ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

| Published : Jun 25 2024, 12:36 AM IST

ಸಾರಾಂಶ

ಹಂಪಿಯಲ್ಲಿ ಭಾರೀ ಬಿಸಿಲು ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿತ್ತು.

ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಣೆ ಮಾಡುತ್ತಿದ್ದಾರೆ.

ಹಂಪಿಯಲ್ಲಿ ಭಾರೀ ಬಿಸಿಲು ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿತ್ತು. ಈಗ ಮಳೆಗಾಲ ಆರಂಭವಾಗಿದ್ದು, ವಾತಾವರಣದಲ್ಲೂ ಬದಲಾವಣೆ ಆಗಿದೆ. ಹಾಗಾಗಿ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮೊನ್ನೆ ವೀಕೆಂಡ್‌ನಲ್ಲಿ ಶನಿವಾರ ಸುಮಾರು 6000 ಪ್ರವಾಸಿಗರು ಆಗಮಿಸಿದ್ದರೆ, ಭಾನುವಾರ 8000ಕ್ಕೂ ಅಧಿಕ ಪ್ರವಾಸಿಗರು ಹಂಪಿ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದಾರೆ. ಹಂಪಿಯ ಸ್ಮಾರಕಗಳ ಎದುರು ಸೆಲ್ಫಿ ತೆಗೆಸಿಕೊಂಡು ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಡುತ್ತಿದ್ದಾರೆ.

ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯ, ರಥಬೀದಿಯ ಸಾಲುಮಂಟಪ, ಎದುರು ಬಸವಣ್ಣ ಮಂಟಪ, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಮಂಟಪ, ಶ್ರೀಕೃಷ್ಣ ದೇವಾಲಯ, ಕೃಷ್ಣ ಬಜಾರ್‌, ಉದ್ದಾನ ವೀರಭದ್ರೇಶ್ವರ ದೇವಾಲಯ, ಬಡವಿ ಲಿಂಗ, ಉಗ್ರ ನರಸಿಂಹ, ನೆಲಸ್ತರದ ಶಿವಾಲಯ, ಅಕ್ಕ-ತಂಗಿಯರ ಗುಡ್ಡ, ಹಜಾರ ರಾಮ ದೇವಾಲಯ, ರಾಣಿ ಸ್ನಾನ ಗೃಹ, ಮಹಾನವಮಿ ದಿಬ್ಬ, ಕಮಲ ಮಹಲ್‌, ಗಜ ಶಾಲೆ, ಪ್ರಾಚ್ಯವಸ್ತು ಸಂಗ್ರಹಾಲಯ, ಪಟ್ಟಾಭಿರಾಮ ದೇವಾಲಯ, ಕಲ್ಲಿನ ತೇರು, ವಿಜಯ ವಿಠ್ಠಲ ದೇವಾಲಯ, ಪುರಂದರ ದಾಸರ ಮಂಟಪ, ರಾಜರ ತುಲಾಭಾರ, ರಘುನಾಥ ಮಾಲ್ಯವಂತ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ಪ್ರವಾಸಿಗರು ವೀಕ್ಷಿಸುತ್ತಿದ್ದಾರೆ.

ಹಂಪಿಗೆ ಆಗಮಿಸುವ ಪ್ರವಾಸಿಗರು ಅಟಲ್‌ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‌ ಹಾಗೂ ದರೋಜಿ ಕರಡಿಧಾಮಕ್ಕೂ ಭೇಟಿ ನೀಡುತ್ತಿದ್ದಾರೆ. ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆರ್ಥಿಕ ಚಟುವಟಿಕೆಯೂ ಚೇತರಿಸಿದೆ.