ರಾಜ್ಯದಲ್ಲಿ ಉತ್ತಮ ಮಳೆ : ಅತಿವೃಷ್ಟಿ ಪ್ರವಾಹ ನಿರ್ವಹಣೆಗೆ ಗ್ರಾ.ಪಂ. ಮಟ್ಟದಲ್ಲಿ ಟಾಸ್ಕ್‌ಪೋರ್ಸ್‌

| Published : Jul 20 2024, 01:47 AM IST / Updated: Jul 20 2024, 09:13 AM IST

ರಾಜ್ಯದಲ್ಲಿ ಉತ್ತಮ ಮಳೆ : ಅತಿವೃಷ್ಟಿ ಪ್ರವಾಹ ನಿರ್ವಹಣೆಗೆ ಗ್ರಾ.ಪಂ. ಮಟ್ಟದಲ್ಲಿ ಟಾಸ್ಕ್‌ಪೋರ್ಸ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದಾಗುವ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಟಾಸ್ಕ್‌ಪೋರ್ಸ್‌ ರಚನೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

 ವಿಧಾನಸಭೆ :  ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅತಿವೃಷ್ಟಿಯಿಂದಾಗುವ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಟಾಸ್ಕ್‌ಪೋರ್ಸ್‌ ರಚನೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ಸದನದಲ್ಲಿ ಮಳೆ ಹಾನಿ ಕುರಿತ ಚರ್ಚೆಗೆ ಉತ್ತರ ನೀಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಮಸ್ಯೆಗೊಳಗಾಗುವ 2,225 ಗ್ರಾಮಗಳನ್ನು ಗುರುತಿಸಲಾಗಿದೆ. 1247 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಗ್ರಾಮಗಳಿದ್ದು, 2.38 ಲಕ್ಷ ಜನರು ಸಮಸ್ಯೆಗೆ ಸಿಲುಕುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಳೆಯಿಂದ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಟಾಸ್ಕ್‌ ಪೋರ್ಸ್‌ ರಚನೆ ಮಾಡಲಾಗಿದೆ.

 ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್‌ ಅಧಿಕಾರಿಯನ್ನಾಗಿ ಮಾಡಿ ಅಗತ್ಯ ಹಣ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು. ಬೆಳಗಾವಿ ಹಾಗೂ ಮಲೆನಾಡು ಸೇರಿದಂತೆ ಪ್ರವಾಹ ಉಂಟಾಗುವ ಆರು ಜಿಲ್ಲೆಗಳಲ್ಲಿ ಎನ್‌ಡಿಆರ್‌ಎಫ್‌ನ ಐದು ತುಕಡಿಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಇನ್ನು, ರಾಜ್ಯದಲ್ಲಿ ಮಳೆ ಹಾನಿ ಪರಿಹಾರಕ್ಕಾಗಿ ಜಿಲ್ಲೆಗಳಿಗೆ 774.5 ಕೋಟಿ ರೂ. ಒದಗಿಸಲಾಗಿದ್ದು, 29 ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. ಮಳೆಹಾನಿ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಅಗತ್ಯವಿದ್ದರೆ 100 ರಿಂದ 200 ಕೋಟಿ ರೂ. ಒದಗಿಸಲು ಸಿದ್ಧರಿದ್ದೇವೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 10 ಕೋಟಿ ರೂ.ಗಿಂತ ಕಡಿಮೆಯಾದ ಕೂಡಲೇ ಹಣ ಬಿಡುಗಡೆ ಮಾಡುತ್ತೇವೆ ಎಂದರು. 

ವಾಡಿಕೆಗಿಂತ ಹೆಚ್ಚು ಮಳೆ:

ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುತ್ತಿದೆ. ಹೀಗಾಗಿ, ಕೆಲವಡೆ ಅತಿವೃಷ್ಠಿಯಾಗಿದ್ದು, ರಸ್ತೆ, ಸೇತುವೆ, ಮನೆ, ಬೆಳೆ, ವಿದ್ಯುತ್ ಸಂಪರ್ಕಕ್ಕೆ ಹಾನಿ ಉಂಟಾಗಿದೆ. ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ಕಷ್ಟ ನಿವಾರಣೆಗೆ ಸರ್ಕಾರ ಸಿದ್ಧವಿದೆ. ಮಳೆ ಹಾನಿಯಿಂದ ಹಾಳಾದ ಮನೆಗಳಿಗೆ ಮನೆ ಮಂಜೂರು ಮಾಡಿ, ಬೆಳೆಹಾನಿಗೂ ಪರಿಹಾರ ನೀಡಲು ಸೂಚಿಸಲಾಗಿದೆ. ಈ ವರ್ಷ ಜಲಾಶಯಗಳಲ್ಲಿ ಶೇ.60ರಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಕೇವಲ 243 ಟಿಎಂಸಿ ನೀರು ಇತ್ತು. ಈ ಬಾರಿ 536 ಟಿಎಂಸಿ ನೀರು ಸಂಗ್ರಹವಾಗಿದೆ. ಪ್ರತಿ ನದಿಯಲ್ಲೂ ಸ್ವಾಭಾವಿಕ ಮಟ್ಟ, ಅಪಾಯದ ಮಟ್ಟ ಗುರುತಿಸಿ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

 ಅಂಕೋಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿರುವುದಕ್ಕೆ ವೈಜ್ಞಾನಿಕ ಹೆದ್ದಾರಿ ವಿನ್ಯಾಸವೇ ಕಾರಣವಾಗಿದೆ. ಅದನ್ನು ಸರಿಪಡಿಸುವಂತೆ ಮುಖ್ಯಕಾರ್ಯದರ್ಶಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತನಾಡಿದ್ದಾರೆ. ಸಕಲೇಶಪುರ ಮತ್ತು ಕೊಡಗಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾತ್ರಿ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ನಡುವೆ, ಕಡಲ ಕೊರೆತ ತಡೆಯಲು ಮೀನುಗಾರಿಕೆ ಇಲಾಖೆಯಿಂದ ವಿಶೇಷ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

 ಕಿವೀಲಿ ಹೂ ಮುಡಿದು ವಿರೋಧ

ಮಳೆಯಿಂದಾಗುವ ಅನಾಹುತ ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸದನಕ್ಕೆ ಮಾಹಿತಿ ನೀಡುತ್ತಿದ್ದರೆ, ಪ್ರತಿಪಕ್ಷ ಬಿಜೆಪಿ ಸದಸ್ಯರು ಕಿವಿಲಿ ಹೂ ಮುಡಿದು ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಸರ್ಕಾರ ಕೈಗೊಂಡಿರುವ ಕ್ರಮಗಳೆಲ್ಲಾ ಸುಳ್ಳಾಗಿದ್ದು, ಸಚಿವರು ಹೂ ಮುಡಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಭಾಧ್ಯಕ್ಷ ಯು.ಟಿ.ಖಾದರ್‌ ಪೀಠದ ಬದಿಯಲ್ಲಿಟ್ಟ ಹೂಕುಂಡದಲ್ಲಿನ ಹೂಗಳನ್ನು ತೆಗೆದುಕೊಂಡು ಬಿಜೆಪಿ ಸದಸ್ಯರು ಕಿವಿಗೆ ಮುಡಿದು ಸಚಿವರ ಉತ್ತರವನ್ನು ಟೀಕಿಸಿದರು. ಇದೇ ವೇಳೆ ಸಭಾಧ್ಯಕ್ಷರು ಹೂಕುಂಡವನ್ನು ಅಲ್ಲಿಂದ ತೆಗೆಸಿ ಬೇರೆಡೆ ಇರಿಸಿದರು.