ರಾಮಾಯಣದ ಮೂಲಕ ಜೀವನಯಾನ, ಜೀವನೋತ್ಕರ್ಷ ಮತ್ತು ಆದರ್ಶ ಪುರುಷ ಶ್ರೀರಾಮನ ಚರಿತ್ರೆ ಕಟ್ಟಿಕೊಟ್ಟ ಮಹರ್ಷಿ ವಾಲ್ಮೀಕಿ ಅವರು ಮನುಕುಲಕ್ಕೆ ಆದರ್ಶ ಬದುಕು ಏನೆಂಬುದನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಎಂದು ತಹಸೀಲ್ದಾರ್ ಕೆ. ಗುರುಬಸವರಾಜ್ ಹೇಳಿದ್ದಾರೆ.
-ಜಗಳೂರಲ್ಲಿ ವಾಲ್ಮೀಕಿ ಜಯಂತಿ । ಮಹರ್ಷಿ ಭಾವಚಿತ್ರಕ್ಕೆ ಪುಷ್ಪನಮನ
- - -ಜಗಳೂರು: ರಾಮಾಯಣದ ಮೂಲಕ ಜೀವನಯಾನ, ಜೀವನೋತ್ಕರ್ಷ ಮತ್ತು ಆದರ್ಶ ಪುರುಷ ಶ್ರೀರಾಮನ ಚರಿತ್ರೆ ಕಟ್ಟಿಕೊಟ್ಟ ಮಹರ್ಷಿ ವಾಲ್ಮೀಕಿ ಅವರು ಮನುಕುಲಕ್ಕೆ ಆದರ್ಶ ಬದುಕು ಏನೆಂಬುದನ್ನು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಎಂದು ತಹಸೀಲ್ದಾರ್ ಕೆ. ಗುರುಬಸವರಾಜ್ ಹೇಳಿದರು.
ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಶ್ರದ್ಧಾ-ಭಕ್ತಿಯಿಂದ ಆಚರಿಸಿ, ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ರತ್ನಾಕರನಾಗಿ ದಾರಿ ತಪ್ಪಿದ್ದ ವ್ಯಕ್ತಿಯೊಬ್ಬ, ತಪಸ್ಸಿನ ಶಕ್ತಿಯಿಂದ ವಾಲ್ಮೀಕಿಯಾಗಿ ರೂಪುಗೊಂಡ ಪ್ರಸಂಗ ಪ್ರತಿಯೊಬ್ಬ ಮನುಷ್ಯನಲ್ಲೂ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಡುತ್ತದೆ ಎಂದರು.ನಾಯಕ ಸಮುದಾಯದ ಬಸವನಕೋಟೆ ಎಂ.ಎಚ್. ಚೌಡಪ್ಪ ಮಾತನಾಡಿ, ವಾಲ್ಮೀಕಿ ಅವರ ಬದುಕು, ಅವರು ರಚಿಸಿದ ಅಮರ ಕಾವ್ಯ ರಾಮಾಯಣದ ಮಹತ್ವವನ್ನು ವಿವರಿಸಿದರು.
ಪಪಂ ಮುಖ್ಯಾಧಿಕಾರಿ ಸಿ. ಲೋಕ್ಯಾನಾಯ್ಕ್ ಮಾತನಾಡಿ, ರಾಮಾಯಣವು ಕೇವಲ ಒಂದು ಧರ್ಮಗ್ರಂಥವಲ್ಲ; ಅದೊಂದು ಜೀವನ ಮೌಲ್ಯಗಳ ವಿಶ್ವಕೋಶ. ಸತ್ಯ, ಧರ್ಮ, ಕರ್ತವ್ಯನಿಷ್ಠೆ ಮತ್ತು ಮಾನವೀಯತೆಯ ಪಾಠಗಳನ್ನು ಜಗತ್ತಿಗೆ ಸಾರಿದೆ ಎಂದರು.ವಕೀಲ ಆರ್. ಓಬಳೇಶ್ ಮಾತನಾಡಿ, ಸಂಸ್ಕೃತ ಸಾಹಿತ್ಯದಲ್ಲಿ ಮೊಟ್ಟಮೊದಲ ಕಾವ್ಯ (ಆದಿಮಹಾಕಾವ್ಯ) ರಚಿಸಿದ ಹೆಗ್ಗಳಿಕೆ ವಾಲ್ಮೀಕಿ ಅವರಿಗೆ ಸಲ್ಲುತ್ತದೆ. ನಾಯಕ ಸಮುದಾಯಕ್ಕೆ ಮೀಸಲಿಟ್ಟ ಮೀಸಲಾತಿಗೆ ಇತರೆ ಜಾತಿಗಳನ್ನು ಸೇರಿಸಿ ಮೀಸಲು ಹಂಚಿಕೆಯಾದರೆ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಹೀಗಾಗಿ ಮೀಸಲಾತಿ ರಕ್ಷಣೆಗಾಗಿ ಹೋರಾಟ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.
ನಾಯಕ ಸಂಘದ ತಾಲೂಕು ಅಧ್ಯಕ್ಷ ಬುಳ್ಳನಹಳ್ಳಿ ನಾಗರಾಜ್, ಬಿಸ್ತುವಳ್ಳಿ ಬಾಬು, ಸಿ. ತಿಪ್ಪೇಸ್ವಾಮಿ, ರೇವಣ್ಣ, ಬಿ. ಮಹೇಶ್ವರಪ್ಪ, ಕಾನನಕಟ್ಟೆ ತಿಪ್ಪೇಸ್ವಾಮಿ, ಇಲಾಖೆಗಳ ಅಧಿಕಾರಿಗಳು ಇದ್ದರು.- - -
-26 ಜೆ.ಜಿ.ಎಲ್.1:ಜಗಳೂರು ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಸಭೆಯಲ್ಲಿ ತಹಸೀಲ್ದಾರ್ ಕೆ. ಗುರುಬಸವರಾಜ್ ಮಾತನಾಡಿದರು.