ಸಾರಾಂಶ
ಬಾಪೂಜಿ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಡಿ.ಎಸ್.ಅರುಣ್
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಇಂದಿನ ವಿದ್ಯಾರ್ಥಿಗಳು ಸಂಸ್ಕೃತಿ, ಉತ್ತಮ ಆಚಾರ, ವಿಚಾರಗಳನ್ನು ಇಂದಿನ ಯುವಜನತೆ ರೂಢಿಸಿಕೊಂಡು ಮುನ್ನಡೆದರೆ ಸದೃಢ ಭಾರತವನ್ನು ಕಟ್ಟಬಹುದು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್ , ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳಿಗೆ ಚಾಲನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಹಿಳೆಯೂ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಲು ಅನೇಕ ಅವಕಾಶಗಳಿವೆ. ಕಾಲೇಜಿನ ಅಭಿವೃದ್ಧಿ ವಿದ್ಯಾರ್ಥಿ ಮತ್ತು ಅಧ್ಯಾಪಕರಿಂದ ಸಾಧ್ಯ. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯ ಕಡೆಗೆ ಗಮನ ನೀಡುವುದು ಅವಶ್ಯಕ. ಮಕ್ಕಳ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮ ಸಿದ್ಧಪಡಿಸುವುದು ಒಳಿತು ಎಂದರು.ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿಗಳ ಸುಂದರ ವ್ಯಕ್ತಿತ್ವ ನಿರ್ಮಾಣದಲ್ಲಿ ಅಧ್ಯಾಪಕರ ಜವಾಬ್ದಾರಿ ದೊಡ್ಡದಿದೆ. ಸಮಾಜಮುಖಿ ಕಾರ್ಯಗಳಲ್ಲಿ ಅಧ್ಯಾಪಕರು ತೊಡಗಿಸಿಕೊಂಡು ಸಮಾಜದ ಋಣ ತೀರಿಸಬೇಕು. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನಾಯಕತ್ವ ಬೆಳಸಿಕೊಳ್ಳಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರೊ.ಬಾಲಕೃಷ್ಣ ಶೆಟ್ಟಿ ಮಾತನಾಡಿ, ಜೀವನೋತ್ಸಾಹ ಇದ್ದಾಗ ಮಾತ್ರ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಲು ಸಾಧ್ಯ. ಇಂದು ವಿದ್ಯಾರ್ಥಿಗಳು ಶಿಸ್ತನ್ನು ರೂಢಿಸಿಕೊಂಡು ಮುನ್ನಡೆಯಬೇಕು. ಸಮಾಜಕ್ಕೆ ಅದೇ ದೊಡ್ಡ ಕೊಡುಗೆ. ಸಿದ್ಧ ಮನಸ್ಸಿನಿಂದ ಹೊರಗೆ ಬರಬೇಕು. ನಿಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಹಾಳುಮಾಡಿಕೊಳ್ಳದೇ ನಾಡಿನ ಅಭ್ಯುದಯಕ್ಕೆ ಬಳಸಿಕೊಳ್ಳಬೇಕು. ಸತತ ಶ್ರಮದಿಂದ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಜಿ.ಚನ್ನಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಇಚ್ಛಾಶಕ್ತಿ ಇದ್ದರೆ ಯಾವ ಸೋಲು ಬರುವುದಿಲ್ಲ. ತಂದೆ, ಗುರುವಿಗಿಂತ ಮೀರಿ ಬೆಳೆಯಬೇಕು ಎಂದರು.ಡಾ. ಸಕ್ರಿಯನಾಯ್ಕ ಸ್ವಾಗತಿಸಿದರು. ಡಾ. ಅಣ್ಣಪ್ಪ ಎನ್ ಮಳೀಮಠ್ ನಿರೂಪಿಸಿದರು. ಪ್ರೊ. ಜಯಕೀರ್ತಿ ವಂದಿಸಿದರು. ಪ್ರೊ.ಪವಿತ್ರ ಅತಿಥಿ ಪರಿಚಯಿಸಿದರು. ಅಧ್ಯಾಪಕರಾದ ಡಾ. ಸೋಮಶೇಖರ್, ಡಾ. ರೇಷ್ಮಾ, ಡಾ. ಬಿ.ಎಂ ಚಂದ್ರಶೇಖರ, ಕಸ್ತೂರಿ ಇದ್ದರು.