ಸಾರಾಂಶ
ಮೊಳಕಾಲ್ಮುರು: ಪಟ್ಟಣ ವ್ಯಾಪ್ತಿಯಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಕೂಡಲೇ ಟೆಂಡರ್ ಕರೆಯಲು ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ ತಾಕೀತು ಮಾಡಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ 18 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, ಅದರಲ್ಲಿ 8 ಘಟಕಗಳು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇವೆ. ಉಳಿದ 10 ಘಟಕಗಳು ಡಿಎಂಎಫ್ ಅನುದಾನದಲ್ಲಿ ನಿರ್ಮಿತಿ ಕೇಂದ್ರದವರು ನಿರ್ಮಾಣ ಮಾಡಿದ್ದು, ನೀರು ಸರಬರಾಜು ಆಗುತ್ತಿಲ್ಲ. ಪ್ರಕರಣ ನ್ಯಾಯಾಲಯ ವ್ಯಾಪ್ತಿಯಲ್ಲಿ ಇರುವ ಕಾರಣ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನೀರಿನ ಘಟಕಗಳ ನಿರ್ವಹಣೆಗೆ ಕೂಡಲೇ ಟೆಂಡರ್ ಕರೆಯುವಂತೆ ತಿಳಿಸಿದರು.ಪಟ್ಟಣ ಪಂಚಾಯಿತಿ ಮಳಿಗೆಗಳ ಕುರಿತು ಬಾಡಿಗೆ ವಿಚಾರವಾಗಿ ಹಲವು ಬಾರಿ ಚರ್ಚೆ ನಡೆಸಿದರೂ ಪೂರ್ಣ ಪ್ರಮಾಣದಲ್ಲಿ ಬಾಡಿಗೆ ವಸೂಲಿಯಾಗುತ್ತಿಲ್ಲ. ಮಳಿಗೆಗಳ ಬಾಡಿಗೆ ವಸೂಲಿ ಚರ್ಚಿಸುವಂತೆ ಕೆಲ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 66 ಮಳಿಗೆಗಳಿದ್ದು, ಯಾರ ಹೆಸರಲ್ಲಿವೆ, ಯಾರ ಅನುಭವದಲ್ಲಿವೆ. ಎಂಬುದನ್ನು ಪರಿಶೀಲಿಸಿ ಎಂದು ಸಭೆಯಲ್ಲಿ ಉಪಾಧ್ಯಕ್ಷ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಅಬ್ದುಲ್ಲಾ, ಮಳಿಗೆಗಳ ಬಾಡಿಗೆ ಯಾರು ಎಷ್ಟು ಕಟ್ಟಿದ್ದಾರೆ. ಯಾರು ಎಷ್ಟು ಕಟ್ಟಬೇಕು ಎನ್ನುವುದನ್ನು ಪಟ್ಟಿ ಮಾಡಿ ಎಂದರು.ಮುಖ್ಯಾಧಿಕಾರಿ ಪಾಲಯ್ಯ ಮಾತನಾಡಿ, ಈಗಾಗಲೇ ಫಲಾನುಭವಿಗಳ ಪಟ್ಟಿ ಇದ್ದು, ಬಾಡಿಗೆ ಹೆಚ್ಚಿಸಬೇಕೆ ಅಥವಾ ಡಿಪಾಸಿಟ್ ಹಣ ಹೆಚ್ಚಿಸಬೇಕೆ ಎನ್ನುವುದನ್ನು ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿ ಎಂದರು.ಮಾಜಿ ಅಧ್ಯಕ್ಷ ಲಕ್ಷಣ ಮಾತನಾಡಿ, ಪಟ್ಟಣದಲ್ಲಿ ಚರಂಡಿ ಸ್ವಚ್ಛತೆಗಳಿಲ್ಲದೆ ಸೊಳ್ಳೆಗಳು ಹೆಚ್ಚುತ್ತಿವೆ. ಕೆಲಸ ಮಾಡದ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಿ ಹಾಗೂ ಅನುಮತಿ ಇಲ್ಲದೆ ಬ್ಲೀಚಿಂಗ್ ಮತ್ತು ಪೆನಾಯಿಲ್ ಸರಬರಾಜಿಗೆ ಅನುಮತಿ ನೀಡಲಾಗಿದೆ. ಸದಸ್ಯರ ಗಮನಕ್ಕೆ ತರದೆ ನಿಮ್ಮಷ್ಟಕ್ಕೆ ನೀವೇ ತೀರ್ಮಾನಿಸಿದರೆ ಚುನಾಯಿತ ಪ್ರತಿನಿಧಿಗಳು ಅಗತ್ಯ ಇಲ್ಲವೆ ಎಂದು ಬೇಸರ ವ್ಯಕ್ತ ಪಡಿಸಿದರು.
ಪಟ್ಟಣ ಪಂಚಾಯತಿ ಅಭಿವೃದ್ಧಿ ಕಾರ್ಯಗಳಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡದೆ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಿ. ಉಪಯೋಗವಿಲ್ಲದ ಕಡೆ ಕಾಮಗಾರಿ ನಿರ್ವಹಿಸಿದರೆ ಅದು ಸಾರ್ವಕನಿಕರ ಉಪಯೋಗಕ್ಕೆ ಬಾರದೆ ನಿಮಗೆ ಅನುಕೂಲವಾದಂತಾಗುತ್ತದೆ. ಎಲ್ಲಾ ಕಾಮಗಾರಿಗಳು ಸದಸ್ಯರ ಗಮನಕ್ಕೆ ತಂದು ನಿರ್ವಹಿಸುವಂತೆ ಸದಸ್ಯ ಟಿ.ಟಿ.ರವಿಕುಮಾರ್ ಹೇಳಿದರು.ಸ್ಲಮ್ ಬೋರ್ಡ್ ಮನೆಗಳ ಕುರಿತು ವ್ಯಾಪಕ ದೂರುಗಳು ವ್ಯಕ್ತವಾಗುತ್ತಿವೆ. ಅಳತೆ ಮತ್ತು ಕಾಮಗಾರಿ ಗುಣಮಟ್ಟ ಸರಿ ಇಲ್ಲವೆನ್ನುವ ಸಾರ್ವಜನಿಕ ಆರೋಪಗಳಿಗೆ ಉತ್ತರ ನೀಡಲು ಆಗುತ್ತಿಲ್ಲ. ಈ ವಿಚಾರವಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆದು ಕಾಮಗಾರಿ ಗುಣ ಮಟ್ಟ ಕುರಿತು ಪರಿಶೀಲನೆ ನಡೆಸುವಂತೆ ಸದಸ್ಯರು ಒಕ್ಕೊರಲವಾಗಿ ಒತ್ತಾಯಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ. ಮುಖ್ಯಾಧಿಕಾರಿ ಪಾಲಯ್ಯ, ಎಂಜಿನಿಯರ್ ಶ್ರೀನಿವಾಸ ಇದ್ದರು.