ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ತಾಲೂಕಿನ ಕಸಬಾ ಹೋಬಳಿ ಹರೀಸಂದ್ರ ಗ್ರಾಮದ ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿರೋಧಿಸಿ, ಸುತ್ತಮುತ್ತಲ ಗ್ರಾಮಗಳ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಗುರುವಾರದಿಂದ ಅನಿರ್ಧಿಷ್ಟಾವಧಿ ಧರಣಿ ಪ್ರಾರಂಭಿಸಿದ್ದಾರೆ.ಚಿಕ್ಕೇಗೌಡನದೊಡ್ಡಿಯ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುತ್ತಿರುವ ಸರ್ವೇ ನಂಬರ್ 166ರ ಸರ್ಕಾರಿ ಗೋಮಾಳದವರೆಗೆ ಅಂದರೆ ಸುಮಾರು 2 ಕಿಲೋ ಮೀಟರ್ ವರೆಗೆ ಸಾಗಿತು.
ಹರೀಸಂದ್ರ, ಚಿಕ್ಕೇಗೌಡನ ದೊಡ್ಡಿ, ಕಾಳೇಗೌಡನದೊಡ್ಡಿ, ಪಾದರಹಳ್ಳಿ, ಬೆಜ್ಜರಹಳ್ಳಿಕಟ್ಟೆ, ಮಾರೇಗೌಡನದೊಡ್ಡಿ, ಹನುಮಂತೇಗೌಡನ ದೊಡ್ಡಿ, ಕೆಂಪೇಗೌಡನದೊಡ್ಡಿ, ಮದರ್ ಸಾಬರದೊಡ್ಡಿ, ಆಲೆಮರದದೊಡ್ಡಿ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ನೂರಾರು ಗ್ರಾಮಸ್ಥರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.ಆಂಜನೇಯಸ್ವಾಮಿ ದೇವಾಲಯದ ಬಳಿ ಪ್ರಾರಂಭಗೊಂಡ ಮೆರವಣಿಗೆಯಲ್ಲಿ ನಾಡಪ್ರಭು ಕೆಂಪೇಗೌಡ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಹಾಗೂ ಅಂಬೇಡ್ಕರ್ ಭಾವಚಿತ್ರ ಹಿಡಿದಿದ್ದ ಪುಟ್ಟ ಮಕ್ಕಳು ಹಾಗೂ ಘಟಕ ನಿರ್ಮಾಣವಾಗುತ್ತಿರುವ ಸ್ಥಳದಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದ ಮೃತ ನಂಜಮ್ಮ , ಗಂಗಮ್ಮ ಭಾವಚಿತ್ರ ಪ್ರದರ್ಶಿಸಿ ಗ್ರಾಮಸ್ಥರು ಗಮನ ಸೆಳೆದರು.
ಮೆರವಣಿಗೆ ಹರೀಸಂದ್ರ ಗ್ರಾಮ ಪಂಚಾಯಿತಿ ಕಚೇರಿ ಎದುರು ಆಗಮಿಸಿದಾಗ ಪ್ರತಿಭಟನಾಕಾರರು ವಾಹನಗಳನ್ನು ತಡೆದು ನಿಲ್ಲಿಸಿ ಜಿಲ್ಲಾಡಳಿತ ,ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ರಸ್ತೆಯಲ್ಲಿ ಸುಮಾರು ಒಂದು ಗಂಟೆಗಳಿಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡು ಸವಾರರು ಪರದಾಡಿದರು.ಈ ವೇಳೆ ಪಾದರಹಳ್ಳಿ ಗ್ರಾಮದ ಮುಖಂಡ ಚಂದ್ರಶೇಖರ್ ಮಾತನಾಡಿ, ಇಲ್ಲೇ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುವುದಾಗಿ ಶಾಸಕ ಇಕ್ಬಾಲ್ ಹುಸೇನ್ ರವರು ಚಾಲೆಂಜ್ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಹೊಟ್ಟೆ ತುಂಬುತ್ತದೆಯೋ ಏನೋ ಗೊತ್ತಿಲ್ಲ. ಅಷ್ಟಕ್ಕೂ ನಾವು ಮಾಡಿರುವ ಅನ್ಯಾಯವಾದರೂ ಏನೆಂದು ಪ್ರಶ್ನಿಸಿದರು.
ನಗರದ ಕಸ ವಿಲೇವಾರಿ ಮಾಡಲು ಹಂದಿಗುಂದಿ ಬೆಟ್ಟ, ಶಿಡ್ಲಕಲ್ಲು ಜಾಗಗಳಿದೆ. ಆ ಜಾಗ ಬಿಟ್ಟು ಇಲ್ಲಿಯೇ ಘಟಕ ನಿರ್ಮಾಣ ಮಾಡುತ್ತಿರುವುದರ ಉದ್ದೇಶವಾದರೂ ಏನು. ಇಲ್ಲಿ ಬೇಕಾದರೆ ಆಸ್ಪತ್ರೆ ಅಥವಾ ಶಾಲಾ ಕಾಲೇಜು ನಿರ್ಮಾಣ ಮಾಡಿದರೆ ಸ್ವಾಗತಿಸುತ್ತೇವೆ. ಘಟಕ ನಿರ್ಮಾಣ ಮಾಡಿದರೆ ಜನರೇ ನಿಮ್ಮನ್ನು ಗ್ರಾಮಕ್ಕೆ ಸೇರಿಸದೆ ತಿರಸ್ಕಾರ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.ಬಿಜೆಪಿ ಯುವ ಮುಖಂಡ ವರದರಾಜುಗೌಡ ಮಾತನಾಡಿ, ಹರೀಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ವ್ಯವಸಾಯ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡುವುದರ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು.
ಇಲ್ಲಿನ ಗೋಮಾಳ ಕೇವಲ ಒಂದು ಹಳ್ಳಿಗೆ ಮಾತ್ರ ಸೀಮಿತವಾಗಿಲ್ಲ. ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ಅನುಕೂಲವಾಗುತ್ತಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕ ಮಾಡುತ್ತೇವೆ ಎಂಬುದು ಸುಳ್ಳು. ಈಗ ರಾಮನಗರ ಮತ್ತು ಬಿಡದಿ ಪಟ್ಟಣದ ಕಸ ಹಾಕುತ್ತೀರಾ. ಮುಂದೆ ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತೀರಿ. ಕಸಬಾ ಹೋಬಳಿಯನ್ನು ಕಸದ ತೊಟ್ಟಿಯಾಗಲು ಬಿಡುವುದಿಲ್ಲ. ಸಂವಿಧಾನ ಬದ್ಧವಾಗಿ ಹೋರಾಟ ನಡೆಸಿ ನ್ಯಾಯ ಪಡೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ಹರೀಸಂದ್ರ, ಮಾಯಗಾನಹಳ್ಳಿ, ಬಿಳಗುಂಬ ಹಾಗೂ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರು ಹೈನುಗಾರಿಕೆ, ರೇಷ್ಮೆ, ಮಾವು , ತೆಂಗು ಬೆಳೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿ ಘಟಕ ನಿರ್ಮಾಣವಾಗುವುದರಿಂದ ಕೃಷಿ ಚಟುವಟಿಕೆ, ವಾಯು ಮಾಲಿನ್ಯ, ಜಲ ಮಾಲಿನ್ಯ, ಹೈನುಗಾರಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಹರೀಸಂದ್ರ ಸರ್ವೇ ನಂಬರ್ 166ರ ಸರ್ಕಾರಿ ಜಮೀನಿನಲ್ಲಿ ಗೋಮಾಳದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ರಾಮನಗರ ನಗರಸಭೆಗೆ 9.38 ಎಕರೆ ಹಾಗೂ ಬಿಡದಿ ಪುರಸಭೆ 9 ಎಕರೆ ಮಂಜೂರಾಗಿರುವುದನ್ನು ರದ್ದು ಪಡಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.ನಿಖಿಲ್ - ಎ.ಮಂಜು ಸಾಥ್ :
ಹರೀಸಂದ್ರ ಗ್ರಾಪಂ ಕಚೇರಿಯಿಂದ ಮೆರವಣಿಗೆ ಮುಂದುವರಿದು ಘಟಕ ನಿರ್ಮಾಣ ಸ್ಥಳಕ್ಕೆ ತಲುಪಿತು. ಗ್ರಾಮಸ್ಥರು ಅಲ್ಲಿಯೇ ಶಾಮಿಯಾನ ಹಾಕಿಕೊಂಡು ಧರಣಿ ಮುಂದುವರಿಸಿದರು. ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಧರಣಿಯಲ್ಲಿ ಭಾಗಿಯಾಗಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಧರಣಿಯಲ್ಲಿ ಬಿಜೆಪಿ ಯುವ ಮುಖಂಡ ವರದರಾಜುಗೌಡ, ಜೆಡಿಎಸ್ ಮುಖಂಡ ಬಿ.ಉಮೇಶ್, ಕೆ.ಚಂದ್ರಯ್ಯ, ಗ್ರಾಮ ಪಂಚಾಯತಿ ಸದಸ್ಯ ಶಿವಕುಮಾರ್, ರಾಮು, ಬಸವನಪುರ ಪ್ರಕಾಶ್, ಮುಖಂಡರಾದ ರಾಮಕೃಷ್ಣಯ್ಯ, ಮಳವಳ್ಳಿ ರಾಜು, ರಾಜಣ್ಣ, ಕೃಷ್ಣಯ್ಯ, ಸಂತೋಷ್, ಬಾಬಣ್ಣ, ರಾಮು, ಅಶ್ವಥ್, ಕೃಷ್ಣಮೂರ್ತಿ, ಕೃಷ್ಣೇಗೌಡ, ಮಹೇಶ್, ಬೋರೇಗೌಡ, ಮೋಹನ್, ಚರಣ್, ಶಾಂತಣ್ಣ, ಚಂದ್ರು, ರಾಜೀವ್ ಗೌಡ, ಮಹದೇವ್, ಜಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.