಜೊತೆಗೆ ಮಾತನಾಡಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಇದನ್ನು ಇಷ್ಟಕ್ಕೆ ಬಿಡಲ್ಲ. ಅಧಿವೇಶನದಲ್ಲೂ ಗಲಾಟೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು. 

ಈ ಹಿಂದೆ ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾದಾಗ ಪಾದಯಾತ್ರೆ ಮಾಡಲು ಅನುಮತಿ ಕೇಳಿದ್ದೆ. ನಾವು ಸರಿಯಾಗಿ ಮನವರಿಕೆ ಮಾಡಿಕೊಡಲು ಆಗದ ಹಿನ್ನೆಲೆಯಲ್ಲಿ ಹೈಕಮಾಂಡ್ ಪಾದಯಾತ್ರೆಗೆ ಅವಕಾಶ ನೀಡಿರಲಿಲ್ಲ. ಮುಂದಿನ‌ ವಾರ ದೆಹಲಿಗೆ ಹೋಗಿ ಅಮಿತ್ ಶಾ, ಜೆ.ಪಿ‌‌.ನಡ್ಡಾ ಅವರನ್ನು ಭೇಟಿಯಾಗಿ ವಾಲ್ಮೀಕಿ ಸಮಾಜಕ್ಕೆ ಅನ್ಯಾಯ ಆಗಿದೆ. ಹಾಗಾಗಿ, ತಾವು ಇದರಲ್ಲಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು. 

ಉತ್ತರ ಕರ್ನಾಟಕ‌ ಪ್ರತ್ಯೇಕ ರಾಜ್ಯ ರಚನೆಗೆ ನಮ್ಮ ಬೆಂಬಲ ಇಲ್ಲ. ಅಖಂಡ ಕರ್ನಾಟಕಕ್ಕೆ ನನ್ನ ಬೆಂಬಲ. ಕೇವಲ ಮಂತ್ರಿ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಬೇಕು ಅಂತಾ ಹೇಳಿದರೆ ಅಭಿವೃದ್ಧಿ ಹೇಗೆ ಆಗಬೇಕು? ಇನ್ನು ಗೋಕಾಕ್ ಜಿಲ್ಲೆ ಆಗಬೇಕು ಎಂಬುದು ನನ್ನ ಆಗ್ರಹವಾಗಿದೆ ಎಂದು ಹೇಳಿದರು. 

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನನ್ನ ಅವಶ್ಯಕತೆ ಇಲ್ಲ. ಅಲ್ಲಿ ಜನರೆ ಅವರನ್ನು ಕೆಡವುತ್ತಾರೆ. ಅಥಣಿಯಲ್ಲಿ ನನ್ನ ಅವಶ್ಯಕತೆ ಇದೆ. ಹಾಗಾಗಿ, ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಇನ್ನು ಲಕ್ಷ್ಮಣ ಸವದಿ ಸಚಿವ ಸ್ಥಾನ ಸಿಕ್ಕರೆ ಸ್ವಾಗತಿಸುತ್ತೇನೆ. ಅದರಲ್ಲಿ ಹೊಟ್ಟೆಕಿಚ್ಚು ಪಟ್ಟರೆ ಮೂರ್ಖ ಅಂತಾರೆ ಎಂದು ತಿಳಿಸಿದರು.

ರಾಜ್ಯದ ಹಿತದೃಷ್ಟಿಯಿಂದ ಸದ್ಯ ಯಾರು ಮುಖ್ಯಮಂತ್ರಿ ಆಗಬೇಕು ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನೇ ಮುಖ್ಯಮಂತ್ರಿ ಆಗಬೇಕು ಎನ್ನುತ್ತೇನೆ ಎಂದು ಹಾಸ್ಯಚಟಾಕಿ ಹಾರಿಸಿದ ರಮೇಶ, ಯಾವಾಗ ಕ್ಲೇಮ್ ಮಾಡಬೇಕು ಎಂಬುದನ್ನು ಮುಂದೆ ಯೋಚಿಸುತ್ತೇನೆ ಎಂದ ಅವರು, ಕುರುಬ ಸಮಾಜ ಎಸ್ಟಿಗೆ ಸೇರಿಸಲು ನನ್ನ ಸ್ವಾಗತ ಇದೆ. ಆದರೆ, ಅದಕ್ಕೆ ತಕ್ಕ ಹಾಗೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು.

ಅ.19ರಂದು ಡಿಸಿಸಿ ಬ್ಯಾಂಕ್ ಚುನಾವಣೆ ದಿನ ರಮೇಶ ಕತ್ತಿ ಅವರು ವಾಲ್ಮೀಕಿ ಸಮಾಜದ ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದ್ದರು. ಇದು ರಾಜ್ಯಾದ್ಯಂತ ಚರ್ಚೆ ಆಗಿತ್ತು. ಆ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಆ ವಿಚಾರದಲ್ಲಿ ಕಾನೂನು ಹೋರಾಟ ನಡೆಯುತ್ತಿದೆ. ಅದು ಮುಂದೆ ಏನಾಗುತ್ತದೆ ನನಗೆ ಗೊತ್ತಿಲ್ಲ. ಆದರೆ, ದುರ್ದೈವದ ಸಂಗತಿ ಎಂದರೆ ಎರಡ್ಮೂರು ದಿನಗಳ ಹಿಂದೆ ಇದೇ ಪ್ರಕರಣ ಸಂಬಂಧ ಹುಕ್ಕೇರಿ ಗ್ರೆಡ್- 2 ತಹಶೀಲ್ದಾರ ವಾಲ್ಮೀಕಿ ಸಮಾಜ ಎಸ್ಟಿಗೆ ಬರಲ್ಲ ಎಂದು ನ್ಯಾಯಾಲಯಕ್ಕೆ ಬರೆದುಕೊಟ್ಟಿದ್ದಾರೆ. 

ಇದು ದೊಡ್ಡ ದುರಂತ. ಇದನ್ನು ರಮೇಶ ಕತ್ತಿ ಮಾಡಿಸಿದ್ದಾರೋ, ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಅದನ್ನು ತನಿಖೆ ಮಾಡಬೇಕು. ತಕ್ಷಣ ಹುಕ್ಕೇರಿ ಗ್ರೇಡ್-2 ತಹಶೀಲ್ದಾರ್ ಅಮಾನತು ಮಾಡಿ, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

Read more Articles on