ಸಾರಾಂಶ
ತುಮಕೂರು : ಮಕ್ಕಳು ಕಲಿಕೆಯಲ್ಲಿ ಹಿಂದುಳಿದರೆ ಶಿಕ್ಷಕರನ್ನೇ ನೇರ ಹೊಣೆ ಮಾಡಿ ಅವರ ವೇತನ ಬಡ್ತಿ ಕಡಿತಗೊಳಿಸುವ ಎಚ್ಚರಿಕೆಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನೀಡಿದ್ದಾರೆ.
ಕಳೆದ ಜುಲೈ 8 ಹಾಗೂ 9ರಂದು ನಡೆದ ಮುಖ್ಯಮಂತ್ರಿಗಳ ಸಭೆಯಲ್ಲಿ ಚರ್ಚಿಸಿದ ವಿಷಯಗಳ ಬಗ್ಗೆ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯ ವಿವಿಧ ಶಾಲೆಗಳಿಗೆ ತಾವು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಕ್ಕಳು ಕಲಿಕೆಯಿಂದ ಹಿಂದುಳಿದಿರುವುದು ತಿಳಿದು ಬಂದಿದೆ ಎಂದರು.ಮಕ್ಕಳು ಕನ್ನಡ ಅಕ್ಷರಗಳನ್ನೇ ಗುರುತಿಸಲು ಕಷ್ಟಪಡುತ್ತಿದ್ದಾರೆ.
ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಅವರಿಗೆ ಪ್ರಾಥಮಿಕ ಶಾಲಾ ಹಂತದಲ್ಲಿ ಗುಣಮಟ್ಟದ ಶಿಕ್ಷಣ ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಮಯವನ್ನು ಸಭೆಗಳಿಗೆ ವ್ಯರ್ಥ ಮಾಡದೆ ಶಾಲೆಗಳಿಗೆ ತೆರಳಿ ಮಕ್ಕಳ ಕಲಿಕೆಯ ಬಗ್ಗೆ ಪರಿಶೀಲನೆ ನಡೆಸಿ ಮಕ್ಕಳ ಕಲಿಕಾಸಕ್ತಿಯನ್ನು ಹೆಚ್ಚಿಸಬೇಕೆಂದು ನಿರ್ದೇಶನ ನೀಡಿದರು.ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ವಾರದಲ್ಲಿ 5 ದಿನ ಕಡ್ಡಾಯವಾಗಿ ಭೇಟಿ ನೀಡಿ ಮಕ್ಕಳ ಹಾಜರಾತಿ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಓದಿನಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಗಮನ ನೀಡಬೇಕೆಂದರಲ್ಲದೆ, ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶವನ್ನು ಉತ್ತಮಗೊಳಿಸಲು ಶಿಕ್ಷಕರು ಶ್ರಮಿಸಬೇಕು ಎಂದು ಸೂಚನೆ ನೀಡಿದರು. ಯೋಜನೆ ಅನುಷ್ಠಾನ ಇಲಾಖೆಗಳು ವಿವಿಧ ಯೋಜನೆಗಳಡಿ ವರ್ಷಾಂತ್ಯದವರೆಗೂ ಕಾಯದೆ ಫಲಾನುಭವಿಗಳನ್ನು ಆಗಸ್ಟ್ ೩೧ರೊಳಗೆ ಆಯ್ಕೆ ಮಾಡಬೇಕೆಂದರಲ್ಲದೆ, ಉಳಿದಂತೆ ಸಭೆಯಲ್ಲಿ ಮಣ್ಣು ಪರೀಕ್ಷೆ, ಕುಡಿಯುವ ನೀರಿನ ಪರೀಕ್ಷೆ, ನರೇಗಾ ಯೋಜನೆ, ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ಸಂಗ್ರಹಣೆ, ಸ್ವಚ್ಛ ಭಾರತ್ ಮಿಷನ್, ಆರೋಗ್ಯ ಕ್ಷೇಮ ಕೇಂದ್ರ, ನಮ್ಮ ಕ್ಲಿನಿಕ್, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಪೌತಿ ಖಾತೆ ಆಂದೋಲನ, ಜಲಜೀವನ್ ಮಿಷನ್ ಸೇರಿದಂತೆ ಮತ್ತಿತರ ಸರ್ಕಾರಿ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿ ನಿಗದಿತ ಕಾಲಾವಧಿಯೊಳಗೆ ಪ್ರಸಕ್ತ ವರ್ಷದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಪ್ರಗತಿ ಸಾಧಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಪಾಲಿಕೆ ಆಯುಕ್ತ ಬಿ.ವಿ.ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಸೇರಿದಂತೆ ಉಪವಿಭಾಗಾಧಿಕಾರಿಗಳು, ವಿವಿಧ ತಾಲೂಕು ತಹಶೀಲ್ದಾರರು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.