ಮಾಗಳಕ್ಕಿಲ್ಲ ಮಸಣ, ಹೆಣ ಹೂಳಲು ಜನ ಹೈರಾಣು

| Published : Sep 14 2025, 01:04 AM IST

ಸಾರಾಂಶ

ಮನುಷ್ಯನ ಜೀವಿತ ಅವಧಿಯ ಕೊನೆಯ ದಿನದ ಅಂತ್ಯಸಂಸ್ಕಾರಕ್ಕೂ ಅಂಗೈ ಅಗಲ ಜಾಗವಿಲ್ಲ, ಶವಗಳನ್ನು ರಸ್ತೆ ಮೇಲೆಯೇ ಸುಡುತ್ತಾರೆ, ಕಲುಷಿತ ನೀರು ಹರಿಯುವ ಚರಂಡಿ ಪಕ್ಕದಲ್ಲಿ ಹೆಣ ಹೂಳುತ್ತಾರೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಮನುಷ್ಯನ ಜೀವಿತ ಅವಧಿಯ ಕೊನೆಯ ದಿನದ ಅಂತ್ಯಸಂಸ್ಕಾರಕ್ಕೂ ಅಂಗೈ ಅಗಲ ಜಾಗವಿಲ್ಲ, ಶವಗಳನ್ನು ರಸ್ತೆ ಮೇಲೆಯೇ ಸುಡುತ್ತಾರೆ, ಕಲುಷಿತ ನೀರು ಹರಿಯುವ ಚರಂಡಿ ಪಕ್ಕದಲ್ಲಿ ಹೆಣ ಹೂಳುತ್ತಾರೆ.

ಇದು ಜಿಲ್ಲೆಯಲ್ಲೇ 2ನೇ ಅತಿ ದೊಡ್ಡ ಕಂದಾಯ ಗ್ರಾಮವಾದ ತಾಲೂಕಿನ ಮಾಗಳದ ದುಸ್ಥಿತಿ. ಇಲ್ಲಿ ಮಸಣವೇ ಇಲ್ಲ. ಕಳೆದ 2 ದಶಕಗಳಿಂದ ಸ್ಮಶಾನಕ್ಕೂ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಿಲ್ಲ, ಮೇಲಧಿಕಾರಿಗಳಿಂದ ಒಂದಿಷ್ಟು ಒತ್ತಡ ಬಂದಾಗ, ಸರ್ಕಾರಿ ಜಾಗ ಹುಡುಕಾಟ ನಡೆಸುವ ಅಧಿಕಾರಿಗಳು, ಈ ಗ್ರಾಮದಲ್ಲಿ ಸರ್ಕಾರಿ ಜಾಗವೇ ಇಲ್ಲ ಎಂದು ವರದಿ ಸಲ್ಲಿಸಿ ಕೈ ತೊಳೆದುಕೊಳ್ಳುತ್ತಾರೆ. ಮಾಗಳ ಸ್ಮಶಾನಕ್ಕೆ ಜಾಗ ಕೊಡಿಸಿ ಎಂದು ಶಾಸಕ ಕೃಷ್ಣನಾಯ್ಕ ಬಳಿ ಹೋಗಿ ಮನವಿ ಸಲ್ಲಿಸಿದ್ದರೂ ಈ ವರೆಗೂ ಪ್ರಯೋಜನವಾಗಿಲ್ಲ. ಈ ಹಿಂದಿನ ಎಲ್ಲ ಪಕ್ಷಗಳ ಶಾಸಕರಿಗೂ ಬೇಡಿಕೊಂಡರೂ ಫಲ ಸಿಕ್ಕಿಲ್ಲ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಸಿ ಹೋಗಿರುವ ಜನ ವಿಧಿ ಇಲ್ಲದೇ, ಸರ್ಕಸ್‌ ರೀತಿ ಕೆಸರು ನೀರು ದಾಟಿ ಹೋಗಿ ಶವ ಹೂಳುತ್ತಿದ್ದಾರೆ.

ತುಂಗಭದ್ರಾ ನದಿ ತೀರದಲ್ಲಿರುವ ಈ ಹಿಂದೆ 1 ಎಕರೆ ಭೂಮಿ ವೀರಶೈವ ರುದ್ರಭೂಮಿಗೆಂದು ಕಾಯ್ದಿರಿಸಲಾಗಿತ್ತು. ಅದು ಸಿಂಗಟಾಲೂರು ಏತ ನೀರಾವರಿ ಯೋಜನೆಯಲ್ಲಿ ಮುಳುಗಿ ಹೋಗಿದೆ. ಆದರೆ ಆ ಇಲಾಖೆಯ ಅಧಿಕಾರಿಗಳು ಪರಿಹಾರ ನೀಡಿಲ್ಲ. ಗ್ರಾಮಸ್ಥರು ಸೇರಿಕೊಂಡು ಮುಳುಗಡೆಯಾಗಿರುವ ರೈತರ 2 ಎಕರೆ ಜಮೀನಿನಲ್ಲಿ ಶವ ಹೂಳುತ್ತಿದ್ದಾರೆ. ಸಿಂಗಾಟಾಲೂರು ಏತ ನೀರಾವರಿ ಬ್ಯಾರೇಜ್‌ನಲ್ಲಿ ನೀರು ನಿಲುಗಡೆ ಹೆಚ್ಚು ಮಾಡಿದ್ದು, ಆ ಜಾಗದ ಸುತ್ತಲೂ ನೀರು ಸುತ್ತುವರೆದಿದೆ.

ಶವಗಳನ್ನು ಹೊತ್ತುಕೊಂಡು ನಡುಮಟ್ಟದ ವರೆಗೂ ಕೆಸರಿನಲ್ಲಿ ಹೋಗಬೇಕು, ಆಯಾ ತಪ್ಪಿದರೇ ಶವಗಳನ್ನು ಮೈ ಮೇಲೆ ಹಾಕಿಕೊಂಡು ಕೆಸರಿನಲ್ಲೇ ಸಿಕ್ಕಿ ಹಾಕಿಕೊಳ್ಳುವ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಶನಿವಾರ 2 ಶವಗಳನ್ನು ಹೊತ್ತು ಸಾಗಿದ ಜನ, ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ್ದಾರೆ.

ಮಾಗಳ ಗ್ರಾಮದ ಯಾವ ಜಾತಿ, ಜನಾಂಗಕ್ಕೂ ಸ್ಮಶಾನವಿಲ್ಲ, ಶವಗಳನ್ನು ರಸ್ತೆ ಮೇಲೆ ಸುಡುತ್ತಾರೆ, ಜನ ನಿತ್ಯ ಅದನ್ನು ದಾಟಿ ನದಿಗೆ ಹೋಗುತ್ತಾರೆ. ಕೊನೆಗೆ ಶವಗಳನ್ನು ಸುಡಲು ಜಾಗ ಕೊಡಿ ಅಂತಾ ಬೇಡಿಕೊಂಡಿದ್ದಾರೆ, ಆದರೂ ಅವರಿಗೂ ಸರ್ಕಾರ ಸ್ಮಶಾನ ನೀಡಿಲ್ಲ.

ಮಾಗಳ ದೊಡ್ಡ ಕಂದಾಯ ಗ್ರಾಮವಾಗಿದ್ದು, 8 ಸಾವಿರ ಜನಸಂಖ್ಯೆ ಹೊಂದಿದೆ. ಇಂತಹ ಗ್ರಾಮಕ್ಕೆ ಸ್ಮಶಾನವಿಲ್ಲ, ಈ ಹಿಂದೆ ಇದ್ದ ನದಿ ತೀರ ಸಿಂಗಟಾಲೂರು ಯೋಜನೆಯಲ್ಲಿ ಮುಳುಗಡೆಯಾಗಿದೆ. ನಡುಮಟ್ಟ ನೀರಿನಲ್ಲಿ ಹೋಗಿ ಶವಗಳನ್ನು ಹೂಳುವ ಸ್ಥಿತಿ ಇದೆ. ಕೂಡಲೇ ಸ್ಮಶಾನಕ್ಕೆ ಸೂಕ್ತ ಜಾಗ ನೀಡದಿದ್ದರೇ ಕಚೇರಿ ಮುಂದೆ ಹೆಣ ಇಟ್ಟು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.