ಕನ್ನಡಪ್ರಭ ವಾರ್ತೆ ಕೊಲ್ಹಾರ

ತಾಲೂಕಿನ ತೆಲಗಿ ಬಳಿ ರೈಲ್ವೆ ಅಂಡರ್ ಪಾಸ್ ಹತ್ತಿರ ಹಾಕಿದ ಎತ್ತರ ನಿಯಂತ್ರಣ ಕಂಬ ( ಓವರ್ ಹೈಟ್ ಗೇಜ್ ) ಗುರುವಾರ ಮುರಿದು ಬಿದ್ದ ಪರಿಣಾಮ ಭಾರಿ ಅನಾಹುತ ತಪ್ಪಿದೆ.

ರೈಲ್ವೆ ಅಂಡರ್ ಪಾಸ್ ಮೂಲಕ ಹಾದು ಹೋಗುವ ಎತ್ತರದ ಭಾರಿ ವಾಹನಗಳಿಗೆ ರೈಲ್ವೆ ಇಲಾಖೆಯವರು ಎತ್ತರದ ಮೀತಿಯನ್ನು ಸೂಚಿಸುವ ಓವರ್ ಹೈಟ್‌ ಗೇಜ್‌ಗೆ ಅಡ್ಡಲಾಗಿ ಹಾಕಿದೆ. ಭಾರಿ ತೂಕದ ಕಬ್ಬಿಣದ ಕಂಬವೊಂದು ಏಕಾಏಕಿ ಮುರಿದು ಬಿದ್ದಿದೆ. ಇದರಿಂದ 2 ಗಂಟೆ ಟ್ರಾಫಿಕ್ ಜಾಮ್ ಸಂಭವಿಸಿ ಪ್ರಯಾಣಿಕರು ಬಹಳಷ್ಟು ತೊಂದರೆ ಅನುಭವಿಸಿದ ಪ್ರಸಂಗ ಜರುಗಿದೆ. ಕೊಲ್ಹಾರ ಕಡೆಯಿಂದ ಬಸವನಬಾಗೇವಾಡಿ ಕಡೆಗೆ ಹೋಗುವ ಮಾರ್ಗದಲ್ಲಿ ತೆಲಗಿ ರೈಲ್ವೆ ಅಂಡರ್‌ಪಾಸ್ ಬಳಿ ಕುಲಕರ್ಣಿಯವರ ಮನೆಯ ಹತ್ತಿರ ಈ ಘಟನೆ ಸಂಭವಿಸಿದೆ. ಈ ವೇಳೆ ಯಾವ ವಾಹನಗಳು ಸಂಚರಿಸದ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಭಾರಿ ಅನಾಹುತ ಒಂದು ತಪ್ಪಿದೆ. ಈ ದೃಶ್ಯ ಕಂಡ ವಾಹನ ಚಾಲಕರು ಹಾಗೂ ಪ್ರಯಾಣಿಕರು ಒಂದು ಕ್ಷಣ ಗಾಬರಿಯಾಗಿದ್ದಾರೆ. ನಂತರ ರೈಲ್ವೆ ಇಲಾಖೆಯವರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೋಲಿಸ್‌ರು ಸ್ಥಳಕ್ಕೆ ಧಾವಿಸಿ ರಸ್ತೆಯನ್ನು ತೆರವುಗೊಳಿಸಿದರು.

ಈ ಘಟನೆ ಕಂಡ ಪ್ರತ್ಯಕ್ಷದರ್ಶಿ ತಾಲೂಕಿನ ಬಳೂತಿಯ ನಿವೃತ್ತ ಮೆಟ್ರೋ ಇಂಜನೀಯರ್‌ ನಾಗಪ್ಪ ಹೆಬ್ಬಿ ಮಾತನಾಡಿ, ತೆಲಗಿ ಬಳಿ ರೈಲ್ವೆ ಹಳಿ ಕೆಳಗಡೆ ವಾಹನಗಳು ಹಾಗೂ ಸಾರ್ವಜನಿಕರಿಗೆ ಸಂಚರಿಸಲಿಕ್ಕೆ ಅಂಡರ್‌ಪಾಸ್‌ನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಸೇತುವೆಯು ಕೆಳಮಟ್ಟದಾಗಿದೆ. ಈ ರೀತಿ ಕಾಮಗಾರಿಗೆ ಯಾವ ಇಂಜನೀಯರ್‌ ಸಹ ಅಧಿಕೃತವಾಗಿ ಅನುಮೋದನೆ ( ಸರ್ಟಿಪೈಡ್ ) ನೀಡುವುದಿಲ್ಲ. ಈಗಾಗಲೇ ಈ ಕುರಿತು ಸುಮಾರು ವರ್ಷಗಳಿಂದ ಸಂಬಂಧಪಟ್ಟ ಇಲಾಖೆಯವರಿಗೆ ಗಮನಕ್ಕೆ ತಂದರೂ ಸಹ ಯಾರು ಇದರ ಬಗ್ಗೆ ಕ್ರಮವಹಿಸಿಲ್ಲ. ರಾಷ್ಟ್ರೀಯ ಹೆದ್ದಾರಿ 218 ಹಾಗೂ 50ನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದು, ಹೀಗಾಗಿ ರೈಲ್ವೆ ಹಳಿ ಕೆಳಗಡೆ ಅಂಡರ್‌ಪಾಸ್‌ನ್ನು ಚಿಕ್ಕದಾಗಿ ನಿರ್ಮಿಸಿ ವಾಹನಗಳಿಗೆ ಸಂಚರಿಸಲಿಕ್ಕೆ ನಿಯಂತ್ರಣ ಹೇರಲು ಬರುವುದಿಲ್ಲ ಇದು ಕಾನೂನು ಬಾಹಿರವಾಗಿದೆ ಎಂದರು.

ಈ ಮೊದಲು ಇಲ್ಲಿ ಲೆವಲ್ ಕ್ರಾಸ್ಸಿಂಗ್‌ ಬ್ರಿಡ್ಜ್ ಇತ್ತು. ಅಲ್ಲಿ ಯಾವುದೇ ಅಂಡರ್‌ಪಾಸ್‌ ಜಾಗವಿರಲಿಲ್ಲ. ಆದರೆ, ನೀರು ಹೋಗಲಿಕ್ಕೆ ಬಿಟ್ಟ ಕ್ರಾಸ್ ಡ್ರೈನೆಜ್‌ನ್ನು ಅವೈಜ್ಞಾನಿಕವಾಗಿ ರೈಲ್ವೆ ಇಲಾಖೆಯವರು ಅಂಡರ್ ಪಾಸ್ ಮಾಡಿದ್ದಾರೆ. ಇದರಿಂದ ಈ ಮೂಲಕ ಹಾದು ಹೋಗುವ ಪ್ರಯಾಣಿಕರಿಗೆ ಹಾಗೂ ವಾಹನಗಳಿಗೆ ನಿತ್ಯ ಬಹಳಷ್ಟು ತೊಂದರೆಯಾಗುತ್ತಿದೆ. ಕಾರಣ ಓವರ್ ಬ್ರಿಡ್ಜ್ ನಿರ್ಮಿಸಬೇಕೆಂದು ರೈಲ್ವೆ ಇಲಾಖೆಯವರಿಗೆ ಹಾಗೂ ಜಿಲ್ಲೆಯ ಸಂಸದರಿಗೆ ಒತ್ತಾಯಿಸಿದರು.


ತೆಲಗಿ ಬಳಿ ರೈಲ್ವೇ ಇಲಾಖೆಯವರು ನಿರ್ಮಿಸಿದ ಅಂಡರ್‌ಪಾಸ್ ಅವೈಜ್ಞಾನಿಕವಾಗಿದ್ದು, ಈ ಮೂಲಕ ಹಾದುಹೋಗುವ ವಾಹನಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ಈಗಾಗಲೇ ರೈಲ್ವೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಶಾಸಕರು ತಂದರೂ ಕೂಡಾ ಯಾವುದೇ ಕ್ರಮಕೈಗೊಂಡಿಲ್ಲ. ನಮ್ಮ ಜಿಲ್ಲೆಯ ಸಂಸದರಾದ ರಮೇಶ ಜಿಗಜಿಣಗಿಯವರು ಹಾಗೂ ರೈಲ್ವೆ ಇಲಾಖೆಯವರು ಕೂಡಲೇ ಗಮನ ಹಿರಿಸಿ ಓವರ್ ಬ್ರಿಡ್ಜ್‌ ನಿರ್ಮಿಸಬೇಕು.

- ನಾಗಪ್ಪ ಹೆಬ್ಬಿ, ಪಿ.ಇ ,ಎಫ್.ಐ.ಇ ನಿವೃತ್ತ ಮೆಟ್ರೋ ಎಡಿಷನಲ್ ಜನರಲ್ ಮ್ಯಾನೇಜರ್ ಬಳೂತಿ