ಕನ್ನಡಪ್ರಭ ವಾರ್ತೆ ಮಂಡ್ಯ
ತಾಯಂದಿರು ಆರೋಗ್ಯದಿಂದ ಇದ್ದಾಗ ಸ್ವಸ್ಥ್ಯ ಸಮಾಜದ ಸಕಲ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಮಿಮ್ಸ್ ಸಭಾಂಗಣದಲ್ಲಿ ಮಂಡ್ಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ಸೊಸೈಟಿ ವತಿಯಿಂದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ(ಓಬಿಜಿ), ಆದಿಚುಂಚನಗಿರಿ ವಿಶ್ವವಿದ್ಯಾಲಯ, ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿನಗಳ ಮಹಿಳಾ ಆರೋಗ್ಯ-ಸಮಾಜದ ಶಕ್ತಿ ಘೋಷವಾಕ್ಯದ 6 ನೇ ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರ ಸಮ್ಮೇಳನ (ಕೆಎಸ್‌ಜಿಒಎ) ದ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಮಾಜದ ಕುಟುಂಬ ವ್ಯವಸ್ಥೆಯಲ್ಲಿ ತಾಯಂದಿರುವ ಸದಾ ನಗುತ್ತಿರುತ್ತಾರೆ. ಅಲ್ಲಿ ಗಂಡಸರಷ್ಟೇ ಅಲ್ಲ ದೇವತೆಗಳು ನಗುತ್ತಿರುತ್ತಾರೆ. ಮನೆಯಲ್ಲಿ ಅಮ್ಮಂದಿರು ಚೆನ್ನಾಗಿದ್ದರೆ ಎಲ್ಲವೂ ಸುಗಮವಾಗಿ ನಡೆಯುತ್ತದೆ. ಅಮ್ಮ ಅತ್ತರೆ ಸೂತಕದ ಛಾಯೆ ಬರುತ್ತದೆ ಎಂದು ನುಡಿದರು.ಈ ಸಮ್ಮೇಳವನ್ನು ಮಹಿಳಾ ಆರೋಗ್ಯ-ಸಮಾಜದ ಶಕ್ತಿ ಎಂಬ ಘೋಷವಾಕ್ಯದೊಂದಿಗೆ ನಡೆಸುತ್ತಿರುವುದು ಅರ್ಥಪೂರ್ಣವಾಗಿದೆ. ಮಕ್ಕಳು, ತಾಯಂದಿರು ಸಂತೋಷ ಮತ್ತು ಆರೋಗ್ಯವಾಗಿದ್ದರೆ ಸಮಾಜ ಶಕ್ತಿಯುತವಾಗುತ್ತದೆ. ಇವತ್ತಿನ ಸಮಾಜ ನಿರೀಕ್ಷೆ ಮಾಡುತ್ತಿರುವುದು ಬದಲಾವಣೆಯೊಂದಿಗೆ ಜ್ಞಾನ-ತಂತ್ರಜ್ಞಾನವಾಗಿದೆ. ಕೃತಕ ಬುದ್ದಿಮತ್ತೆ(ಎಐ) ಎಲ್ಲಾ ಕಡೆ ಅಳವಡಿಕೆಯಾಗುತ್ತಿದೆ. ಮೆಡಿಕಲ್ ವಿದ್ಯಾರ್ಥಿಗಳು ಕೂಡ ತಂತ್ರಜ್ಞಾನ ಬಳಕೆಯಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಸಂಬಂಧಪಟ್ಟ ಪರಿಕರಗಳ ವಸ್ತು ಪ್ರದರ್ಶನ ನಡೆಯಿತು. ಪ್ರಸೂತಿ ಮತ್ತು ಸ್ತ್ರೀರೋಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರನ್ನು ಗಣ್ಯರು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಆಹಾರ ಆಯೋಗ ಅಧ್ಯಕ್ಷ ಮತ್ತು ಎಂಓಜಿಎಸ್ ಸಂಸ್ಥಾಪಕ ಡಾ.ಎಚ್.ಕೃಷ್ಣ, ಮಿಮ್ಸ್ ನಿರ್ದೇಶಕ ಡಾ. ಪಿ.ನರಸಿಂಹಸ್ವಾಮಿ, ಪ್ರಾಂಶುಪಾಲ ಡಾ. ಎಂ.ಹನುಮಂತಪ್ರಸಾದ್, ಏಮ್ಸ್ ಪ್ರಾಂಶುಪಾಲ ಡಾ. ಎಂ.ಜಿ.ಶಿವರಾಮು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಕೆಎಸ್‌ಒಜಿಎ ಮುಖ್ಯ ಪೋಷಕ ಡಾ.ಎಂ.ಜಿ.ಹಿರೇಮಠ, ಡಾ.ಎಚ್.ನಾಗರಾಜ್, ಡಾ. ಶೋಭಾ ಎನ್.ಗುಡಿ, ಕೆಎಸ್‌ಒಜಿಎ ಅಧ್ಯಕ್ಷೆ ಡಾ. ದುರ್ಗಾದಾಸ್ ಆಸ್ರಣ್ಣ, ಕಾರ್ಯದರ್ಶಿ ಡಾ.ಶೋಭಾ ಬೆಂಬಳಗಿ ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.