ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡರೆ ಮಾತ್ರ ಕೋಮು ಸಂಘರ್ಷ ರಹಿತ ಸಮಾಜ ನಿರ್ಮಿಸಿ ಸೌಹಾರ್ಧ ಜೀವನ ನಡೆಸಬಹುದು.
ಕನ್ನಡಪ್ರಭ ವಾರ್ತೆ ಮೈಸೂರುನಾವು ಸಂವಿಧಾನವನ್ನು ಸರಿಯಾಗಿ ಪಾಲಿಸಿದರೆ ಖಂಡಿತವಾಗಿಯೂ ನಮ್ಮ ದೇಶದಲ್ಲಿ ಯಾವುದೇ ಗಲಭೆ, ಸಂಘರ್ಷಗಳು ನಡೆಯುವುದಿಲ್ಲ ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕಿ ಅಸ್ನಾ ಉರೂಜ್ ಹೇಳಿದರು.ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಆಡಳಿತ ಭವನದ ಸಭಾಂಗಣದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಐಕ್ಯತಾ ಸಪ್ತಾಹ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಅಲ್ಪಸಂಖ್ಯಾತರ ಕಲ್ಯಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರ ದೂರದೃಷ್ಟಿಯ ಮಹತ್ವ ಈಗ ನಮಗೆ ತಿಳಿಯುತ್ತಿದೆ ಎಂದರು.ಸಂವಿಧಾನವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡರೆ ಮಾತ್ರ ಕೋಮು ಸಂಘರ್ಷ ರಹಿತ ಸಮಾಜ ನಿರ್ಮಿಸಿ ಸೌಹಾರ್ಧ ಜೀವನ ನಡೆಸಬಹುದು. ಇತರ ದೇಶಗಳಂತೆ ಭಾರತದಲ್ಲಿಯೂ ಸಹ ಅಲ್ಪಸಂಖ್ಯಾತರಿದ್ದಾರೆ. ಹಿಂದೆ ಧರ್ಮ ಮುಖ್ಯವಾಗಿರಲಿಲ್ಲ. ರಾಷ್ಟ್ರ ಮುಖ್ಯವಾಗಿರುತ್ತಿತ್ತು. ಅದನ್ನು ನಾವು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕು. ಇದನ್ನು ಕಾಪಾಡಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಮಾತನಾಡಿ, ಸಮ ಸಮಾಜ ನಿರ್ಮಿಸಬೇಕಾದರೆ ಪ್ರತಿಯೊಬ್ಬರಿಗೂ ಸಮಾನ ಹಕ್ಕು ನೀಡಬೇಕು. ಶಿಕ್ಷಣ ಬಹಳ ಮುಖ್ಯ. ಅಲ್ಪ ಸಂಖ್ಯಾತರ ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಮಾನತೆ ಬೆಳೆಯುತ್ತದೆ ಎಂದು ಅವರು ಹೇಳಿದರು.ಅಲ್ಪ ಸಂಖ್ಯಾತರು ಸರ್ಕಾರ ನೀಡಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಮ್ಮ ವಿವಿಯಲ್ಲಿ 5 ಸಾವಿರ ಮೇಲ್ಪಟ್ಟ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದರು.ಕುಲಸಚಿವ ಪ್ರೊ.ಎನ್.ಕೆ. ನವೀನ್ ಕುಮಾರ್, ಪರಿಕ್ಷಾಂಗ ಕುಲಸಚಿವ ಆನಂದ್ ಕುಮಾರ್, ಶೈಕ್ಷಣಿಕ ವಿಭಾಗದ ಡೀನ್ ಪ್ರೊ.ಎಂ. ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿಗಳಾದ ಮೊಹಮ್ಮದ್ ನಸ್ರುಲ್ಲಾ ಖಾನ್, ಡಾ. ಸೈಯದ ಇಶ್ರತ್- ಫಾತಿಮಾ ಇದ್ದರು.