ಸಾರಾಂಶ
ರಾತ್ರಿ ವೇಳೆ ಆಲೂರಿಗೆ ಬಾರದ ಕೆಲ ಡಿಪೋ ಬಸ್ ಗಳು । ಪ್ರಯಾಣಿಕರಿಗೆ ಕಿಮೀ ದೂರದವರೆಗೂ ಭಯದಿಂದ ಓಡಾಡುವ ಸ್ಥಿತಿ
ಕನ್ನಡಪ್ರಭವಾರ್ತೆ ಆಲೂರುರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆಲೂರು ತಾಲೂಕು ಕೇಂದ್ರವನ್ನು ಕಡೆಗಣಿಸಿ ಪ್ರಯಾಣಿಕರ ಜೊತೆ ಚೆಲ್ಲಾಟವಾಡುತ್ತಿರುವುದಕ್ಕೆ ಕಡಿವಾಣ ಹಾಕುವವರು ಯಾರು ಇಲ್ಲವೆ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
ಹಾಸನ ಮತ್ತು ಸಕಲೇಶಪುರ ಕಡೆಯಿಂದ ಸಂಚರಿಸುವ ಸುವಿಹಾರಿ, ರಾಜಹಂಸ ಹೊರತುಪಡಿಸಿದಂತೆ ಉಳಿದ ಎಲ್ಲ ಸಾರಿಗೆ ಎಕ್ಸ್‌ಪ್ರೆಸ್ ಬಸ್ಸುಗಳು ಆಲೂರು ತಾಲೂಕು ಕೇಂದ್ರದ ಮೂಲಕ ಕಡ್ಡಾಯವಾಗಿ ಹಾದು ಹೋಗಬೇಕು. ಈ ಸಂದರ್ಭದಲ್ಲಿ ಸ್ಥಳೀಯ ಬಸ್ ನಿಲ್ದಾಣದಲ್ಲಿ ಹಾಜರಿರುವ ಸಂಚಾರ ನಿಯಂತ್ರಕ ಕಚೇರಿಯಲ್ಲಿ ದಾಖಲಾಗಬೇಕು ಎಂಬ ನಿಯಮವಿದೆ.ಆದರೆ, ಕೆಲವು ಡಿಪೋಗಳಿಗೆ ಸೇರಿದ ಸಾರಿಗೆ ಎಕ್ಸ್‌ಪ್ರೆಸ್ ಬಸ್ಸುಗಳು ರಾತ್ರಿ ವೇಳೆ ಸಕಲೇಶಪುರ ಮತ್ತು ಹಾಸನ ಬಸ್ ನಿಲ್ದಾಣದಿಂದ ಪ್ರಯಾಣಿಕರಿಗೆ ಆಲೂರಿಗೆ ಪ್ರಯಾಣಿಸಲು ಟಿಕೆಟ್ ನೀಡುತ್ತಾರೆ. ಆದರೆ ಆಲೂರು ಕೇಂದ್ರಕ್ಕೆ ಬಸ್ಸುಗಳು ಸಂಚರಿಸದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸಲುವಾಗಿ, ಆಲೂರು ಬೈಪಾಸ್ ನೇರಲಕೆರೆ ಕೂಡಿಗೆಯಲ್ಲಿ ಮತ್ತು ಭೈರಾಪುರದ ಬಳಿ ಪ್ರಯಾಣಿಕರನ್ನು ಇಳಿಸಿ ಹೋಗುತ್ತಿದ್ದಾರೆ. ಪ್ರಯಾಣಿಕರು ಸುಮಾರು ೨ ಕಿಮೀ. ದೂರ ಜೀವಭಯದಿಂದ ನಡೆದು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಯಾಣಿಕರು ಈ ಅವ್ಯವಸ್ಥೆಯನ್ನು ಪ್ರಶ್ನಿಸಿದರೆ ಚಾಲಕ, ನಿರ್ವಾಹಕರು ಉಡಾಫೆಯಿಂದ ವರ್ತಿಸುವುದಲ್ಲದೆ ದೌರ್ಜನ್ಯ ಎಸಗುತ್ತಿದ್ದಾರೆ.
ಸುಮಾರು ೨೦ ವರ್ಷಗಳ ಹಿಂದೆ ಬಸ್ ಚಾಲಕರು, ನಿರ್ವಾಹಕರು ಇದೇ ರೀತಿ ವರ್ತಿಸುತ್ತಿದ್ದರು. ಒಮ್ಮೆ ಮಂಗಳೂರಿನಿಂದ ಆಲೂರಿಗೆ ಬರುತ್ತಿದ್ದ ನ್ಯಾಯಾಧೀಶರನ್ನು ಭೈರಾಪುರದಲ್ಲಿ ಬಸ್ಸಿನಿಂದ ಇಳಿಸಿ ಹೋಗಿದ್ದರು. ಇಲಾಖೆ ಆದೇಶವನ್ನೆ ಧಿಕ್ಕರಿಸಿ ಪ್ರಯಾಣಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಆ ಸಂದರ್ಭದಲ್ಲಿ ಪಟ್ಟಣದ ಯುವಕರು ತಂಡ ರಚಿಸಿಕೊಂಡು, ರಾತ್ರಿ ವೇಳೆ ಸಂಪೂರ್ಣ ಪಹರೆ ಮಾಡಿದರು. ಪಟ್ಟಣದೊಳಗೆ ಬಾರದ ಬಸ್ಸುಗಳನ್ನು ಹಿಡಿದು ತಂದು ಪೊಲೀಸ್ ಠಾಣೆ ಬಳಿ ನಿಲ್ಲಿಸಿ, ಚಾಲಕ, ನಿರ್ವಾಹಕರಿಗೆ ಸಾಧ್ಯವಾದಷ್ಟು ದಂಡಂ ದಶಗುಣಂ ನೀಡುವ ಕಾರ್ಯಚರಣೆ ಕೈಗೊಂಡರು. ನಂತರ ಹೆದರಿದ ಚಾಲಕ, ನಿರ್ವಾಹಕರು ಪಟ್ಟಣದೊಳಗೆ ಬರಲು ಪ್ರಾರಂಭಿಸಿದರು.ಈಗ ಈ ಚಾಳಿ ಮತ್ತೊಮ್ಮೆ ಪ್ರಾರಂಭವಾಗಿದೆ. ಇಲಾಖೆ ಆದೇಶ, ಪೊಲೀಸರ ಸೂಚನೆ ಮತ್ತು ಪ್ರಯಾಣಿಕರ ಸಂಕಟವನ್ನು ಅರಿಯದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸುಗಳಲ್ಲಿರುವ ಚಾಲಕ, ನಿರ್ವಾಹಕರಿಗೆ ಸದ್ಯದಲ್ಲಿಯೇ ಯುವಕರ ತಂಡದಿಂದ ದಂಡಂ ದಶಗುಣಂ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಅಂತಹ ಸಂದರ್ಭ ಸೃಷ್ಟಿ ಮಾಡಿಕೊಳ್ಳದೆ ಚಾಲಕ, ನಿರ್ವಾಹಕರು ಪಟ್ಟಣದೊಳಗೆ ಬಸ್ಸುಗಳನ್ನು ಓಡಿಸುವುದು ಒಳ್ಳೆಯದು. ಇಲ್ಲದಿದ್ದರೆ ಪೆಟ್ಟು ತಿಂದು ಆಸ್ಪತ್ರೆ ಸೇರಲು ಸಿದ್ಧರಾಗಿರಬೇಕಾಗುತ್ತದೆ.
ಸಾರಿಗೆ ಇಲಾಖೆ ಆದೇಶವನ್ನು ಪಾಲಿಸಿಕೊಂಡು ಚಾಲಕ, ನಿರ್ವಾಹಕರು ಆಲೂರು ಪಟ್ಟಣದೊಳಗೆ ಬಸ್ಸುಗಳನ್ನು ಓಡಿಸಿದರೆ ಕ್ಷೇಮ. ಇಲ್ಲದಿದ್ದರೆ ೨೦ ವರ್ಷಗಳ ಹಿಂದಿನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಇದಕ್ಕೆ ಯಾರೂ ಹೊಣೆಗಾರರಲ್ಲ.ಎಚ್. ವಿ. ರಾಘವೇಂದ್ರ, ಅಧ್ಯಕ್ಷರು, ಕರವೇ. (ಪ್ರವೀಣ್‌ಶೆಟ್ಟಿ ಬಣ) ಆಲೂರು.
ಎಕ್ಸ್‌ಪ್ರೆಸ್ ಬಸ್ಸುಗಳು ಆಲೂರು ಕೇಂದ್ರಕ್ಕೆ ಬಾರದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿರುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಬಸ್ ನಿಲ್ದಾಣಗಳಲ್ಲಿ ಬಸ್ಸುಗಳು ಹೊರಡುವ ಮುನ್ನ ಟ್ರಿಪ್ ಶೀಟ್‌ಗೆ ಸೀಲ್ ಹಾಕುವಂತೆ ಸೂಚನೆ ನೀಡಲಾಗಿದೆ. ನೇರಲಕೆರೆ ಮತ್ತು ಭೈರಾಪುರದಲ್ಲಿ ಆಲೂರು ಮಾರ್ಗ ನಿರ್ದೇಶಿಸುವ ಬೃಹತ್ ನಾಮಫಲಕವನ್ನು ಸದ್ಯದಲ್ಲೆ ಅಳವಡಿಸಲಾಗುವುದು. ಇದಕ್ಕೂ ಮಿರಿ ವರ್ತಿಸಿದರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಶಾಂತಕುಮಾರ್, ವ್ಯವಸ್ಥಾಪಕರು, ಡಿಪೋ ೧, ಹಾಸನ.