ಅಕ್ರಮ ಮದ್ಯ ಮಾರಾಟ: ಮಹಿಳೆಯರ ಆಕ್ರೋಶ

| Published : May 28 2024, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಪಟ್ಟಣದ ಗಂಗಾನಗರ, ಐತಿಹಾಸಿಕ ಕರಿದೇವರ ದೇವಸ್ಥಾನ ರಾವುತರಾಯ ದೇವಸ್ಥಾನದ ಹತ್ತಿರ, ಅಂಬೇಡ್ಕರ್ ವೃತ್ತದಿಂದ ತಾಂಡಾ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಪಟ್ಟಣದ ಮಹಿಳೆಯರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಪಟ್ಟಣದ ಗಂಗಾನಗರ, ಐತಿಹಾಸಿಕ ಕರಿದೇವರ ದೇವಸ್ಥಾನ ರಾವುತರಾಯ ದೇವಸ್ಥಾನದ ಹತ್ತಿರ, ಅಂಬೇಡ್ಕರ್ ವೃತ್ತದಿಂದ ತಾಂಡಾ ಮಾರ್ಗವಾಗಿ ಹೋಗುವ ರಸ್ತೆಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಕೂಡಲೇ ಕ್ರಮಕೈಗೊಳ್ಳುವಂತೆ ಪಟ್ಟಣದ ಮಹಿಳೆಯರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ದಂಡಾಧಿಕಾರಿಗಳಿಗೆ ಸೋಮವಾರ ಮನವಿ ಪತ್ರ ಸಲ್ಲಿಸಿದ ಕಮಲಬಾಯಿ ಬಿರಾದಾರ ಸೇರಿದಂತೆ ಹಲವಾರು ಮಹಿಳೆಯರು, ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬಡ ಕುಟುಂಬಗಳು ಒಂದೊಂದಾಗಿ ಬೀದಿಗೆ ಬೀಳುತ್ತಿದೆ. ಮೊದಲೇ ಬೆಲೆಯೇರಿಕೆಯಿಂದ ತತ್ತರಿಸಿರುವ ಜನರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಬೆಳಗ್ಗೆ ಟೀ ಕುಡಿಯದಿದ್ದರೂ ಪರವಾಗಿಲ್ಲ, ಮದ್ಯ ಮಾತ್ರ ಬೇಕು ಎನ್ನುವ ಪರಿಸ್ಥಿತಿಗೆ ಯುವಕರು ಬಂದಿದ್ದಾರೆ ಎಂದು ದೂರಿದರು.

ಯುವ ಜನಾಂಗ ಬೆಳಗ್ಗೆಯಾಗುತ್ತಿದ್ದಂತೆ ಮದ್ಯದ ಅಂಗಡಿ ಕಾಯುತ್ತಿದ್ದಾರೆ. ಹೆಂಡತಿಯ ಬಂಗಾರ ಅಡವಿಟ್ಟು, ತಾಯಿಯ ಮಾಂಗಲ್ಯ ಮಾರಿ ಬಡ ಕುಟುಂಬಗಳು ಬೀದಿಗೆ ಬಂದಿವೆ. ಸರ್ಕಾರ ಬಡವರಿಗಾಗಿ ಒಂದು ರೂಪಾಯಿಗೆ ಕೆಜಿ ಅಕ್ಕಿ ನೀಡುತ್ತಾ, ಅದರ ಹತ್ತರಷ್ಟು ಮದ್ಯ ಮಾರಾಟ ಮಾಡುವ ಮೂಲಕ ಬಡವರಿಂದ ಕಿತ್ತುಕೊಳ್ಳುತ್ತಿದೆ. ಅಬಕಾರಿ ಇಲಾಖೆ ಕಣ್ಣಿದ್ದೂ ಕುರುಡಾಗಿದೆ. ಈಗಲಾದರೂ ಅಕ್ರಮ ಮದ್ಯ ಮಾರಾಟಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣದ ಮಹಿಳೆಯರಾದ ಶೇಕು ಸಣ್ಣಕ್ಕಿ, ಲಕ್ಷ್ಮೀಬಾಯಿ ಪೂಜಾರಿ, ಸುಂದ್ರಬಾಯಿ ಹಿಟ್ಟನಹಳ್ಳಿ, ಬಸಮ್ಮ ಕುಂಬಾರ, ಶಾರಾಭಾಯಿ ಹಿಟ್ಟನಹಳ್ಳಿ, ಲಕ್ಷ್ಮೀ ಸಣ್ಣಕ್ಕಿ, ವಿಜಯಲಕ್ಷ್ಮಿ ಕುಂಬಾರ, ಸಾವಿತ್ರಿ ಸಣ್ಣಕ್ಕಿ ಸೇರಿದಂತೆ ಹಲವಾರು ಜನ ಮಹಿಳೆಯರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

----------------------------------------

ಕೋಟ್‌

ದೇವರಹಿಪ್ಪರಗಿ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳಿಂದ ನಮಗೂ ಮಾಹಿತಿ ಬಂದಿದೆ. ಪರಿಶೀಲನೆಗೆ ಸಿಬ್ಬಂದಿ ಕಳಿಸಲಾಗಿದ್ದು, ಪಟ್ಟಣದ ಮಹಿಳೆಯರ ಜೊತೆಗೂಡಿ ಎಲ್ಲಾ ಅಂಗಡಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇಲಾಖೆಯ ವಾಹನದ ಸಮಸ್ಯೆಯಿಂದ ವಿಜಯಪುರದಲ್ಲಿ ನಿರ್ವಹಣೆಯಲ್ಲಿದ್ದು ಹಾಗೂ ಸಿಬ್ಬಂದಿ ವರ್ಗ ಕಡಿಮೆ ಇದ್ದಾರೆ. ಆದಷ್ಟು ಬೇಗ ಸಮಸ್ಯೆ ಸರಿಪಡಿಸುತ್ತೇವೆ.

-ರಾಜು ಹೊಸಮನಿ, ಪ್ರಭಾರಿ ಅಬಕಾರಿ ಸಿಪಿಐ ಸಿಂದಗಿ.

-----------------

ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬಡ ಕುಟುಂಬಗಳು ಒಂದೊಂದಾಗಿ ಬೀದಿಗೆ ಬೀಳುತ್ತಿದೆ. ಮೊದಲೇ ಬೆಲೆಯೇರಿಕೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಬೆಳಗ್ಗೆ ಟೀ ಕುಡಿಯದಿದ್ದರೂ ಪರವಾಗಿಲ್ಲ, ಮದ್ಯ ಮಾತ್ರ ಬೇಕು ಎನ್ನುವ ಪರಿಸ್ಥಿತಿಗೆ ಯುವಕರು ಬಂದಿದ್ದಾರೆ. ಸರ್ಕಾರ ಬಡವರಿಗಾಗಿ ಒಂದು ರೂಪಾಯಿಗೆ ಕೆಜಿ ಅಕ್ಕಿ ನೀಡುತ್ತಾ, ಅದರ ಹತ್ತರಷ್ಟು ಮದ್ಯ ಮಾರಾಟ ಮಾಡುವ ಮೂಲಕ ಬಡವರಿಂದ ಕಿತ್ತುಕೊಳ್ಳುತ್ತಿದೆ. ಅಬಕಾರಿ ಇಲಾಖೆ ಕಣ್ಣಿದ್ದು ಕುರುಡಾಗಿದೆ.

- ಕಮಲಬಾಯಿ ಬಿರಾದಾರ, ಮನವಿ ಸಲ್ಲಿಸಿದ ಮಹಿಳೆ.