ಅಕ್ರಮ ಗುಡಿಸಲು ತೆರವು

| Published : Jun 25 2024, 12:36 AM IST

ಸಾರಾಂಶ

ಸದಾಶಿವಳ್ಳಿ ಗ್ರಾಮದ ಅರಣ್ಯ ಪ್ರದೇಶದ ಸರ್ವೆ ನಂ. ೫೫ರಲ್ಲಿ ತಾರಗೋಡದ ಹಸನಸಾಬ ಬಡೇಸಾಬ ದೊಡ್ಮನಿ ಹಾಗೂ ಮೌದೀನ್ ಬಡೇಸಾಬ ದೊಡ್ಮನಿ ಅಕ್ರಮ ಪ್ರವೇಶ ಮಾಡಿ ಕಿರುಜಾಡು ಸವರಿ ಹೊಸದಾಗಿ ಅತಿಕ್ರಮಣ ಮಾಡಿ, ಸುಮಾರು ಮುಕ್ಕಾಲು ಎಕರೆ ಜಾಗವನ್ನು ಒತ್ತುವರಿ ಮಾಡಿ ಹೆಂಚು ಚಾವಣಿಯ ಮನೆ ನಿರ್ಮಿಸಿದ್ದರು.

ಶಿರಸಿ: ತಾಲೂಕಿನ ಸದಾಶಿವಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಜಾಗವನ್ನು ಅತಿಕ್ರಮಿಸಿ, ನಿರ್ಮಿಸಿದ್ದ ಗುಡಿಸಲನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಿ, ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸದಾಶಿವಳ್ಳಿ ಗ್ರಾಮದ ಅರಣ್ಯ ಪ್ರದೇಶದ ಸರ್ವೆ ನಂ. ೫೫ರಲ್ಲಿ ತಾರಗೋಡದ ಹಸನಸಾಬ ಬಡೇಸಾಬ ದೊಡ್ಮಿನಿ ಹಾಗೂ ಮೌದೀನ್ ಬಡೇಸಾಬ ದೊಡ್ಮಿನಿ ಅಕ್ರಮ ಪ್ರವೇಶ ಮಾಡಿ ಕಿರುಜಾಡು ಸವರಿ ಹೊಸದಾಗಿ ಅತಿಕ್ರಮಣ ಮಾಡಿ, ಸುಮಾರು ಮುಕ್ಕಾಲು ಎಕರೆ ಜಾಗವನ್ನು ಒತ್ತುವರಿ ಮಾಡಿ ಹೆಂಚು ಚಾವಣಿಯ ಮನೆ ನಿರ್ಮಿಸಿದ್ದರು. ಕಾಯ್ದಿಟ್ಟ ಅರಣ್ಯ ಪ್ರದೇಶದ ನೆಡುತೋಪು ಜಾಗವನ್ನು ಅತಿಕ್ರಮಣವಾಗಿರುವುದನ್ನು ಗಮನಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ತೆರವು ಮಾಡುವಂತೆ ಸೂಚನೆ ನೀಡಿದ್ದರು.

ಒತ್ತುವರಿದಾರ ತೆರವುಗೊಳಿಸಿದ ಹಿನ್ನೆಲೆ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಪೊಲೀಸರ ಸಹಾಯದೊಂದಿಗೆ ಜಾಗ ತೆರವುಗೊಳಿಸಿ, ಕೃತ್ಯದ ನಡೆಸಿದ ತಾಲೂಕಿನ ತಾರಗೋಡದ ಹಸನಸಾಬ ಬಡೇಸಾಬ ದೊಡ್ಮಿನಿ(೪೫) ಹಾಗೂ ಮೌದೀನ್ ಬಡೇಸಾಬ ದೊಡ್ಮಿನಿ (೪೦) ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರಲ್ಲದೇ, ಅತಿಕ್ರಮಣ ಮಾಡಿದ ಪ್ರದೇಶವನ್ನು ಮರಳಿ ಇಲಾಖಾ ವಶಕ್ಕೆ ಪಡೆಯಲಾಗಿದೆ.ಸಾರ್ವಜನಿಕರ ಪ್ರಶಂಸೆ: ಇತ್ತೀಚಿನ ದಿನಗಳಲ್ಲಿ ಹೊಸದಾಗಿ ಅರಣ್ಯ ಜಾಗ ಅತಿಕ್ರಮಣಕ್ಕೆ ಅವಕಾಶವಿಲ್ಲ. ಆದರೂ ಕೆಲ ವ್ಯಕ್ತಿಗಳು ರಾಜಕೀಯ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಹೊಸದಾಗಿ ಅರಣ್ಯ ಜಮೀನು ಒತ್ತುವರಿಗೆ ಮುಂದಾಗುತ್ತಿದ್ದಾರೆ. ಇದನ್ನು ತಡೆಯುವುದು ಇಲಾಖೆಯ ಅಧಿಕಾರಿಗಳಿಗೆ ಸವಾಲಿನ ಕೆಲಸವಾದರೂ ಸದಾಶಿವಳ್ಳಿಯಲ್ಲಿ ಯಾರ ಒತ್ತಡಕ್ಕೂ ಮಣಿಯದೇ ಅತಿಕ್ರಮಿಸಿಕೊಂಡು ಮನೆ ನಿರ್ಮಿಸಿದ ಜಾಗ ತೆರವುಗೊಳಿಸಿ, ಇಲಾಖಾ ವಶಕ್ಕೆ ಪಡೆದುಕೊಂಡಿದ್ದಾರೆ. ಅರಣ್ಯ ಅಧಿಕಾರಿಗಳ ಕ್ಷೀಪ್ರ ಕಾರ್ಯಾಚರಣೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ, ಜಿ.ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎನ್. ಹರೀಶ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿ ಶಿವಾನಂದ ನಿಂಗಾಣಿ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಧನಂಜಯ ನಾಯ್ಕ, ರಾಜೇಶ ಕೋಟಾರಕರ, ಎಂ.ಆರ್. ನಾಯ್ಕ, ಅಶೋಕ ಪೂಜಾರ, ಶ್ರೀಕಾಂತ ವಾಲ್ಮೀಕಿ, ಉಷಾ ಬೈಂದೂರ, ಇಂದಿರಾ ನಾಯ್ಕ, ನೂರಅಹ್ಮದ್ ಗಫಾರ ಗಸ್ತು ಅರಣ್ಯ ಪಾಲಕರಾದ ಹನುಮೇಶ ದೊಮ್ಮನಿ, ಗುಡ್ಡಪ್ಪ ಸೋಪ್ಟಿನ್, ರಾಜೀವ್ ಗೌಡರ, ಮಣಿಕಂಠ ನಾಯ್ಕ, ಸಿದ್ದನಗೌಡ ಬೀರಾದಾರ, ಮಂಜುನಾಥ ಶಿಗ್ಲಿ, ಬಾಬು ಕಾಂಬಳೆ, ಮಂಜುನಾಥ ದೇವಾಡಿಗ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಚಾಕು ತೋರಿಸಿ ಬೆದರಿಸಲು ಯತ್ನ: ಅರಣ್ಯ ಜಾಗ ಅತಿಕ್ರಮಣಗೊಂಡಿರುವುದನ್ನು ತೆರವುಗೊಳಿಸಿ, ತಮ್ಮ ಸುಪರ್ದಿಗೆ ಪಡೆದುಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿದಾಗ ಚಾಕು ತೋರಿಸಿ, ಬೆದರಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಮಹಿಳೆಯರು ಚಾಪೆ ಹಾಸಿಕೊಂಡು ಮಲಗಿ ಹಲವು ನಾಟಕ ಮಾಡಲು ಮುಂದಾಗಿದ್ದಾರೆ. ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಗೋಡೆ ನಿರ್ಮಾಣಕ್ಕೆ ಬಳಸಿದ ಕಲ್ಲು, ಚಾವಣಿಯ ಹೆಂಚು, ಸಿಮೆಂಟ್ ಕಂಬ ಹಾಗೂ ಇನ್ನಿತರ ಸಾಮಗ್ರಿಗಳನ್ನು ತೆರವುಗೊಳಿಸಿ, ವಶಕ್ಕೆ ಪಡೆದಿದ್ದಾರೆ.

ಪರಿಶೀಲಿಸಿ ತೆರವು: ಅರಣ್ಯ ಭೂಮಿ ಹೊಸದಾಗಿ ಅತಿಕ್ರಮಿಸಿಕೊಳ್ಳಲು ಅವಕಾಶವಿಲ್ಲ. ಸದಾಶಿವಳ್ಳಿಯಲ್ಲಿ ಹೊಸದಾಗಿ ಅರಣ್ಯ ಜಾಗ ಅತಿಕ್ರಮಣವಾಗಿರುವ ಸುದ್ದಿ ತಿಳಿದ ತಕ್ಷಣ ನಮ್ಮ ಇಲಾಖಾ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತೆರವುಗೊಳಿಸಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ತಿಳಿಸಿದರು.