ಸಾರಾಂಶ
ರಾಮನಗರ ಅನುಮಾನಸ್ಪದವಾಗಿ ಕೊಲೆಗೀಡಾಗಿರುವ ಅಪ್ರಾಪ್ತೆ ಖುಷಿ ಅಂತ್ಯ ಸಂಸ್ಕಾರ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬುಧವಾರ ಸಂಜೆ ನೆರವೇರಿತು.
ಬಿಡದಿ ಬಳಿಯ ಹಕ್ಕಿಪಿಕ್ಕಿ ಕಾಲೋನಿಯ ಅಪ್ರಾಪ್ತೆ ಖುಷಿ ಕೊಲೆ ಪ್ರಕರಣ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ಥಳೀಯ ಮುಖಂಡರು, ಅಧಿಕಾರಿಗಳು, ಪೊಲೀಸರು ಹರಸಾಹಸಪಟ್ಟು ಮನವೊಲಿಸಿದ ನಂತರ ಕುಟುಂಬ ಸದಸ್ಯರು ಬಾಲಕಿಯ ಅಂತ್ಯಸಂಸ್ಕಾರ ನೆರವೇರಿಸಿದರು.ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 16 ವರ್ಷ ವಯಸ್ಸಿನ ಖುಷಿಯನ್ನು ಕೊಲೆ ಮಾಡಿ ಅರೆ ನಗ್ನಾವಸ್ಥೆಯಲ್ಲಿ ಭದ್ರಾಪುರ ಬಳಿಯ ರೈಲ್ವೆ ಹಳಿ ಬಳಿ ಎಸೆಯಲಾಗಿತ್ತು. ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಶಂಕೆ ವ್ಯಕ್ತವಾಗಿತ್ತು. ಸೋಮವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು.
ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಮಂಗಳವಾರ ಮಧ್ಯಾಹ್ನ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು. ವೈದ್ಯಕೀಯ ಪರೀಕ್ಷೆ ಬರುವವರೆಗೆ ಹಾಗೂ ತಪ್ಪಿತಸ್ಥರನ್ನು ಬಂಧಿಸಿ ನಮಗೆ ನ್ಯಾಯಕೊಡುವ ವರೆಗೆ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟಿಸುತ್ತಿದ್ದರು.ಬುಧವಾರ ಮಧ್ಯಾಹ್ನವಾದರೂ ಅಂತ್ಯಸಂಸ್ಕಾರಕ್ಕೆ ಕುಟುಂಬ ಸದಸ್ಯರು ಒಪ್ಪಲಿಲ್ಲ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಅವರ ಮನವೊಲಿಕೆಗೂ ಒಪ್ಪಲಿಲ್ಲ. ಮೃತದೇಹ ಡಿಕಂಪೋಸ್ ಆಗುತ್ತಿದ್ದರೂ ಪಟ್ಟುಹಿಡಿದು ಹೋರಾಟ ಮುಂದುವರೆಸಿದ್ದರು. ನಂತರ ಸ್ಥಳೀಯ ಮುಖಂಡರು, ಅಧಿಕಾರಿಗಳು, ಪೊಲೀಸರು ಕುಟುಂಬ ಸದಸ್ಯರ ಮನವೊಲಿಸಿ ಅಂತ್ಯಸಂಸ್ಕಾರಕ್ಕೆ ಒಪ್ಪಿಸಿದರು. ಕೆಲ ಕನ್ನಡಪರ ಸಂಘಟನೆಗಳ ಹೋರಾಟಗಾರರು ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರಾದರೂ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯ ನಡುವೆ ಅಂತ್ಯಸಂಸ್ಕಾರ ನೆರವೇರಿದೆ.
14ಕೆಆರ್ ಎಂಎನ್ 11.ಜೆಪಿಜಿಅಪ್ರಾಪ್ತೆ ಖುಷಿ