ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಕಲಾವಿದರ ಪತ್ತಿನ ಸಹಕಾರ ಸಂಘ, ಕರ್ನಾಟಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅ. ೨೮ ರಂದು ಮಧ್ಯಾಹ್ನ ೩ ಗಂಟೆಗೆ ನಗರದ ಕೆ.ವಿ.ಶಂಕರಗೌಡ ಭವನದಲ್ಲಿ ಪತ್ತಿನ ಸಹಕಾರ ಸಂಘದ ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ ಭಜನೆ ಸ್ಪರ್ಧೆ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಕಾರಸವಾಡಿ ಮಹದೇವು ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯ ಹಾಗೂ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸುವರು ಎಂದರು.

ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರು ಸಾಲಪತ್ರಗಳನ್ನು ವಿತರಿಸುವರು. ಆಂಧ್ರಪ್ರದೇಶ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತ ಜಯರಾಮ್ ರಾಯಪುರ ಅವರು ಷೇರುಪತ್ರ ವಿತರಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಪ್ರಾಸ್ತಾವಿಕವಾಗಿ ಮಾತನಾಡುವರು ಎಂದರು.

ಜಿಲ್ಲೆಯ ಎಲ್ಲಾ ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರು, ಮಾಜಿ ಶಾಸಕರಾದ ಎಂ. ಶ್ರೀನಿವಾಸ್, ಕೆ.ಟಿ. ಶ್ರೀಕಂಠೇಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.


ಸಂಘದ ಅಧ್ಯಕ್ಷ ಡಿ.ಪಿ. ಸ್ವಾಮಿ, ಪದಾಧಿಕಾರಿಗಳಾದ ಕೀಲಾರ ಸುರೇಶ್, ಮಂಜುಳಾ, ಭಾರತಿ ಇತರರು ಗೋಷ್ಠಿಯಲ್ಲಿದ್ದರು.

ಇಂದು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಸಂಗಾಪುರ ಗ್ರಾಮದ ಪ್ರಗತಿಪರ ರೈತ ಮಹಿಳೆ ಜಿ.ಎನ್.ನಾಗಮ್ಮ ಮತ್ತು ಎಸ್.ನಾಗರಾಜು ಅವರ ತೋಟದಲ್ಲಿ ಅ.28 ರಂದು ಬಾನುಲಿ ಕೃಷಿ ಬೆಳಗು ಕಾರ್ಯಕ್ರಮ ನಡೆಯಲಿದೆ.

ಮೈಸೂರು ಆಕಾಶವಾಣಿ, ತಾಲೂಕು ಕೃಷಿಕ ಸಮಾಜ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರಾಂತ್ಯ ಕೃಷಿಕರ ಸಂಘಗಳ ಒಕ್ಕೂಟ, ಮೈಸೂರಿನ ವಿಶ್ವೇಶ್ವರಯ್ಯ ಡೆವಲಪ್ಮೆಂಟ್ ಆರ್ಗನೈಜೇಷನ್, ಸಮುದ್ಯತಾ ಶ್ರೋತೃ ಸಂಘ, ದೊಡ್ಡಕವಲಂದೆ ಗ್ರಾಮದ ಸಂಧ್ಯಾಕೃಷ್ಣ ನೇಚರ್ ಫಾರ್ಮ್, ಮಿಕ್ಕೆರೆ ಗ್ರಾಮದ ಕನಶ್ರೀ ಎರೆಗೊಬ್ಬರ ತಯಾರಿಕಾ ಉತ್ಪಾದನಾ ಘಟಕ, ಬೆಂಗಳೂರಿನ ಅಗ್ರಯಾನ ಟೂರಿಸಂ ಮತ್ತು ಸಂಸೃಷ್ಟಿ ಟೆಕ್ನಾಲಜೀಸ್ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಶ್ರೀಗಳು ಉದ್ಘಾಟಿಸಲಿದ್ದಾರೆ.ಶಾಸಕ ಎಚ್.ಟಿ.ಮಂಜು ಗೌರವಾಧ್ಯಕ್ಷತೆಯಲ್ಲಿ ಮೈಸೂರು ಆಕಾಶವಾಣಿ ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಎನ್.ಕೇಶವಮೂರ್ತಿ ಅಧ್ಯಕ್ಷತೆ ವಹಿಸುವರು. ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ, ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಸ್.ಆರ್.ಮಂಜುನಾಥಗೌಡ, ಕೆ.ಆರ್.ಪೇಟೆ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಟನಹಳ್ಳಿ ಗಂಗಧರ, ವಿಧಾನ ಪರಿಷತ್ ಮಾಜಿ ಸದಸ್ಯ ಮೈಸೂರಿನ ಡಿ.ಮಾದೇಗೌಡ, ರಾಜ್ಯ ಆರ್‌ಟಿಒ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ಸಂಪೂರ್ಣ ಸಾವಯವ ಕೃಷಿಕ ಸಮಾಜದ ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.