ಪಂಚಶೀಲ ತತ್ವಗಳ ಪಾಲಿಸಿದಲ್ಲಿ ಎಲ್ಲರಿಗೂ ಒಳಿತು: ಜ್ಞಾನಲೋಕ ಭಂತೇಜಿ

| Published : May 24 2024, 12:53 AM IST

ಪಂಚಶೀಲ ತತ್ವಗಳ ಪಾಲಿಸಿದಲ್ಲಿ ಎಲ್ಲರಿಗೂ ಒಳಿತು: ಜ್ಞಾನಲೋಕ ಭಂತೇಜಿ
Share this Article
  • FB
  • TW
  • Linkdin
  • Email

ಸಾರಾಂಶ

ಒಳ್ಳೆಯದನ್ನು ಮಾತಾಡುವುದು ಮತ್ತು ಕೇಳಿಸಿಕೊಳ್ಳುವುದರ ಜೊತೆಗೆ ಇತರರಿಗೆ ಒಳ್ಳೆಯದನ್ನು ಬಯಸುವುದೂ ಪುಣ್ಯದ ಕೆಲಸ ಎಂದು ಬೆಂಗಳೂರಿನ ದೇವನಹಳ್ಳಿಯ ಜ್ಞಾನಲೋಕ ಭಂತೇಜಿ ಗುರುಗಳು ನುಡಿದರು.

- ಹೊನ್ನಾಳಿಯಲ್ಲಿ 2568ನೇ ಬುದ್ಧ ಜಯಂತಿ ಕಾರ್ಯಕ್ರಮ - - -

ಹೊನ್ನಾಳಿ: ಒಳ್ಳೆಯದನ್ನು ಮಾತಾಡುವುದು ಮತ್ತು ಕೇಳಿಸಿಕೊಳ್ಳುವುದರ ಜೊತೆಗೆ ಇತರರಿಗೆ ಒಳ್ಳೆಯದನ್ನು ಬಯಸುವುದೂ ಪುಣ್ಯದ ಕೆಲಸ ಎಂದು ಬೆಂಗಳೂರಿನ ದೇವನಹಳ್ಳಿಯ ಜ್ಞಾನಲೋಕ ಭಂತೇಜಿ ಗುರುಗಳು ನುಡಿದರು.

ಪಟ್ಟಣದ ಟಿ.ಬಿ. ವೃತ್ತದ ಸರ್ಕಾರಿ ನೌಕರರ ಭವನದಲ್ಲಿ ವೈಶಾಖ ಬುದ್ಧ ಪೂರ್ಣಿಮೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ 2568ನೇ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪೂಜೆ ಮಾಡಿಸಿಕೊಳ್ಳುವ ಅರ್ಹತೆ ಇದ್ದವರಿಗೆ ಮಾತ್ರವೇ ಪೂಜೆ ಮಾಡುವ ಪರಿಪಾಠ ರೂಢಿಸಿಕೊಳ್ಳುವುದು ಉತ್ತಮ. ಸತ್ಸಂಗದಲ್ಲಿದ್ದು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ದಿನದಲ್ಲಿ 3 ಬಾರಿ ಪ್ರಾರ್ಥನೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಬೆನ್ನು ಮತ್ತು ಮಂಡಿನೋವು ಬರುವುದಿಲ್ಲ. ಮನಸ್ಸಿನಿಂದ ಮನಸ್ಸಿಗೆ ಪುಣ್ಯ ಹೋಗುತ್ತದೆ. ಪಂಚಶೀಲ ತತ್ವಗಳನ್ನು ಪಾಲಿಸುವುದರಿಂದ ಎಲ್ಲರಿಗೂ ಒಳಿತಾಗಲಿದೆ ಎಂದು ಹೇಳಿದರು.

ವಿಶ್ವದೆಲ್ಲೆಡೆ ಬುದ್ಧನ ಮಂದಿರಗಳಿದ್ದು, ಬೌದ್ಧಗುರುಗಳು ಆ ದೇಶಗಳಿಗೆ ಹೋದಾಗ ತುಂಬಾ ಗೌರವಾದರಗಳಿಂದ ಸತ್ಕರಿಸುತ್ತಾರೆ. ಬುದ್ಧನ ಜನ್ಮಭೂಮಿಯಿಂದ ಬಂದಿದ್ದೀರಿ ಎಂದು ಬೀಳ್ಕೊಡುಗೆ ನೀಡುವಾಗ ಅಶ್ರುತರ್ಪಣ ಮೂಲಕ ಕಳುಹಿಕೊಡುತ್ತಾರೆ ಎಂದು ವಿವರಿಸಿದರು.

ಉಪನ್ಯಾಸಕ ಬೆನಕನಹಳ್ಳಿ ಮೋಹನಕುಮಾರ್ ಮಾತನಾಡಿ, ನವದಂಪತಿ ಸೇರಿದಂತೆ ಕುಟುಂಬ ಸಮೇತ ಕಾರ್ಯಕ್ರಮಕ್ಕೆ ಬಂದಿರುವುದು ಸಂತಸ ತಂದಿದೆ. ಬುದ್ಧಧರ್ಮ ನಿಜವಾದ ಅರ್ಥದಲ್ಲಿ ಕೇವಲ ಧರ್ಮವಲ್ಲ, ಅದೊಂದು ಜೀವನಮಾರ್ಗ. ಪ್ರಮುಖವಾಗಿ ಅಧ್ಯಾತ್ಮಿಕ ಜೀವನ ಮಾರ್ಗವಾಗಿದೆ. ಎಲ್ಲ ಮಾನವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಖ, ಶಾಂತಿ, ಸಂಪತ್ತು, ಆರೋಗ್ಯಭಾಗ್ಯ ಕಂಡುಕೊಳ್ಳುವ ಏಕೈಕ ಮಾರ್ಗವಾಗಿದೆ ಎಂದು ವಿವರಿಸಿದರು.

ಕೃಷ್ಣಪ್ಪ ಕುಂಕುವ ಮಾತನಾಡಿದರು. ಧರ್ಮಚಾರಿ ಅಂಬೇಡ್ಕರ್ ಬೌದ್ಧ್ ಸಭೆಗೆ ಜ್ಞಾನಲೋಕ ಭಂತೇಜಿ ಗುರುಗಳ ಪರಿಚಯ ಮಾಡಿಕೊಟ್ಟರು. ಮಂಜಪ್ಪ ನರಸಗೊಂಡನಹಳ್ಳಿ ಬುದ್ಧಗೀತೆ ಹಾಡಿದರು. ಶಿಕ್ಷಕ ಸುರೇಶ್ ಸ್ವಾಗತಿಸಿ, ಆರ್.ಕುಬೇರ ನಿರೂಪಿಸಿ, ಸಂತೋಷ್ ಕುಂಕುವ ವಂದಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗದ ಶೇಖರ ನಾಯ್ಕ್, ಆರ್.ನಾಗಪ್ಪ, ಎ.ಕೆ.ಚನ್ನೇಶ್ವರ್, ರುದ್ರೇಶ್, ಸಂತೋಷ್, ಪ್ರದೀಪ್, ರಘು, ಹಳದಪ್ಪ, ವೆಂಕಟೇಶ್, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

- - - -23ಎಚ್.ಎಲ್.ಐ1.ಜೆಪಿಜಿ:

ಬುದ್ಧ ಜಯಂತಿ ಕಾರ್ಯಕ್ರಮವನ್ನು ಜ್ಞಾನಲೋಕ ಭಂತೇಜಿ ಉದ್ಘಾಟಿಸಿದರು.