ಖಾನಾಪುರ ತಾಲೂಕಿನ ಇಟಗಿ, ಬೀಡಿ ಭಾಗದಲ್ಲಿ ಭಾರೀ ಮಳೆ

| Published : May 24 2024, 12:53 AM IST

ಸಾರಾಂಶ

ಖಾನಾಪುರ ತಾಲೂಕಿನ ಇಟಗಿ ಹಾಗೂ ಬೀಡಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ರಾಯಬಾಗದಲ್ಲಿ ಸಿಡಿಲಿಗೆ ಮಹಿಳೆ ಅಸುನೀಗಿದ್ದಾಳೆ.

ಕನ್ನಡಪ್ರಭ ವಾರ್ತೆ ಖಾನಾಪುರ

ಗುರುವಾರ ಮಧ್ಯಾಹ್ನದಿಂದ ಸಂಜೆಯ ಅವಧಿಯಲ್ಲಿ ತಾಲೂಕಿನ ಇಟಗಿ ಹಾಗೂ ಬೀಡಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಬೀಡಿ ಗ್ರಾಮದ ಕಿತ್ತೂರು ರಸ್ತೆ ಬದಿಯ ಮರವೊಂದು ಧರೆಗುರುಳಿದ ಪರಿಣಾಮ ಬೀಡಿ-ಕಿತ್ತೂರು ಮಾರ್ಗದಲ್ಲಿ ಕೆಲಕಾಲ ರಸ್ತೆ ಸಂಪರ್ಕ ಕಡಿತಗೊಂಡ ವರದಿಯಾಗಿದೆ.

ಗುರುವಾರ ಮಧ್ಯಾಹ್ನ ಬಿರುಗಾಳಿ, ಗುಡುಗು ಸಿಡಿಲಿನೊಂದಿಗೆ ಮಳೆ ಪ್ರಾರಂಭವಾಗಿದ್ದು, ಮಳೆ ಬರುವುದಕ್ಕೂ ಪೂರ್ವದಲ್ಲಿ ಗಾಳಿ ಜೋರಾಗಿ ಗಾಳಿ ಬೀಸಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೆಸ್ಕಾಂ ಹಲವು ಫೀಡರ್‌ಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಪರಿಣಾಮ ಮಧ್ಯಾಹ್ನದಿಂದ ರಾತ್ರಿಯವರೆಗೆ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಮಳೆ-ಗಾಳಿಗೆ ಅಲ್ಲಲ್ಲಿ ವಿದ್ಯುತ್ ಕಂಬಗಳು, ಮರಗಳು, ಮನೆಯ ಮೇಲ್ಛಾವಣಿಗಳಿಗೆ, ದನದ ಕೊಟ್ಟಿಗೆಗಳಿಗೆ ಅಳವಡಿಸಿದ್ದ ಶೀಟುಗಳು ಧರೆಗುರುಳಿವೆ. ಖಾನಾಪುರ ಪಟ್ಟಣ ಹಾಗೂ ಸುತ್ತ-ಮುತ್ತ ಮಧ್ಯಾಹ್ನದ ಬಳಿಕ ಮೋಡಕವಿದ ವಾತಾವರಣವಿದ್ದು, ಸಂಜೆ ಸಾಧಾರಣ ಪ್ರಮಾಣದಲ್ಲಿ ಮಳೆ ಸುರಿದಿದೆ.

-------

ಸಿಡಿಲು ಬಡಿದು ರೈತ ಮಹಿಳೆ ಸಾವುರಾಯಬಾಗ: ಜಿಲ್ಲೆಯ ರಾಯಭಾಗ ಹೊರವಲಯದಲ್ಲಿ ಸಿಡಿಲು ಬಡಿದು ರೈತ ಮಹಿಳೆ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಜತೆಗೆ ನಾಲ್ವರು ಗಾಯಗೊಂಡಿದ್ದಾರೆ.ಶೋಭಾ ಕೃಷ್ಣ ಕುಲಗೋಡೆ (೪೫) ಸಿಡಿಲಿಗೆ ಮೃತಪಟ್ಟ ರೈತ ಮಹಿಳೆ. ಸಂಜೆ ಕೃಷಿ ಚಟುವಟಿಕೆ ಮಾಡುವ ಸಂದರ್ಭದಲ್ಲಿ ಸಿಡಿಲು ಹೊಡೆತಕ್ಕೆ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ನಾಲ್ವರು ಗಾಯಗೊಂಡಿದ್ದಾರೆ. ಮಲ್ಲಪ್ಪ ಶಂಕರ್ ಮೇತ್ರಿ, ಭಾರತಿ ಕೆಂಪಣ್ಣ ಕಮತೆ, ಬಾಬುರಾವ್ ಅಶೋಕ ಚೌವ್ಹಾಣ್, ಪ್ರವೀಣ್ ಕಲ್ಲಪ್ಪ ಧರ್ಮಟ್ಟಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.