ಸಾರಾಂಶ
ಕಾಂಗ್ರೆಸ್ ಐದು ಗ್ಯಾರಂಟಿ ಘೋಷಣೆ ಮಾಡಿದಾಗ ಸ್ವತಃ ಪ್ರಧಾನಿ ಟೀಕೆ ಮಾಡಿದರು. ಪಂಚ ಗ್ಯಾರಂಟಿ ಕೊಟ್ಟರೆ ಕರ್ನಾಟಕ ದಿವಾಳಿ ಆಗುತ್ತದೆ ಎಂದರು. ಅದು ಈಗ ಉಲ್ಟಾ ಆಗಿದೆ. ರಾಜ್ಯ ದಿವಾಳಿ ಆಗಿಲ್ಲ. ಬದಲಾಗಿ ಈಗ ತಲಾ ಆದಾಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ಕೊಪ್ಪಳ:
ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿ ಆಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಚ್ಚರಿಸಿದ್ದ ಮಾತು ಸದ್ಯ ಉಲ್ಟಾ ಆಗಿದೆ. ರಾಜ್ಯದ ಜನರ ತಲಾ ಆದಾಯದಲ್ಲಿ ಹೆಚ್ಚಳ ಆಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬಡವರ ಕಲ್ಯಾಣಕ್ಕಾಗಿ ಯೋಜನೆ ರೂಪಿಲ್ಲ. ಅವರು ಏನಿದ್ದರೂ ಶ್ರೀಮಂತರ ಪರ ಎಂದರು.
ಶ್ರೀಮಂತ ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲಮನ್ನಾ ಮಾಡುತ್ತಾರೆ. ಆದರೆ, ಬಡ ರೈತರ ಸಾಲಮನ್ನಾ ಮಾಡಲು ತಯಾರಿಲ್ಲ ಎಂದ ಅವರು, ಕಾಂಗ್ರೆಸ್ ಐದು ಗ್ಯಾರಂಟಿ ಘೋಷಣೆ ಮಾಡಿದಾಗ ಸ್ವತಃ ಪ್ರಧಾನಿ ಟೀಕೆ ಮಾಡಿದರು. ಪಂಚ ಗ್ಯಾರಂಟಿ ಕೊಟ್ಟರೆ ಕರ್ನಾಟಕ ದಿವಾಳಿ ಆಗುತ್ತದೆ ಎಂದರು. ಅದು ಈಗ ಉಲ್ಟಾ ಆಗಿದೆ. ರಾಜ್ಯ ದಿವಾಳಿ ಆಗಿಲ್ಲ. ಬದಲಾಗಿ ಈಗ ತಲಾ ಆದಾಯದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ತಿರುಗೇಟು ನೀಡಿದರು.ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ 3500 ಕಿಮೀ ಕ್ರಮಿಸಿ ದೇಶದಲ್ಲಿ ಒಡೆದ ಮನಸ್ಸು ಒಂದುಗೂಡಿಸಿದರು. ಇದನ್ನು ಬಿಜೆಪಿಗೆ ಸಹಿಸುವುದಕ್ಕೆ ಆಗುತ್ತಿಲ್ಲ ಎಂದು ಟೀಕಿಸಿದರು.
ಸಂಸದ ರಾಜಶೇಖರ ಹಿಟ್ನಾಳ್ ಮಾತನಾಡಿ, ಕಾಂಗ್ರೆಸ್ ಜಾರಿಗೊಳಿಸಿದ ಯೋಜನೆಗಳ ಪ್ರಚಾರ ಮಾಡುವಲ್ಲಿ ಹಿಂದೆ ಇದ್ದೇವೆ. ಆದರೆ, ಬಿಜೆಪಿಗರು ಏನು ಮಾಡದೆ ಪ್ರಚಾರ ಪಡೆಯುತ್ತಾರೆ. ಇದೀಗ ವಿನಯಕುಮಾರ ಸೊರಕೆ ಅವರು ಅಧ್ಯಕ್ಷರಾದ ಮೇಲೆ ಪ್ರಚಾರ ಹಾಗೂ ಸಂಘಟನೆಯಲ್ಲಿ ಬದಲಾವಣೆ ಆಗಿದೆ ಎಂದರು.ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಮಾತನಾಡಿ, ಸರ್ಕಾರದ ಹಾಗೂ ಪಕ್ಷದ ಕಾರ್ಯಕ್ರಮಗಳ ಕುರಿತು ಕಾರ್ಯಕರ್ತರು ಪ್ರಚಾರ ಮಾಡಬೇಕು. ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು ಎಂದು ಟೀಕಿಸಿದರು.
ಈ ವೇಳೆ ಕೆಪಿಸಿಸಿ ಸದಸ್ಯೆ ಶೈಲಜಾ ಹಿರೇಮಠ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಮುಖಂಡರಾದ ಶಾಂತಣ್ಣ ಮುದಗಲ್, ಕೃಷ್ಣ ಗಡಾದ, ಹನುಮಂತಗೌಡ ಪಾಟೀಲ್, ಗೂಳಪ್ಪ ಹಲಗೇರಿ, ಚಂದ್ರು ನಾಲತವಾಡ, ಕಿಶೋರಿ ಬೂದನೂರ, ಪಾಷಾ ಕಾಟನ್, ಬನ್ನೆಪ್ಪಗೌಡ ಚಿಕ್ಕಬಗನಾಳ ಇದ್ದರು.