ಕಾವ್ಯ ಹುಟ್ಟುವುದು ಬದುಕಿನ ಅನುಭವದಿಂದ. ಅದಕ್ಕೆ ಪ್ರತಿಭೆ ಮತ್ತು ಪರಿಶ್ರಮ ಎರಡು ಅಗತ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ಕಾವ್ಯ ಹುಟ್ಟುವುದು ಬದುಕಿನ ಅನುಭವದಿಂದ. ಅದಕ್ಕೆ ಪ್ರತಿಭೆ ಮತ್ತು ಪರಿಶ್ರಮ ಎರಡು ಅಗತ್ಯ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ತಿಳಿಸಿದ್ದಾರೆ. ಕನ್ನಡ ಭವನದಲ್ಲಿ ಶೈನಾ ಅಧ್ಯಯನ ಸಂಸ್ಥೆ ತುಮಕೂರು ವತಿಯಿಂದ ಆಯೋಜಿಸಿದ್ದ ಡಾ.ಬಿ.ಸಿ.ಶೈಲಾನಾಗರಾಜು ಅವರ ಕವಿಸಮಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.ಕವಿ ತನ್ನ ಅನುಭವದ ಜೊತೆಗೆ, ಜಗತ್ತಿನ ಅನುಭವವನ್ನು ಕವಿತೆಗಳನ್ನು ಕಟ್ಟಿಕೊಟ್ಟಾಗ ಮಾತ್ರ ಜನಮಾನಸದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯ ಎಂದರು. ಕಾವ್ಯ ಎಂಬುವುದಕ್ಕೆ ಇದುವರೆಗೂ 20-30 ಸಾವಿರ ವ್ಯಾಖ್ಯಾನಗಳಿವೆ. ಅಲ್ಲದೆ ಕೆಲ ಕವಿಗಳು ತಮ್ಮ ಕವಿತೆಗಳೇನು ಏನನ್ನು ಹೇಳ ಬಯಸುತ್ತವೆ ಎಂಬುದನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಕವಿ ಏಕಾಂಗಿ, ಆದರೆ ಆತನ ಕವಿತೆಗಳು ಜನರಿಗಾಗಿ ರಚಿಸಲ್ಪಡುತ್ತವೆ. ಹಾಗಾಗಿ ಕವಿ ಸಾವಿಗೀಡಾದರೂ, ಕವಿತೆ ಮರು ಹುಟ್ಟು ಪಡೆಯುತ್ತಲೇ ಹೋಗುತ್ತದೆ ಎಂದು ಹಲವು ಹಿರಿಯ ಕವಿಗಳ ಕವಿತೆಗಳನ್ನು ಉದಾಹರಿಸುವ ಮೂಲಕ ವಿವರಿಸಿದರು.
ಷೇಕ್ಸ್ ಪಿಯರ್ ಗಿಂತ ಕನ್ನಡದ ಕುಮಾರವ್ಯಾಸ ದೊಡ್ಡ ಕವಿ. ಕುಮಾರವ್ಯಾಸನನ್ನು ನಾವು ನಮ್ಮ ಅಡುಗೆ ಮನೆಗೂ ತಂದುಕೊಳ್ಳಲಿಲ್ಲ. ಕವಿಗಳಲ್ಲಿಯೇ ಭಿನ್ನತೆ ಇದೆ. ನವ್ಯ, ನವ್ಯೋದಯ, ಪ್ರಗತಿಶೀಲ, ದಲಿತ, ಬಂಡಾಯ ಹೀಗೆ ಹಲವು ಪ್ರಕಾರಗಳಿವೆ. ಅವರ ರಚನಾ ಕ್ರಮದಲ್ಲಿಯೇ ಭಿನ್ನತೆ ಇದೆ.ಆದರೆ ಎಲ್ಲರ ಹಾದಿ ಜನರಲ್ಲಿ ಜಾಗೃತಿ, ಅರಿವು ಮೂಡಿಸುವುದೇ ಆಗಿದೆ. ಶೈಲಾ ನಾಗರಾಜು ಅವರ ಕವಿ ಸಮಯ ಕೃತಿ ಯುವ ಕವಿಗಳಿಗೆ ಕಾವ್ಯ ಎಂದರೇನು ಎಂದು ಜಾಗೃತಿ ಮೂಡಿಸುವ ಕಾವ್ಯ ವಿಮಾಂಸೆಯಾಗಿದೆ ಎಂದು ಡಾ.ಎಲ್.ಎನ್.ಮುಕುಂದರಾಜ್ ನುಡಿದರು.ಕವಿಸಮಯ ಕೃತಿ ಕುರಿತು ಮಾತನಾಡಿದ ಕನ್ನಡ ಪ್ರಾಧ್ಯಾಪಕಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷೆ ಡಾ.ಆಶಾ ಬಗ್ಗನಡು, ಡಾ.ಶೈಲಾ ನಾಗರಾಜು ಅವರ ಕವಿ ಸಮಯ ಕಾವ್ಯದಲ್ಲಿ ಕಾವ್ಯ ಎನ್ನುವುದು ಧ್ಯಾನ.ಅದನ್ನು ಸಿದ್ದಿಸಿಕೊಂಡರೇ ಕವಿಯಾಗಿ ಜನ ಮಾನಸದಲ್ಲಿ ಉಳಿಯಬಹುದಾಗಿದೆ. ಕಾವ್ಯವೆಂಬುದು ಕತ್ತಲೆಯ ನಡುವಿನ ಬೆಳಕು ಇದ್ದಂತೆ.ಇಂತಹ ಸಂದಿಗ್ಧ ಸಮಯದಲ್ಲಿ ಬೆಳಕಿನ ಕೊರತೆ ಎದ್ದು ಕಾಣುತ್ತಿದೆ.ಸುಳ್ಳೇ ಸಂಭ್ರಮಿಸುತ್ತಿರುವ ಈ ಕಾಲದಲ್ಲಿ ಸತ್ಯವೆಂಬ ಬೆಳಕು ಕವಿತೆಯ ಮೂಲಕ ಚೆಲ್ಲುವ ಕೆಲಸ ಆಗಬೇಕಿದೆ ಎಂದರು.
ಕವಿ ಸಮಯದ ಕೃತಿಕಾರರಾದ ಡಾ.ಬಿ.ಸಿ.ಶೈಲಾ ನಾಗರಾಜು ಮಾತನಾಡಿ, ಕಾವ್ಯ ಮನಸ್ಸಿಗೆ ಸಂತೋಷ ಉಂಟು ಮಾಡುವುದಷ್ಟೇ ಅಲ್ಲ, ಸಾಂತ್ವನ ನೀಡುವುದಾಗಿದೆ. ಕಾವ್ಯದ ಮೂಲಕ ಎಲ್ಲರನ್ನು ತಲುಪಬಹುದು ಎಂಬುದಕ್ಕೆ ನನ್ನ ತಂಗಿ ಕೇಳವ ಕವನ ಸಂಕಲನ.ಮಹಿಳಾ ಹೋರಾಟದ ಗೀತೆಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಳಸಿಕೊಂಡಿದೆ. ನನ್ನ ಕವಿ ಸಮಯ ಪುಸ್ತಕ ಹೊಸ ಬರಹಗಾರರಿಗೆ ಮಾರ್ಗದರ್ಶನ ಮಾಡುವಂತಹ ಕಾವ್ಯ ವಿಮಾಂಸೆಯಾಗಲಿದೆ ಎಂಬುದು ಹಿರಿಯರ ಅಭಿಪ್ರಾಯವಾಗಿದೆ. ಇದು ನನಗೆ ಬಹಳ ಸಂತೋಷದ ಸಮಯವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿದರು. ಈ ವೇಳೆ ಅಬ್ಬಿನಹೊಳೆ ಸುರೇಶ್, ಪಿ.ಜಿ.ಶಕುಂತಲ, ವೆನ್ನಲಕೃಷ್ಣ, ನಿರ್ಮಲ ಗೂಳೂರಿವೆ, ಚಂದ್ರಕಲಾ, ನರೇಂದ್ರಬಾಬು, ದೊಂಬರನಹಳ್ಳಿ ನಾಗರಾಜ್,ಸಂಚಾಲಕಿ ಎಂ.ಪ್ರವೀಣ,ಮಾಧುರ್ಯ, ಜಿ.ಯಶೋಧ ಮತ್ತಿತರರು ಉಪಸ್ಥಿತರಿದ್ದರು.
