ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜದಲ್ಲಿ ರಂಗಭೂಮಿಗೆ ಮಹತ್ವದ ಸ್ಥಾನವಿದೆ. ಅದು ಜನರ ಬದುಕನ್ನು ತಿದ್ದಿ ತೀಡಿ ರೂಪಿಸುತ್ತದೆ. ಅದರಲ್ಲೂ ಮಕ್ಕಳ ವ್ಯಕ್ತಿತ್ವದ ವಿಕಾಸಕ್ಕೆ ತುಂಬಾ ಸಹಕಾರಿಯಾಗಿದ್ದು, ಇಂತಹ ಸದಭಿರುಚಿಯ ನಾಟಕ ಕಲೆ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ಸೃಷ್ಟಿಸಬಲ್ಲದು ಎಂದು ನಗರ ಪಾಲಿಕೆಯ ಮಾಜಿ ಸದಸ್ಯ ಪಿ. ಪ್ರಶಾಂತ್ ಗೌಡ ತಿಳಿಸಿದರು.ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ಅದಮ್ಯ ರಂಗಶಾಲೆಯ ನಡೆದ ''''''''ಕಣ್ಕಟ್ ನಗರ'''''''' ಮಕ್ಕಳ ನಾಟಕ ಪ್ರದರ್ಶನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಟಕಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಡಲು ಸಾಧ್ಯವಿದೆ. ಹೀಗಾಗಿ, ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೇ ರಂಗ ಶಿಕ್ಷಣ ಕೊಡಿಸಬೇಕು ಎಂದರು.ಮಕ್ಕಳ ರಂಗಭೂಮಿ ತುಂಬಾ ಸವಾಲಿನದ್ದು. ಮಕ್ಕಳಿಂದ ವಯಸ್ಸಿಗೆ ಮೀರಿದ ಪಾತ್ರಾಭಿನಯ ಮಾಡಿಸುವುದು ಮತ್ತು ಸಂಭಾಷಣೆ ಹೇಳಿಸುವುದು ಕಠಿಣವಾದ ಕಾರ್ಯ. ಇದಕ್ಕೆ ಮಕ್ಕಳಿಗೆ ಸೂಕ್ತವಾದ ನಿರಂತರ ತರಬೇತಿಯ ಅಗತ್ಯವಿದೆ. ಈ ರಂಗ ತರಬೇತಿಯ ಕಾರ್ಯ ಮಾಡುತ್ತಿರುವ ಶ್ಲಾಘನಿಯ ಎಂದು ಅವರು ಹೇಳಿದರು.ಇದೇ ವೇಳೆ ಇತ್ತೀಚೆಗೆ ನಿವೃತ್ತರಾದ ಡಿವೈಎಸ್ಪಿ ಶಾಂತಮಲ್ಲಪ್ಪ ಹಾಗೂ ತಿಪಟೂರಿನ ಟೈಮ್ಸ್ ಪಿಯು ಕಾಲೇಜಿನ‌ ಆಡಳಿತಾಧಿಕಾರಿ ಕೆ.ಎಲ್. ಅನೂಪ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಉಮಾಶ್ರೀ ಜಿ. ಕೂಡ್ಲಿಗಿ ಅವರ ನಿರ್ದೇಶನದಲ್ಲಿ ಅದಮ್ಯ ರಂಗಶಾಲೆಯ ಮಕ್ಕಳು ಅಭಿನಯಿಸಿದ ''''''''ಕಣ್ಕಟ್ ನಗರ'''''''' ನಾಟಕವು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು.ವಿ.ಕೆ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ರವಿಕುಮಾರ್ ಬೆಕ್ಯಾ, ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ. ಸತೀಶ್ ಜವರೇಗೌಡ, ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ, ಪದಾಧಿಕಾರಿಗಳಾದ ಪರಮೇಶ್ ಕೆ. ಉತ್ತನಹಳ್ಳಿ, ಜ್ಯೋತಿ ಸೋಮರಾಜು, ಜಿ. ರವೀಂದ್ರ ಕುಮಾರ್, ಕುಮಾರಸ್ವಾಮಿ ವರುಣ ಇದ್ದರು.