ಪ್ರತಿಯೊಬ್ಬರಲ್ಲಿರುವ ಕೌಶಲ್ಯ, ಕಲೆಯನ್ನು ಗೌರವಯುತವಾಗಿ ಬಳಸಿಕೊಂಡರೆ ಶ್ರೇಷ್ಠತೆ ದೊರೆಯುತ್ತದೆ. ಗುರುಗಳ ಆಶೀರ್ವಾದ ಇದ್ದರೆ ಬದುಕಿನಲ್ಲಿ ಅನ್ನಕ್ಕೆ ಕೊರತೆ ಇರುವುದಿಲ್ಲ.
ಕರ್ನಾಟಕ ವಿಶ್ವವಿದ್ಯಾಲಯದ ಉತ್ತರ ಕನ್ನಡ ವಲಯ ಮಟ್ಟದ ಯುವಜನೋತ್ಸವ ಉದ್ಘಾಟಿಸಿದ ಚಿತ್ರನಟ
ಕನ್ನಡಪ್ರಭ ವಾರ್ತೆ ಶಿರಸಿಪ್ರತಿಯೊಬ್ಬರಲ್ಲಿರುವ ಕೌಶಲ್ಯ, ಕಲೆಯನ್ನು ಗೌರವಯುತವಾಗಿ ಬಳಸಿಕೊಂಡರೆ ಶ್ರೇಷ್ಠತೆ ದೊರೆಯುತ್ತದೆ. ಗುರುಗಳ ಆಶೀರ್ವಾದ ಇದ್ದರೆ ಬದುಕಿನಲ್ಲಿ ಅನ್ನಕ್ಕೆ ಕೊರತೆ ಇರುವುದಿಲ್ಲ ಎಂದು ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಹೇಳಿದರು.
ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಶುಕ್ರವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯದ ಉತ್ತರ ಕನ್ನಡ ವಲಯ ಮಟ್ಟದ ಎರಡು ದಿನಗಳ ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಒಳ್ಳೆಯ ನಾಗರಿಕರಾಗುವ ನಿಟ್ಟಿನಲ್ಲಿ ಇಂದಿನಿಂದಲೇ ಶಿಸ್ತು ಮೈಗೂಡಿಸಿಕೊಂಡು ಮುಂದುವರಿಯಬೇಕು. ವಿದ್ಯಾರ್ಥಿ ಹಂತದಲ್ಲೇ ಕಲೆ, ಸಾಹಿತ್ಯ, ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎನ್ನುವ ಮಾತೊಂದಿದೆ. ಒಬ್ಬ ರೈತನ ಮಗನಾಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸಲು ಹೆಮ್ಮೆಯಾಗುತ್ತಿದೆ. ಯೌವನಕ್ಕೆ ಮುಪ್ಪು ಬರುವುದಿಲ್ಲ. ಎಲ್ಲರ ಜೀವನದಲ್ಲೂ ಯೌವನ ಇರುತ್ತದೆ. ಯೌವನದ ಜತೆಗೆ ಜ್ಞಾನವನ್ನು ತೆಗೆದುಕೊಳ್ಳುವ ಕಾಲವಿದು. ಈ ಸಮಯದಲ್ಲಿ ಸುಂದರ ಕನಸು ಬೀಳುತ್ತದೆ. ಮಾಯೆಯೊಳಗಡೆ ನೈಜವಾದ ಮಾಯೆಯನ್ನು ಹಿಡಿಯಬೇಕು. ಮಾಯೆ ಮುಂದಿನ ಜೀವನ ಹೇಗಿರಬೇಕು ಎನ್ನುವುದನ್ನು ಮಾರ್ಗದರ್ಶನ ಮಾಡುತ್ತದೆ. ಇಲ್ಲಿಂದಲೇ ಮಾತಾ ಸರಸ್ವತಿಯ ಕೃಪೆ ಪ್ರಾರಂಭವಾಗುತ್ತದೆ. ಆಚಾರ-ವಿಚಾರ, ಭಾಷೆ, ಅಂತಃಕರಣ ಇವೆಲ್ಲವೂ ಶುದ್ಧವಾಗಿರಬೇಕು. ಇಲ್ಲಿಂದಲೇ ಇವುಗಳನ್ನು ಪಾಲನೆ ಮಾಡಿದಾಗ ಉತ್ತಮ ಜೀವನ ನಮ್ಮದಾಗುತ್ತದೆ ಎಂದರು.
ಉಪಸಮಿತಿ ಅಧ್ಯಕ್ಷ ಎಸ್.ಕೆ. ಭಾಗ್ವತ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಚಾರ್ಯ ಪ್ರೊ. ಜಿ.ಟಿ. ಭಟ್, ನಿವೃತ್ತ ಉಪನ್ಯಾಸಕ ಸಂಜೀವ್ ಪೋತದಾರ್, ಆಯುರ್ವೇದ ವೈದ್ಯ ನಬಿ ಸಾಬ್, ಉಪನ್ಯಾಸಕರಾದ ಡಾ. ಸುಜಾತಾ ಹಾಗೂ ಡಾ. ಗಣೇಶ್ ಹೆಗಡೆ, ರಾಘವೇಂದ್ರ ಜಾಜಿಗುಡ್ಡೆ ಮತ್ತಿತರರಿದ್ದರು.