400ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿರುವ ಧಾರವಾಡ ಐಐಟಿ ಕ್ಯಾಂಪಸ್, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಯಾವುದೇ ಸದ್ದು-ಗದ್ದಲವಿಲ್ಲದೇ ಅಧ್ಯಯನ ಹಾಗೂ ಸಂಶೋಧನೆ ಮೇಲೆ ಹೆಚ್ಚು ಗಮನಹರಿಸಲು ಸೂಕ್ತವಾದ ವಾತಾವರಣ ಹೊಂದಿದೆ.

ಬಸವರಾಜ ಹಿರೇಮಠ

ಧಾರವಾಡ:

ಮೂರನೇ ತಲೆಮಾರಿನ ಐಐಟಿಗಳಲ್ಲಿ ದೇಶದ ಮೊದಲ ಸ್ಮಾರ್ಟ್ ಮತ್ತು ಹಸಿರು ಕ್ಯಾಂಪಸ್ ಎಂದು ಗುರುತಿಸಿಕೊಂಡಿರುವ ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯು ತಾನು ನಿತ್ಯ ಬಳಸುವ ನೀರು, ವಿದ್ಯುತ್‌ನಲ್ಲಿ ಸಂಪೂರ್ಣ ಸ್ವಾವಲಂಬನೆ ಜತೆಗೆ ತನ್ನಲ್ಲಿ ಉತ್ಪಾದನೆಯಾಗುವ ಸಂಪೂರ್ಣ ತಾಜ್ಯವನ್ನು ಮರುಬಳಕೆಯ ಗುರಿಯತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ.

400ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿರುವ ಧಾರವಾಡ ಐಐಟಿ ಕ್ಯಾಂಪಸ್, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಯಾವುದೇ ಸದ್ದು-ಗದ್ದಲವಿಲ್ಲದೇ ಅಧ್ಯಯನ ಹಾಗೂ ಸಂಶೋಧನೆ ಮೇಲೆ ಹೆಚ್ಚು ಗಮನಹರಿಸಲು ಸೂಕ್ತವಾದ ವಾತಾವರಣ ಹೊಂದಿದೆ. ಇದರೊಂದಿಗೆ ಬರುವ ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಮರ, ಜಾಗಿಂಗ್ ಮತ್ತು ಸೈಕ್ಲಿಂಗ್ ಟ್ರ್ಯಾಕ್‌ ಮತ್ತು ಜಲಮೂಲಗಳಿಂದ ಕೂಡಿದ ಮಿನಿ-ಫಾರೆಸ್ಟ್ ಒಳಗೊಂಡ ಪರಿಸರ ಸ್ನೇಹಿ ಶೈಕ್ಷಣಿಕ ಪರಿಸರ ವ್ಯವಸ್ಥೆ ರಚಿಸುವ ಗುರಿಯನ್ನು ಸಂಸ್ಥೆಯು ಹೊಂದಿದೆ.

ಹಸಿರು ವಾತಾವರಣದಿಂದ ಇಲ್ಲಿಯ ಕ್ಯಾಂಪಸ್ ತಾಪಮಾನ ಹೊರಗಡೆಗಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಇದೆ. ಮಳೆನೀರು ಕೊಯ್ಲು ತಂತ್ರಗಳನ್ನು ಬಳಸಿಕೊಂಡು ಐದು ಕೊಳಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇತ್ತೀಚಿನ ಸುಸ್ಥಿರತೆಯ ಪ್ರಯತ್ನದಲ್ಲಿ, ಪ್ರತಿ ಹನಿ ಮಳೆನೀರನ್ನು ಕೊಯ್ಲು, ಸಂಗ್ರಹಿಸುವುದು ಮತ್ತು ಪರಿಣಾಮಕಾರಿಯಾಗಿ ಮರುಬಳಕೆ ಮಾಡಲು ಮೂರು ಕ್ಯಾಸ್ಕೇಡಿಂಗ್ ಕೆರೆಗಳನ್ನು ರಚಿಸುವ ಕೆಲಸವನ್ನು ಸಹ ಐಐಟಿ ಶುರು ಮಾಡಿರುವುದು ಮಾದರಿ ಹೌದು.

ಈ ಎಲ್ಲ ಬೆಳವಣಿಗೆ ಕುರಿತು ಮಾಹಿತಿ ನೀಡಿದ ಐಐಟಿ ಮೂಲಸೌಕರ್ಯ ಮತ್ತು ಯೋಜನೆ ಡೀನ್‌ ಅಮರನಾಥ್ ಹೆಗ್ಡೆ, ಇಡೀ ಕ್ಯಾಂಪಸ್ ಮಳೆನೀರು ಕೊಯ್ಲು ರಚನೆಗಳನ್ನು ಹೊಂದಿದೆ ಮತ್ತು ಈಗಾಗಲೇ ಕೊಳಗಳನ್ನು ರಚಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ಸಂಗ್ರಹಿಸಲಾದ ಮಳೆ ನೀರನ್ನು ವರ್ಷವಿಡೀ ಬಳಸಬಹುದು. ನಾಲ್ಕರಿಂದ ಐದು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿರುವ ಮೂರು ಸರೋವರಗಳು ಒಟ್ಟು 117 ಮಿಲಿಯನ್ ಲೀಟರ್ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದು ಕ್ಯಾಂಪಸ್‌ನ ಕುಡಿಯುವ ಮತ್ತು ಸಾಮಾನ್ಯ ನೀರಿನ ಅಗತ್ಯ ಪೂರೈಸಲು ಸಾಕು. ಪ್ರಸ್ತುತ, ಸುಮಾರು 2,000 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕ್ಯಾಂಪಸ್‌ನಲ್ಲಿದ್ದಾರೆ. ಈ ಸರೋವರಗಳಲ್ಲಿ ಕೊಯ್ಲು ಮಾಡಿದ ನೀರನ್ನು ಕುಡಿಯುವ ಮತ್ತು ದೈನಂದಿನ ಬಳಕೆಗಾಗಿ ಪೂರೈಸುವ ಮೊದಲು ಸಂಸ್ಕರಣೆಗೆ ಒಳಪಡಿಸಲಾಗುತ್ತದೆ. ಸುಮಾರು ₹ 10 ಕೋಟಿಗಳಷ್ಟು ವೆಚ್ಚದ ಈ ಯೋಜನೆಯನ್ನು ಸಿಎಸ್ಆರ್ ನಿಧಿಯ ಮೂಲಕ ಸಂಪೂರ್ಣವಾಗಿ ಸಜ್ಜುಗೊಳಿಸಲಾಗುತ್ತಿದೆ.

ಆಡಳಿತ ಕಟ್ಟಡ, ಶೈಕ್ಷಣಿಕ ಬ್ಲಾಕ್‌, ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ, ಕೇಂದ್ರ ಉಪನ್ಯಾಸ ರಂಗಮಂದಿರ, ವಾದ್ಯ ಸೌಲಭ್ಯ ಕೇಂದ್ರ, ಅಧ್ಯಾಪಕರ ವಸತಿ, ಹಾಸ್ಟೆಲ್‌, ಸಭಾಂಗಣ ಮತ್ತು ಕ್ಯಾಂಟೀನ್ ಸೇರಿದಂತೆ ಎಲ್ಲ 16 ಕ್ಯಾಂಪಸ್ ಬ್ಲಾಕ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೌರ ಫಲಕಗಳ ಅಳವಡಿಕೆಯನ್ನು ಸಂಸ್ಥೆ ಕೈಗೆತ್ತಿಕೊಂಡಿದೆ ಎಂದು ಡಾ. ಹೆಗ್ಡೆ ತಿಳಿಸಿದರು.

ಒಮ್ಮೆ ಕಾರ್ಯಾರಂಭ ಮಾಡಿದ ನಂತರ, ಸೌರ ಘಟಕಗಳು ಕನಿಷ್ಠ 1.8 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದ್ದು, ಕ್ಯಾಂಪಸ್‌ನ ಇಂಧನ ಬೇಡಿಕೆಯ ಶೇ. 80ಕ್ಕಿಂತ ಹೆಚ್ಚು ಪೂರೈಸುತ್ತದೆ. ಹವಾನಿಯಂತ್ರಣದ ಅಗತ್ಯವನ್ನು ಕಡಿಮೆ ಮಾಡುವ ಮತ್ತು ನೈಸರ್ಗಿಕ ಹಗಲು ಬೆಳಕನ್ನು ಹೆಚ್ಚಿಸುವ ಹವಾಮಾನ-ಸ್ಪಂದಿಸುವ ಕಟ್ಟಡ ವಿನ್ಯಾಸಗಳ ಮೂಲಕ ಇಂಧನ ಬಳಕೆಯನ್ನು ಮತ್ತಷ್ಟು ಕಡಿಮೆ ಮಾಡಲಾಗುತ್ತಿದೆ ಎಂದರು.

2030ರೊಳಗೆ ಸಂಪೂರ್ಣ ತ್ಯಾಜ್ಯ ಮರುಬಳಕೆ, ನೀರು ಮತ್ತು ವಿದ್ಯುತ್‌ ಸ್ವಾವಲಂಬನೆಯ ಸಾಧನೆಯ ಗುರಿಯನ್ನು ಧಾರವಾಡ ಐಐಟಿ ಹೊಂದಿದ್ದು, ಅದಕ್ಕೆ ಬೇಕಾದ ಉಪಕ್ರಮಗಳನ್ನು ಈಗಾಗಲೇ ಕೈಗೆತ್ತಿಕೊಂಡಿದೆ.

ಅಮರನಾಥ ಹೆಗ್ಡೆ, ಐಐಟಿ ಡೀನ್ (ಮೂಲಸೌಕರ್ಯ ಮತ್ತು ಯೋಜನೆ)