ಗಂಗಾವತಿ: ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಭಾನುವಾರ ನಗರದಲ್ಲಿ ಆಕರ್ಷಕ ಪಥ ಸಂಚಲನ ಜರುಗಿತು. ನಗರದ ಶ್ರೀ ಕೊಟ್ಟೂರೇಶ್ವರ ಶಾಲಾ ಮೈದಾನದಿಂದ ಪ್ರಾರಂಭಗೊಂಡು ಎರಡು ಮಾರ್ಗದಲ್ಲಿ ಗಣವೇಷದೊಂದಿಗೆ 1500ಕ್ಕೂ ಹೆಚ್ಚು ಸ್ವಯಂ ಸೇವಕರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಗಣವೇಷದೊಂದಿಗೆ ಭಾಗವಹಿಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಪ್ರಾರಂಭವಾಗಿ 101 ವರ್ಷಕ್ಕೆ ಕಾಲಿಡುತ್ತಿರುವ ಮತ್ತು ಸಂಘ ಪ್ರಾರಂಭವಾದ ದಿನವಾದ ವಿಜಯ ದಶಮಿಯ ಅಂಗವಾಗಿ ಗಂಗಾವತಿ ನಗರದಲ್ಲಿ ಪಥ ಸಂಚಲನ ನಡೆಯಿತು.ಇದಕ್ಕಿಂತ ಮೊದಲು ಭಾರತ ಮಾತೆ ಮತ್ತು ಆರ್ಎಸ್ಎಸ್ ಸಂಸ್ಥಾಪಕರ ಭಾವಚಿತ್ರಗಳಿಗೆ ಕೊಟ್ಟೂರು ಸ್ವಾಮೀಜಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ ಪುಷ್ಪಗುಚ್ಚ ಸಮರ್ಪಿಸಿದರು. ನಗರದ ವಾಲ್ಮೀಕಿ ವೃತ್ತ ಹಾಗೂ ಪಂಪಾನಗರ ಮಾರ್ಗವಾಗಿ ಸ್ವಯಂ ಸೇವಕರು ಎರಡು ಮಾರ್ಗಗಳಲ್ಲಿ ಪಥ ಸಂಚಲನ ನಡೆಸಿ, ಮಹಾತ್ಮ ಗಾಂಧಿ ವೃತ್ತದಲ್ಲಿ ಸಂಗಮಗೊಂಡರು. ಗಾಂಧಿ ವೃತ್ತದಲ್ಲಿ ಗಣವೇಷಧಾರಿಗಳು ಆಗಮಿಸುತ್ತಿದ್ದಂತೆಯೇ ನಾಗರಿಕರು, ಮಹಿಳೆಯರು ಪುಷ್ಪಗುಚ್ಚ ಸಮರ್ಪಿಸಿದರು.
ಕುಮಾರ ಸ್ವಾಮೀಜಿ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಲಕ್ಷ್ಮೀ ಅರುಣಾ ಜನಾರ್ದನ ರೆಡ್ಡಿ, ಆರ್ಎಸ್ಎಸ್ ಪ್ರಮುಖರಾದ ವೀಠಲ್ ಜೀ, ಸಂದೀಪ್, ಸಂತೋಷ ಕೆಲೋಜಿ, ವೀರೇಶ, ಹರೀಶ ಕುಲಕರ್ಣಿ, ವಾಸುದೇವ ನವಲಿ, ಬದರಿನಾಥ ಆದಾಪುರ, ನೀಲಕಂಠ ನಾಗಶೆಟ್ಟಿ, ಶರದಕುಮಾರ ದಂಡಿನ್, ಅಭಯ್ ನವಲಿ, ತಿಪ್ಪೇರುದ್ರಸ್ವಾಮಿ ಭಾಗವಹಿಸಿದ್ದರು.ಬಿಗಿ ಭದ್ರತೆ: ಪೊಲೀಸರು ಭದ್ರತೆ ಒದಗಿಸಿದ್ದರು. ಮೂವರು ಡಿವೈಎಸ್ಪಿ ಸೇರಿದಂತೆ 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಇದ್ದರು. ನಗರದ ಜಾಮೀಯಾ ಮಸೀದಿ ಮುಂಭಾಗದಲ್ಲಿ ಹಚ್ಚಿನ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು.