ಸಾರಾಂಶ
ಸಿದ್ದಾಪುರ: ಭೌಗೋಳಿಕವಾಗಿ ಸಿದ್ದಾಪುರ ತಾಲೂಕು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಭಾಗದ ಜನಪ್ರತಿನಿಧಿಗಳು ಆದಷ್ಟು ಬೇಗ ಎಚ್ಚೆತ್ತು ಶಿರಸಿ ಜಿಲ್ಲೆ ಆಗುವಲ್ಲಿ ಪ್ರಯತ್ನಿಸಬೇಕು. ಈ ಕುರಿತ ಪ್ರಕ್ರಿಯೆಗೆ ಒಂದು ತಿಂಗಳ ಅವಕಾಶ ನೀಡುತ್ತಿದ್ದೇವೆ. ಇಲ್ಲವಾದಲ್ಲಿ ಪ್ರತ್ಯೇಕ ಸಾಗರ ಜಿಲ್ಲೆ ಹೋರಾಟಕ್ಕೆ ಬೆಂಬಲಿಸಿ ಸಿದ್ದಾಪುರ ತಾಲೂಕನ್ನು ಅದಕ್ಕೆ ಸೇರ್ಪಡೆಗೊಳಿಸಲು ಹೋರಾಟ ನಡೆಸಲು ಇಂದಿನ ಜನಾಭಿಪ್ರಾಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಾಮಾಜಿಕ ಮುಖಂಡ ವಸಂತ ನಾಯ್ಕ ಮನ್ಮನೆ ತಿಳಿಸಿದರು.
ಅವರು ಶನಿವಾರ ಪಟ್ಟಣದ ಬಾಲಭವನದಲ್ಲಿ ನಡೆದ ಉದ್ದೇಶಿತ ಸಾಗರ ಜಿಲ್ಲೆಗೆ ಸಿದ್ದಾಪುರ ತಾಲೂಕನ್ನು ಸೇರ್ಪಡೆಗೊಳಿಸುವ ಕುರಿತಾದ ಜನಾಭಿಪ್ರಾಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.ಸಿದ್ದಾಪುರ ತಾಲೂಕಿನ ಜನತೆ ಅರಣ್ಯ ಅತಿಕ್ರಮಣದಾರರ ಸಮಸ್ಯೆ, ಕಂದಾಯ ಇಲಾಖೆ ಸಮಸ್ಯೆ ಮುಂತಾಗಿ ಹಲವು ಕಾರಣಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ಪ್ರತ್ಯೇಕ ಶಿರಸಿ ಜಿಲ್ಲೆ ಕುರಿತಂತೆ ಹೋರಾಟ ನಡೆಯುತ್ತಾ ಬಂದಿದ್ದರೂ ಈವರೆಗೆ ಕಾರ್ಯಗತವಾಗಿಲ್ಲ. ಸಿದ್ದಾಪುರ ತಾಲೂಕನ್ನು ಒಳಗೊಂಡು ಸಾಗರ ಜಿಲ್ಲೆ ಮಾಡುವ ಕುರಿತು ಪ್ರಯತ್ನ ನಡೆಯುತ್ತಿವೆ. ಈ ಬಗ್ಗೆ ಜನಾಭಿಪ್ರಾಯ ಪಡೆಯಲು ಕರೆಯಲಾದ ಸಭೆಯಲ್ಲಿ ಹಿರಿಯರು, ಹಲವು ಮುಖಂಡರು ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಬಹುತೇಕರು ಆದಷ್ಟು ಶೀಘ್ರವಾಗಿ ಶಿರಸಿ ಜಿಲ್ಲೆಯಾಗಬೇಕು. ಇಲ್ಲವಾದರೆ ಸಾಗರ ಜಿಲ್ಲೆ ಸೇರ್ಪಡೆಗೆ ಅನುವಾಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕ್ಷೇತ್ರದ ಶಾಸಕರು ತಕ್ಷಣ ಜನಾಭಿಪ್ರಾಯ ಸಂಗ್ರಹಿಸಿ ಶಿರಸಿ ಜಿಲ್ಲೆಗೆ ಪ್ರಯತ್ನಿಸಬೇಕು. ಒಂದು ತಿಂಗಳಲ್ಲಿ ಪ್ರಕ್ರಿಯೆ ಆಗದಿದ್ದರೆ ಸಾಗರ ಜಿಲ್ಲೆ ಸೇರ್ಪಡೆಗೆ ಅವಕಾಶ ಮಾಡಿಕೊಡಬೇಕು. ನಂತರ ಸಿದ್ದಾಪುರದಿಂದ ಸಹಸ್ರಾರು ಮಂದಿ ಸಾಗರಕ್ಕೆ ಹೋಗಿ ಅಲ್ಲಿನ ಎಸಿಯವರ ಮುಖಾಂತರ ಸಾಗರ ಜಿಲ್ಲೆಗೆ ಸಿದ್ದಾಪುರ ತಾಲೂಕನ್ನು ಸೇರ್ಪಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದ್ದೇವೆ ಎಂದರು.
ಈ ತಾಲೂಕಿನಲ್ಲಿ ಜನರ ಬದುಕಿನ ಜೊತೆ ಅಧಿಕಾರಿಗಳು ಆಟ ಆಡುತ್ತಿದ್ದಾರೆ. ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಚಾಟಿ ಬೀಸಿ ಅವರು ಜನರ ಭಾವನೆಗೆ ಸ್ಪಂದಿಸುವಂತೆ ಕ್ರಮ ತೆಗೆದುಕೊಳ್ಳಬೇಕು. ಆದಷ್ಟು ಬೇಗ ಶಿರಸಿ ಜಿಲ್ಲೆ ಘೋಷಣೆ ಮಾಡಲಿ. ಅದಾಗದಿದ್ದರೆ ಸಾಗರ ಜಿಲ್ಲೆ ಸೇರ್ಪಡೆಗೆ ಯಾವುದೇ ಅಡೆ-ತಡೆ ಮಾಡಬಾರದು ಎಂದರು.ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ ಅವರನ್ನು ಹೋರಾಟ ಸಮಿತಿಯ ತಾತ್ಕಾಲಿಕ ಅಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು.
ವೀರಭದ್ರ ನಾಯ್ಕ ಮಾತನಾಡಿ, ಬಹುಜನರ ಅಭಿಪ್ರಾಯ ಸಾಗರ ಜಿಲ್ಲೆಗೆ ಸಿದ್ದಾಪುರ ತಾಲೂಕು ಸೇರ್ಪಡೆಯಾಗಲಿ ಎನ್ನುವುದಿದೆ. ಸರ್ಕಾರ ಶಿರಸಿ ಜಿಲ್ಲೆ ಮಾಡಲಿ, ಇಲ್ಲವಾದರೆ ಸಾಗರ ಜಿಲ್ಲೆ ಮಾಡಿ ಅದಕ್ಕೆ ಸಿದ್ದಾಪುರ ತಾಲೂಕು ಸೇರ್ಪಡೆಗೆ ಹೋರಾಟ ನಡೆಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಿ.ಆರ್.ನಾಯ್ಕ, ಲಕ್ಷ್ಮೀನಾರಾಯಣ ಹೆಗಡೆ, ಉಮೇಶ ನಾಯ್ಕ, ವಿಠ್ಠಲ ಅವರಗುಪ್ಪ, ಗಣೇಶ ನಾಯ್ಕ, ಗಾಂಧೀಜಿ ನಾಯ್ಕ ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಗೂ ಮುನ್ನ ನಡೆದ ಜನಾಭಿಪ್ರಾಯ ಸಭೆಯಲ್ಲಿ ಮುಖಂಡರಾದ ಕೆ.ಜಿ.ನಾಗರಾಜ, ಎಸ್.ಆರ್.ಹೆಗಡೆ ಕುಂಬಾರಕುಳಿ, ಸಿ.ಆರ್.ನಾಯ್ಕ, ಎನ್.ಟಿ.ನಾಯ್ಕ, ಉಮೇಶ ನಾಯ್ಕ ಕಡಕೇರಿ, ಜಯಪ್ರಕಾಶ ನಾಯ್ಕ ಹೆಗ್ಗಾರಕೈ,ನಾರಾಯಣ ನಾಯ್ಕ ಕೋಲಸಿರ್ಸಿ,ಕೆ.ಬಿ.ನಾಯ್ಕ ಬೇಡ್ಕಣಿ, ಲಕ್ಷ್ಮೀನಾರಾಯಣ ಹೆಗಡೆ ಮುಂತಾದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಜನರು ಪಾಲ್ಗೊಂಡಿದ್ದರು.