ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಯಾವ ರೀತಿ ಬಳಕೆಯಾಗುತ್ತಿವೆ. ಗರ್ಭಿಣಿ ಸ್ತ್ರೀಯರನ್ನು ಸೌಲಭ್ಯದಿಂದ ವಂಚಿಸಿ, ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಹೇಗೆಲ್ಲಾ ಅನುಕೂಲ ಮಾಡಿಕೊಡುತ್ತಿವೆ ಎನ್ನುವುದರ ಸತ್ಯ ಸಂಗತಿ ಶುಕ್ರವಾರ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯಿಂದ ಬಹಿರಂಗಗೊಂಡಿದೆ.

ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿರುವ ಜಾರಿ ಅಧಿಕಾರಿ ಕಚೇರಿ ಹಾಗೂ ಕೆ.ಆರ್.ಪೇಟೆಯ ನಾವಿ ಡಯಾಗ್ನೋಸ್ಟಿಕ್ ಸೆಂಟರ್ ಹಾಗೂ ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್‌ಗಳೂ ಸೇರಿದಂತೆ ಒಟ್ಟು ೯ ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸುವ ಮೂಲಕ ಮಹತ್ವದ ಸಂಗತಿಗಳನ್ನು ಬೆಳಕಿಗೆ ತಂದಿದ್ದಾರೆ. ಲೋಕಾಯುಕ್ತ ವರದಿಯನ್ನು ನೋಡಿದರೆ ಜಿಲ್ಲೆಯೊಳಗೆ ಸದ್ದಿಲ್ಲದೆ ಅಕ್ರಮವಾಗಿ ಭ್ರೂಣ ಲಿಂಗ ಪತ್ತೆಯಾಗುತ್ತಿರುವ ಬಗ್ಗೆ ಅನುಮಾನಗಳು ದಟ್ಟವಾಗಿ ಮೂಡಲಾರಂಭಿಸಿವೆ.

ಕೆ.ಆರ್.ಪೇಟೆ ತಾಲೂಕು ಕುಪ್ಪಹಳ್ಳಿ ಗ್ರಾಮದ ಕೆ.ಎನ್.ಮಂಜುನಾಥ ಅವರು ಕೆ.ಆರ್.ಪೇಟೆ ಪಟ್ಟಣದ ನಾವಿ ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್‌ಗಳು ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್ ಯಂತ್ರಗಳನ್ನು ಅಕ್ರಮವಾಗಿ ಬಳಕೆ ಮಾಡಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದಾರೆ. ಸ್ಕ್ಯಾನಿಂಗ್ ಯಂತ್ರಗಳನ್ನು ಪಿಸಿ, ಪಿಎನ್‌ಡಿಟಿ ಕಾಯ್ದೆ ನಿಯಮದಂತೆ ನೋಂದಣಿ ಮಾಡಿಸದೆ ಅರ್ಹವಲ್ಲದ ವೈದ್ಯಕೀಯ ಸಿಬ್ಬಂದಿ ಅಲ್ಟ್ರಾಸೌಂಡ್ ಯಂತ್ರಗಳನ್ನು ಉಪಯೋಗಿಸಿ ಭ್ರೂಣಲಿಂಗ ತಿಳಿಸಿ ಹಣ ವಸೂಲಿ ಮಾಡುತ್ತಿದ್ದಾರೆ. ಇದು ಹೆಣ್ಣು ಭ್ರೂಣ ಹತ್ಯೆಗೆ ಕಾರಣವಾಗುವ ದುಷ್ಕೃತ್ಯವಾಗಿದೆ ಎಂದು ಆರೋಪಿಸಿ ಉಪ ಲೋಕಾಯುಕ್ತ ಬಿ.ವೀರಪ್ಪ ಅವರಿಗೆ ದೂರು ನೀಡಿದ್ದರು.


ಈ ದೂರಿನನ್ವಯ ಶೋಧನೆ ಮಾಡಲು ಉಪ ಲೋಕಾಯುಕ್ತರು ಮಂಡ್ಯ ಲೋಕಾಯುಕ್ತ ಉಪಾಧೀಕ್ಷಕ ಎಚ್.ಡಿ.ಸುನಿಲ್‌ಕುಮಾರ್, ಮೈಸೂರು ಪೊಲೀಸ್ ಉಪಾಧೀಕ್ಷಕ ಪಿ.ವಿ.ವೆಂಕಟೇಶ್, ಬೆಂಗಳೂರು ದಕ್ಷಿಣ ಜಿಲ್ಲೆ ಲೋಕಾಯುಕ್ತ ಉಪಾಧೀಕ್ಷಕ ಜಿ.ಶಿವಪ್ರಸಾದ್, ಮಂಡ್ಯ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಎಂ.ರವಿಕುಮಾರ್, ಆರ್.ಜಿ.ಲೇಪಾಕ್ಷಮೂರ್ತಿ, ಬಿ.ಪಿ.ಬ್ಯಾಟರಾಯಗೌಡ, ಚಾಮರಾಜನಗರ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಂ.ಕೆ.ಲೋಯಿತ್‌ಕುಮಾರ್, ಮೈಸೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಜಿ.ಆರ್.ವಿಜಯ್‌ಕುಮಾರ್, ಬೆಂಗಳೂರು ದಕ್ಷಿಣ ಪೊಲೀಸ್ ನಿರೀಕ್ಷಕ ಬಿ.ಎನ್.ಸಂದೀಪ್‌ಕುಮಾರ್ ಅವರನ್ನೊಳಗೊಂಡ ೯ ಅಧಿಕಾರಿಗಳ ತಂಡವನ್ನು ರಚಿಸಿ ಶೋಧನಾ ವಾರೆಂಟ್ ಹೊರಡಿಸಿದ್ದರು.

ಶುಕ್ರವಾರ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ತಂಡ ೯ ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಿ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿರುವ ಜಾರಿ ಅಧಿಕಾರಿ ಕಚೇರಿ ಹಾಗೂ ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಬಳಕೆಯಲ್ಲಿ ನ್ಯೂನತೆಗಳು ಮತ್ತು ಕರ್ತವ್ಯಲೋಪಗಳನ್ನು ಪತ್ತೆಹಚ್ಚಿದ್ದಾರೆ. ಇದು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆಗೆ ಪುಷ್ಠಿ ನೀಡುವಂತಿವೆ.

ನಾವಿ ಡಯಾಗ್ನೋಸ್ಟಿಕ್ ಸೆಂಟರ್:

ಕೆ.ಆರ್.ಪೇಟೆ ಪಟ್ಟಣದ ನಾವಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ೨೦೨೪ನೇ ಸಾಲಿನಲ್ಲಿ ೧೯ ಮತ್ತು ೨೦೨೫ನೇ ಸಾಲಿನಲ್ಲಿ ೫ ಸೇರಿದಂತೆ ಒಟ್ಟು ೨೪ ಅಪ್ರಾಪ್ತ ಗರ್ಭಿಣಿ ಹೆಣ್ಣು ಮಕ್ಕಳಿಗೆ ಸ್ಕ್ಯಾನಿಂಗ್ ಮಾಡಿದ್ದು, ಅಪ್ರಾಪ್ತ ವಯಸ್ಸಿನ ಗರ್ಭಿಣಿಯರು ಸ್ಕ್ಯಾನಿಂಗ್‌ಗೆ ಬಂದ ಸಮಯದಲ್ಲಿ ಕಲಂ ೧೯ರ ಪೋಕ್ಸೋ ಆ್ಯಕ್ಟ್ ರೀತ್ಯಾ ನಿಯಮಾನುಸಾರ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಸಂಬಂಧಪಟ್ಟ ಪ್ರಾಧಿಕಾರಕ್ಕೆ ವರದಿ ಮಾಡದೆ ಕಾನೂನನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿದೆ.

ಡಯಾಗ್ನೋಸ್ಟಿಕ್ ಸೆಂಟರ್‌ಗೆ ಸ್ಕ್ಯಾನಿಂಗ್‌ಗೆ ಬಂದಿದ್ದ ಗರ್ಭಿಣಿಯರ ವಿವರವನ್ನು ನೋಂದಾಯಿಸಿರುವ ೨೦೨೪ ಮತ್ತು ೨೦೨೫ನೇ ಸಾಲಿನ ರಿಜಿಸ್ಟರ್‌ನಲ್ಲಿ ಕೆಲವು ಹೆಣ್ಣು ಮಕ್ಕಳ ವಿವರವನ್ನು ನೋಂದಾಯಿಸದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್:

ಕೆ.ಆರ್.ಪೇಟೆ ಪಟ್ಟಣದ ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ೨೦೧೮ನೇ ಸಾಲಿನಿಂದ ಈವರೆಗೆ ೧೦,೧೦೧ ಗರ್ಭಿಣಿಯರಿಗೆ ಸ್ಕ್ಯಾನಿಂಗ್‌ಗಳನ್ನು ಮಾಡಿದ್ದು, ಈ ಪೈಕಿ ಆ್ಯಂಟೆನಾಟಲ್ ಸೋನೋಗ್ರಫಿ ರಿಜಿಸ್ಟರ್‌ನಲ್ಲಿ ಕೇವಲ ೩೬೨೯ ಪ್ರಕರಣಗಳ ಮಾಹಿತಿಯನ್ನು ಮಾತ್ರ ನಮೂದಿಸಿದ್ದು, ಉಳಿದ ೬೪೭೨ ಸ್ಕ್ಯಾನಿಂಗ್ ವಿವರಗಳನ್ನು ನಮೂದಿಸಿಲ್ಲದಿರುವುದು ಬೆಳಕಿಗೆ ಬಂದಿದೆ.

ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ನಿಯಮಬಾಹೀರವಾಗಿ ೭ ಅಪ್ರಾಪ್ತ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಿದ್ದು, ಇವರು ಸ್ಕ್ಯಾನಿಂಗ್‌ಗೆ ಬಂದ ಸಮಯದಲ್ಲಿ ಪೊಲೀಸ್ ಠಾಣೆ ಅಥವಾ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡದೆ ಕಾನೂನು ಉಲ್ಲಂಘಿಸಿದ್ದಾರೆ. ೧೮ ವರ್ಷ ಮೇಲ್ಪ್ಪಟ್ಟ ೨೦ ವರ್ಷ ಒಳಗಿನ ಮಹಿಳೆಯರಿಗೆ ವಯಸ್ಸಿನ ದೃಢೀಕರಣ ದಾಖಲಾತಿಯನ್ನು ಪಡೆಯದೆ ೬೪ ಗರ್ಭಿಣಿ ಸ್ತ್ರೀಯರಿಗೆ ಸ್ಕ್ಯಾನಿಂಗ್ ಮಾಡಿ ನಿಯಮ ಉಲ್ಲಂಘನೆ ಮಾಡಿರುವುದು ಗೊತ್ತಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ:

ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ ಕಲಂ ೮(೧)ರ ರೀತ್ಯಾ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ೯೦ ದಿನಗಳಿಗೊಮ್ಮೆ ಪರಿವೀಕ್ಷಣೆ ಮಾಡಿ ಪರಿವೀಕ್ಷಣಾ ವರದಿಯನ್ನು ನಿರ್ವಹಿಸಬೇಕು. ಆದರೆ, ಈ ಕುರಿತಂತೆ ಯಾವುದೇ ಮಾಹಿತಿ ಮತ್ತು ದಾಖಲೆಗಳನ್ನು ನಿರ್ವಹಿಸಿಲ್ಲದಿರುವುದು ದಾಳಿ ವೇಳೆ ಕಂಡುಬಂದಿದೆ.

ಪಾಂಡವಪುರ ಸಾರ್ವಜನಿಕ ಆಸ್ಪತ್ರೆ:

ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ೨೦೧೭ರಂದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರವನ್ನು ಸರಬರಾಜು ಮಾಡಲಾಗಿದೆ. ಈ ಯಂತ್ರವನ್ನು ನಿರ್ವಹಿಸುವ ರೇಡಿಯಾಲಜಿಸ್ಟ್ ಹುದ್ದೆ ಖಾಲಿ ಇದ್ದರೂ ಭರ್ತಿ ಮಾಡಿಲ್ಲ. ಖಾಲಿ ಇರುವ ಬಗ್ಗೆ ಮೇಲಧಿಕಾರಿಗಳಿಗೆ ಕೋರಿಕೆ ಪತ್ರವನ್ನು ಸಲ್ಲಿಸದೆ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ತಿಳಿದುಬಂದಿದೆ.

ಮದ್ದೂರು ಸಾರ್ವಜನಿಕ ಆಸ್ಪತ್ರೆ:

ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರ ಮಂಜೂರಾಗಿದ್ದು, ಆದರೆ, ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಶೀಲಾ ಅವರಿಗೆ ಅಲ್ಟ್ರಾಸೌಂಡ್ ಯಂತ್ರವನ್ನು ಉಪಯೋಗಿಸುವ ಬಗ್ಗೆ ತರಬೇತಿ ಹೊಂದಿಲ್ಲದಿರುವುದು ದಾಳಿ ವೇಳೆ ತಿಳಿದುಬಂದಿದೆ.

ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆ:

ಸಾರ್ವಜನಿಕ ಆಸ್ಪತ್ರೆಯ ಗರ್ಭಿಣಿ ಸ್ತ್ರೀಯರ ನಿರೀಕ್ಷಣಾ ಕೊಠಡಿಯಲ್ಲಿ ಅಗತ್ಯ ಮೂಲಸೌಕರ್ಯಗಳಾದ ಸೂಕ್ತ ಗಾಳಿ, ಬೆಳಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲದಿರುವುದು ದಾಳಿ ಸಮಯದಲ್ಲಿ ಕಂಡುಬಂದಿದೆ.

ಮಳವಳ್ಳಿ ಸಾರ್ವಜನಿಕ ಆಸ್ಪತ್ರೆ:

ಸಾರ್ವಜನಿಕ ಆಸ್ಪತ್ರೆಗೆ ೨೦೨೨ರಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಯಂತ್ರವನ್ನು ಸರಬರಾಜು ಮಾಡಿದ್ದು, ಸ್ಕ್ಯಾನಿಂಗ್ ಯಂತ್ರ ನಿರ್ವಹಿಸುವ ರೇಡಿಯಾಲಜಿಸ್ಟ್ ಹುದ್ದೆ ಖಾಲಿ ಇದ್ದರೂ ಸಹ ಭರ್ತಿ ಮಾಡಿಲ್ಲ. ಭರ್ತಿ ಮಾಡುವ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಕೂಡ ಬರೆದಿಲ್ಲ. ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ನವರಿಗೆ ಅನುಕೂಲ ಮಾಡಿಕೊಡುತ್ತಿರುವುದು ಗೊತ್ತಾಗಿದೆ.

ಸಕ್ಷಮ ಪ್ರಾಧಿಕಾರಿಗಳಾದ ಮಂಡ್ಯ ಹಾಗೂ ಪಾಂಡವಪುರ ಉಪ ವಿಭಾಗಾಧಿಕಾರಿಗಳು ಜಿಲ್ಲಾ ವ್ಯಾಪ್ತಿಯಲ್ಲಿರುವ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕಿದ್ದು, ಒಮ್ಮೆಯೂ ಪರಿಶೀಲನೆ ಮಾಡಿರುವುದು ಕಂಡುಬಂದಿರುವುದಿಲ್ಲ ಎಂದು ಲೋಕಾಯುಕ್ತ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.ಪ್ರಮುಖ ಅಂಶಗಳು

-ನಾವಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ೨ ವರ್ಷದಲ್ಲಿ ೨೪ ಅಪ್ತಾಪ್ತ ಗರ್ಭಿಣಿಯರಿಗೆ ಸ್ಕ್ಯಾನಿಂಗ್

-೨೦೨೪ ಮತ್ತು ೨೦೨೫ನೇ ಸಾಲಿನ ರಿಜಿಸ್ಟರ್‌ನಲ್ಲಿ ಕೆಲವು ಹೆಣ್ಣು ಮಕ್ಕಳ ವಿವರ ನಮೂದಿಸಿಲ್ಲ

-ಕುಶಾಲ್ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ೭ ಅಪ್ತಾಪ್ತ ಗರ್ಭಿಣಿಯರಿಗೆ ಸ್ಕ್ಯಾನಿಂಗ್

-ವಯಸ್ಸಿನ ದೃಢೀಕರಣವಿಲ್ಲದೆ ೬೪ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಲಾಗಿದೆ

-೨೦೧೮ರಿಂದ ಈವರೆಗೆ ೧೦,೧೦೧ ಸ್ಕ್ಯಾನಿಂಗ್ ಮಾಡಿದ್ದರೂ ೩೬೨೯ ಮಾತ್ರ ದಾಖಲು, ಉಳಿದವು ದಾಖಲಿಲ್ಲ

-ತಾಲೂಕು ಆಸ್ಪತ್ರೆಗಳಲ್ಲಿ ರೇಡಿಯಾಲಜಿಸ್ಟ್‌ಗಳಿಲ್ಲ, ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ಶಿಫಾರಸು