ಜಾತಿ ಕಾಲಂನಲ್ಲಿ ವಹ್ನಿಕುಲ ಕ್ಷತ್ರಿಯ ಎಂದೇ ನಮೂದಿಸಿ

| Published : Sep 22 2025, 01:00 AM IST

ಸಾರಾಂಶ

ಹೊಸಕೋಟೆ: ರಾಜ್ಯಾದ್ಯಂತ ಸೆ.22 ಸೋಮವಾರದಿಂದ ನಡೆಯಲಿರುವ ಜಾತಿಗಣತಿ ವೇಳೆ ಧರ್ಮವನ್ನು ಹಿಂದು ಎಂದು, ಜಾತಿಯನ್ನು ವಹ್ನಿಕುಲ ಕ್ಷತ್ರಿಯ ಎಂದು ನಮೂದಿಸುವಂತೆ ಶಿವನಾಪುರ ಶ್ರೀ ಆದಿಶಕ್ತಿ ಮಹಾ ಸಂಸ್ಥಾನ ಮಠದ ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ತಿಳಿಸಿದರು.

ಹೊಸಕೋಟೆ: ರಾಜ್ಯಾದ್ಯಂತ ಸೆ.22 ಸೋಮವಾರದಿಂದ ನಡೆಯಲಿರುವ ಜಾತಿಗಣತಿ ವೇಳೆ ಧರ್ಮವನ್ನು ಹಿಂದು ಎಂದು, ಜಾತಿಯನ್ನು ವಹ್ನಿಕುಲ ಕ್ಷತ್ರಿಯ ಎಂದು ನಮೂದಿಸುವಂತೆ ಶಿವನಾಪುರ ಶ್ರೀ ಆದಿಶಕ್ತಿ ಮಹಾ ಸಂಸ್ಥಾನ ಮಠದ ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಶಿವನಾಪುರ ಗ್ರಾಮದಲ್ಲಿರುವ ಆದಿಶಕ್ತಿ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಜಾತಿಗಣತಿ ವಿಚಾರದ ನಿರ್ಣಯ ಸಭೆಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ ಹೆಸರಿನಲ್ಲಿ ರಾಜ್ಯ ಸರ್ಕಾರ ಜಾತಿ ಸಮೀಕ್ಷೆಗೆ ಮುಂದಾಗಿದೆ. ಇದರಿಂದ ಸಾಕಷ್ಟು ಸಮಸ್ಯೆ ಜೊತೆಗೆ ಸಮುದಾಯಗಳ ಗೊಂದಲಕ್ಕೆ ಕಾರಣ ಆಗುತ್ತಿದೆ. ವಹ್ನಿಕುಲ ಕ್ಷತ್ರಿಯರು ಈ ಭೂಮಿಯ ಮಕ್ಕಳು, ನಮ್ಮ ಸಮುದಾಯವನ್ನು ವಿಭಾಗ ಮಾಡದೆ ಒಗ್ಗಟ್ಟಾಗಿ ಉಳಿಸಿಕೊಳ್ಳಬೇಕು. ಯಾವುದೇ ಉಪಜಾತಿ ಇದ್ದರೂ ಕೂಡ ವಹ್ನಿಕುಲ ಕ್ಷತ್ರಿಯ ಎಂದೇ ನಮೂದಿಸಿ. ಇದರಿಂದ ಸಮುದಾಯಕ್ಕೆ ಯಾವುದೇ ರೀತಿಯ ಮೀಸಲಾತಿ ವಂಚನೆಯಾಗದೆ ಉದ್ಯೋಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮೀಸಲಾತಿ ಸಿಗಲಿದೆ. ಅಲ್ಲದೆ ಮುಂದಿನ ಪೀಳಿಗೆಗೆ ಸಮುದಾಯದ ಉಳಿವಿಗೆ ಸಾಧ್ಯವಾಗುತ್ತದೆ ಎಂದರು.

ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಸಿ.ಜಯರಾಜ್ ಮಾತನಾಡಿ, ಜಾತಿಗಣತಿ ವೇಳೆ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗ ನಮ್ಮ ಸಮುದಾಯದ ಪ್ರತಿಯೊಬ್ಬರೂ ಕೂಡ ವಹ್ನಿಕುಲ ಕ್ಷತ್ರಿಯ ಎಂದು ನಮೂದು ಮಾಡಬೇಕು. ಪೀಠಾಧಿಪತಿಗಳಾದ ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಹಾಗೂ ರಾಜ್ಯ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ನೇತೃತ್ವದ ತಂಡ ಒಮ್ಮತದ ನಿರ್ಧಾರವನ್ನು ಕೈಗೊಂಡಿದೆ. ಇವರ ತೀರ್ಮಾನಕ್ಕೆ ಎಲ್ಲರ ಸಹಮತವಿದ್ದು ರಾಜ್ಯದಲ್ಲಿ ಅಗ್ನಿಕುಲ ಕ್ಷತ್ರಿಯ ಸಮಾಜ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು. ಗೊಂದಲ ಉಂಟುಮಾಡದೇ ಮಠದ ಸ್ವಾಮೀಜಿಗಳ ನಿರ್ಧಾರಕ್ಕೆ ಬದ್ಧರಾಗಿ ಎಂದರು.

ಹೂಡಿ ವಿಜಯ್‌ಕುಮಾರ್ ಮಾತನಾಡಿ, ರಾಜ್ಯದ ವಿವಿಧ ಭಾಗಗಳಲ್ಲಿ ತಿಗಳ, ವಹ್ನಿಕುಲ ಸೇರಿದಂತೆ ಹಲವಾರು ಉಪಜಾತಿಗಳಲ್ಲಿ ಗುರುತಿಸಿಕೊಂಡಿರುವ ನಾವು ಸರ್ಕಾರ ಮಾಡಿರುವ ಮೀಸಲಾತಿ ಪಡೆದುಕೊಳ್ಳಲು ಒಗ್ಗಟ್ಟಾಗಬೇಕಿದೆ. ಆದ್ದರಿಂದ ಯಾವುದೇ ರೀತಿಯ ಗೊಂದಲಗಳಿದ್ದರೂ ಕೂಡ ಎಲ್ಲವನ್ನು ಬಿಟ್ಟು ಸಮುದಾಯದ ಅಭಿವೃದ್ಧಿಗಾಗಿ ವಹ್ನಿಕುಲ ಕ್ಷತ್ರಿಯ ಎಂದು ನಮೂದಿಸಬೇಕು. ಇದರಿಂದ ಸರ್ಕಾರದ ಮಟ್ಟದಲ್ಲಿ ಸಮುದಾಯಕ್ಕೆ ಸಾಕಷ್ಟು ಬಲ ಬರುತ್ತದೆ ಎಂದರು.

ಸಭೆಯಲ್ಲಿ ಹಿರಿಯ ಮುಖಂಡ ಸುಬ್ಬಣ್ಣ, ಸಮಿತಿಯ ಉಪಾಧ್ಯಕ್ಷರಾದ ಸೋಮನಾಥ, ನಾಗರಾಜ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ನಾರಾಯಣಸ್ವಾಮಿ, ಮುಖಂಡರಾದ ಮಂಜುನಾಥ್, ಕೋಲಾರ ಪಲ್ಗುಣ ಇತರರು ಪಾಲ್ಗೊಂಡಿದ್ದರು.

ಫೋಟೋ: 21 ಹೆಚ್‌ಎಸ್‌ಕೆ 2

ಹೊಸಕೋಟೆ ತಾಲೂಕಿನ ಶಿವನಾಪುರದ ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠದಲ್ಲಿ ಜಾತಿಗಣತಿ ಕುರಿತಾಗಿ ಶ್ರೀ ಪ್ರಣವಾನಂದಪುರಿ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.