ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ್ ಅವರಿಗೆ ಗೌರವ ಡಾಕ್ಟರೇಟ್ ದೊರೆತಿರುವುದು ಎಲ್ಲರಿಗೂ ಸಂತಸ ತಂದಿದೆ
ಕನ್ನಡಪ್ರಭ ವಾರ್ತೆ ಮಧುಗಿರಿ
ಜನರ ಹಿತ ಬಯಸುವ ವ್ಯಕ್ತಿ ಯಾರೇ ಆಗಿದ್ದರೂ ಎಲ್ಲರೂ ಮೆಚ್ಚಿ ಗೌರವಿಸಬೇಕು. ಉದಾರ ಮನೋಭಾವದಿಂದ ಸಮಾಜದಲ್ಲಿ ನೊಂದವರಿಗೆ ಆರೋಗ್ಯ, ಶಿಕ್ಷಣ ನೀಡುತ್ತಿರುವ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಸ್ವಾಮಿ ಜಪಾನಂದಜೀ ಮಹಾರಾಜ್ ಅವರಿಗೆ ಗೌರವ ಡಾಕ್ಟರೇಟ್ ದೊರೆತಿರುವುದು ಎಲ್ಲರಿಗೂ ಸಂತಸ ತಂದಿದೆ ರಾಜ್ಯ ಸಹಕಾರ ಮಹಾ ಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿರುವ ಸಿದ್ಧಗಂಗಾ ಡಯಾಲಿಸಿಸ್ ಸೆಂಟರ್ ಪಾವಗಡ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಮಹಾರಾಜ್ ಅವರಿಗೆ ತುಮಕೂರಿನ ಶ್ರೀ ಸಿದ್ಧಾರ್ಥ ವಿಶ್ವ ವಿವಿಯಿಂದ ಗೌರವ ಡಾಕ್ಟರೇಟ್ ದೊರೆತ ಹಿನ್ನೆಲೆಯಲ್ಲಿ ಮಧುಗಿರಿಯ ನಾಗರಿಕರು ಮತ್ತು ಶಾರದಾ ಕಣ್ಣಿನ ಆಸ್ಪತ್ರೆ ಮತ್ತು ಡಯಾಲಿಸಿಸ್ ಕೇಂದ್ರದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಧುಗಿರಿ ಪಾವಗಡ ತಾಲೂಕುಗಳು ಅತ್ಯಂತ ಬರಪೀಡಿತ ಪ್ರದೇಶಗಳು, ಈ ಭಾಗದಲ್ಲಿ ಕುಗ್ರಾಮಗಳಿಗೆ ತೆರಳಿ ಸ್ವಾಮೀಜಿ ನೊಂದವರ ಬದುಕಿಗೆ ಆಶ್ರಯ ನೀಡುವ ಜೊತೆಗೆ ಆರೋಗ್ಯ, ಶಿಕ್ಷಣ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸುಮಾರು ವರ್ಷಗಳಿಂದ ಮಾಡುತ್ತಿರುವ ಸೇವೆ ಗಮನಿಸಿದ್ದು, ನಿಮ್ಮ ಸೇವೆಯೊಂದಿಗೆ ನಾವುಗಳು ಸದಾ ಕೈ ಜೋಡಿಸುತ್ತೇವೆ ಎಂದರು.ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ,ಮೌಢ್ಯವನ್ನು ಹೋಗಲಾಡಿಸುವುದು, ಶಿಕ್ಷಣದ ಬಗ್ಗೆ ತಿಳುವಳಿಕೆ ಜನರಲ್ಲಿರುವ ಅಜ್ಞಾನ ಹೋಗಲಾಡಿಸಲು ಸ್ವಾಮೀಜಿ ಶ್ರಮಿಸಿದ್ದಾರೆ. ಈ ಭಾಗದ ಶಿಕ್ಷಣ ,ಆರೋಗ್ಯ , ವೈಚಾರಿಕತೆಯಲ್ಲಿ ಬದಲಾವಣೆ ತರಲು ಸ್ವಾಮೀಜಿ ಅವರು ಕನಸು ಕಟ್ಟಿದ್ದು, ಅವರ ಸೇವೆಗೆ ಗೌರವ ಡಾಕ್ಟರೇಟ್ ಎಲ್ಲರಿಗೂ ಸಂತಸ ತಂದಿದೆ ಎಂದರು.
ಹಿರಿಯ ಸಾಹಿತಿ ಪ್ರೊ.ಮ.ಲ.ನ.ಮೂರ್ತಿ ಮಾತನಾಡಿ, ಜನಪರ ಕಾರ್ಯದಲ್ಲಿ ಆನಂದವನ್ನು ಕಂಡ ಸ್ವಾಮಿಜಿ ಜಪಾನಂದಜೀ, ಸ್ಥಳೀಯವಾಗಿ ಅಲ್ಲದೆ ಪ್ರವಾಹಕ್ಕೆ ತುತ್ತಾದ ಜನತೆಗೆ ಆಹಾರ,ಸಮವಸ್ತ್ರ ನೀಡಿ ಹಾರೈಕೆ ಮಾಡಿದ್ದಾರಲ್ಲದೆ, ಪತ್ರಿಕೆ ಹಂಚುವ ಹುಡುಗರಿಗೆ ಸ್ಪೇಟರ್ ಕೊಡಿಸಿ ಅವರ ಹಿತ ಕಾಪಾಡುವಲ್ಲಿ ಪ್ರಮಾಣಿಕತೆ ತೋರಿದ್ದಾರೆ ಎಂದರು.ನಿವೃತ್ತ ಪ್ರಾಂಶುಪಾಲ ಸಿ.ಕೃಷ್ಣಪ್ಪ ಮಾತನಾಡಿ ,ಪಾವಗಡದಂತಹ ಬರಪೀಡಿತ ಪ್ರದೇಶದಲ್ಲಿ ನೆಲಸಿ ಬಡವರ ಪಾಲಿನ ದೇವರಾಗಿ ಸಕಲ ರೀತಿಯಲ್ಲೂ ನೆರವಾಗುವ ಮೂಲಕ ಸ್ವಾಮಿ ಜಪಾನಂದಜೀ ಅವರು ಮನೆ ಮಾತಾಗಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ವಾಮಿಜಿ ಜಪಾನಂಜೀ ಮಹಾರಾಜ್ ಅವರು, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮೀಜಿ ಅವರನ್ನು ನೆನೆಪಿಸಿ,ಅವರ ಸೇವಾ ಕಾರ್ಯ ಇತರರಿಗೆ ಮಾದರಿ ಎಂದರಲ್ಲದೆ ನಾನು ಮಾಡುತ್ತಿರುವ ಕಾರ್ಯದ ಹಿಂದೆ ತಮ್ಮೆಲ್ಲರ ಸಹಕಾರ ನನಗೆ ಸ್ಪೂರ್ತಿ ,ಮುಂದೆ ಮಧುಗಿರಿಯಲ್ಲಿ ಹೃದ್ರೋಗ ಆಸ್ಪತ್ರೆಯ ತೆರೆಯುವ ಅಲೋಚನೆಯಿದ್ದು, ಅದಕ್ಕೆ ತಮ್ಮೆಲ್ಲರ ಸಹಕಾರ ಅತಿ ಮುಖ್ಯ ಎಂದರು.ನಿವೃತ್ತ ಪ್ರಾಂಶುಪಾಲ ಡಿ.ಎಸ್.ಮುನೀಂದ್ರ ಕುಮಾರ್,ಸರ್ವಜ್ಞ ವೇದಿಕೆ ಅಧ್ಯಕ್ಷ ವೆಂಕಟರಮಣಪ್ಪ ಮಾತನಾಡಿದರು. ಸಭೆಯಲ್ಲಿ ಡಿವೈಎಸ್‌ಪಿ ಮಂಜುನಾಥ್,ಕಸಾಪ ಅಧ್ಯಕ್ಷೆ ಸಹನಾ ನಾಗೇಶ್,ಡಯಾಲಿಸಿಸ್ ಕೇಂದ್ರದ ಅನುರಾದ,ಅಕ್ಷಯ್, ವರದಾಯಿನಿ ಸೇವಾ ಟ್ರಸ್ಟ್ ಅಧ್ಯಕ್ಷೆ ಗಾಯಿತ್ರಿ ನಾರಯಣ್, ಡಾ.ಜಿ.ಕೆ.ಜಯರಾಮ್, ಡಾ.ಸ್ವಾತಿ, ರೋಟರಿ ಅಧ್ಯಕ್ಷ ನಟರಾಜು ಸೇವಾಕರ್ತರಾದ ಟಿ.ಪ್ರಸನ್ನಕುಮಾರ್, ನಂಜಮ್ಮ ಹಾಗೂ ನಾಗರಿಕರು ಇದ್ದರು.