ಅಂದಿನ 71ರ ಯುದ್ಧದಲ್ಲಿ ಕ್ಯಾಪ್ಟನ್ ಮಾಣಿಕ್ ಶಾ ಅವರ ನಾಯಕತ್ವದಲ್ಲಿ ಪೂರ್ವ ತಯಾರಿ ನಡೆಸಿದ ಇಂಡೋ- ಪಾಕ್ (ಬಾಂಗ್ಲಾ) ಯುದ್ಧದಲ್ಲಿ ನಮ್ಮ ಸೈನಿಕರನ್ನು ಅಣಿಗೊಳಿಸಿತು. ನೆರೆ ದೇಶದ ಹಿಂಸಾತ್ಮಕ ಕೃತ್ಯಗಳಿಗೆ ಕಡಿವಾಣ ಹಾಕಲು ತಂತ್ರಗಾರಿಕೆ ನಡೆಸಿ ಯುದ್ಧದಲ್ಲಿ ಸಂಪೂರ್ಣ ಯಶಸ್ವಿ ಕಂಡಿತು .
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಇಂಡೋ- ಪಾಕ್‌ನ 1971ರ ಯುದ್ಧದಲ್ಲಿ ಮೊಟ್ಟ ಮೊದಲ ಬಾರಿಗೆ ಶತ್ರು ದೇಶದ ಸೈನ್ಯಾಧಿಕಾರಿ ಸೇರಿ 93 ಸಾವಿರ ಸೈನಿಕರನ್ನು ಶರಣಾಗತಿಗೊಳಿಸಿದ ಕೀರ್ತಿ ಭಾರತೀಯ ಹೆಮ್ಮೆಯ ಸೈನಿಕರಿಗೆ ಸಲ್ಲುತ್ತದೆ ಎಂದು ಲೆ.ಕರ್ನಲ್ ಹಾಗೂ ಸರ್ಕಾರಿ ವೈದ್ಯ ಡಾ. ರಾಜೀವ್ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಚಿಕ್ಕಮಗಳೂರು ಮಾಜಿ ಸೈನಿಕರ ಸಂಘದಿಂದ ಆಯೋಜಿಸಿದ್ಧ 1971ರ ಯುದ್ಧದ 55ನೇ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ 71ರ ಯುದ್ಧದಲ್ಲಿ ಕ್ಯಾಪ್ಟನ್ ಮಾಣಿಕ್ ಶಾ ಅವರ ನಾಯಕತ್ವದಲ್ಲಿ ಪೂರ್ವ ತಯಾರಿ ನಡೆಸಿದ ಇಂಡೋ- ಪಾಕ್ (ಬಾಂಗ್ಲಾ) ಯುದ್ಧದಲ್ಲಿ ನಮ್ಮ ಸೈನಿಕರನ್ನು ಅಣಿಗೊಳಿಸಿತು. ನೆರೆ ದೇಶದ ಹಿಂಸಾತ್ಮಕ ಕೃತ್ಯಗಳಿಗೆ ಕಡಿವಾಣ ಹಾಕಲು ತಂತ್ರಗಾರಿಕೆ ನಡೆಸಿ ಯುದ್ಧದಲ್ಲಿ ಸಂಪೂರ್ಣ ಯಶಸ್ವಿ ಕಂಡಿತು ಎಂದರು.ಭಾರತ ಏಕ ನಡೆಯೊಂದಿಗೆ ಎಂದಿಗೂ ಯುದ್ಧವನ್ನು ಸಾರಿಲ್ಲ. ಅಲ್ಲಿನ ಜಾತಿ ಆಧಾರದಲ್ಲಿ ನಡೆದ ಕೊಲೆ, ಸುಲಿಗೆ ಹಾಗೂ ದರೋಡೆಕೋರರನ್ನು ಮಟ್ಟಹಾಕಲು ಮತ್ತು ಭಾರತ ಗಡಿಭಾಗದಲ್ಲಿ ನುಸುಳುಕೋರರನ್ನು ತಡೆಗಟ್ಟಲು ಯುದ್ದವನ್ನು ಸಾರಿತು. ಅಲ್ಲದೇ ಬಂಧಿಸಿದ ನೆರೆ ದೇಶದ ಸೈನಿಕರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಿಕೊಟ್ಟಿದೆ ಎಂದು ಹೇಳಿದರು.
ಪೂರ್ವ ಪಾಕಿಸ್ತಾನವನ್ನು, ಪಾಕಿಸ್ತಾನದ ದೌರ್ಜನ್ಯದಿಂದ ವಿಮುಕ್ತಿಗೊಳಿಸಿ, ಪ್ರತ್ಯೇಕ ‘ಬಾಂಗ್ಲಾ ದೇಶ’ ರಾಷ್ಟ್ರದ ಉಗಮಕ್ಕೆ ಕಾರಣವಾದ ಭಾರತದ ಹೋರಾಟಕ್ಕೆ ಗೆಲುವು ಸಿಕ್ಕ ವಿಜಯದ ದಿನವಿದು. ಈ ಹೋರಾಟದಲ್ಲಿ ರಾಷ್ಟ್ರದ ಹಲವಾರು ಸೈನಿಕರು ಬಲಿದಾನಗೈದಿದ್ದು, ಇಂದಿಗೂ ಕೆಲವರು ನಮ್ಮ ಜೊತೆಗಿರುವುದು ಹೆಮ್ಮೆಯ ಕ್ಷಣ ಎಂದರು.ಹಿರಿಯ ನ್ಯಾಯವಾದಿ ಬಿ.ಎಂ.ಲಕ್ಷ್ಮಣಗೌಡ ಮಾತನಾಡಿ, ಅಮೆರಿಕಾ ದೇಶ ಜಗತ್ತಿನ ಎದುರು ಬಲಾಢ್ಯ ರಾಷ್ಟ್ರವೆಂದು ಬಿಂಬಿಸಿಕೊಂಡು, ಭಾರತದ ಮೇಲೆ ವಿಪರೀತ ತೆರಿಗೆ ಏರಿಸುತ್ತಿದೆ. ಇದೀಗ ಆಧುನಿಕ ಭಾರತವು ಪ್ರಪಂಚದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು ಸದ್ಯದಲ್ಲೇ ಅಮೆರಿಕಾವನ್ನು ದೊಡ್ಡಣ್ಣ ಸ್ಥಾನದಿಂದ ಕೆಳಗಿಳಿಸಿ, ಭಾರತ ದೊಡ್ಡಣ್ಣನ ಪಟ್ಟಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಮಾಜಿ ಸೈನಿಕರ ಸಂಘ ದಿನೇ ದಿನೇ ಗಟ್ಟಿಯಾಗುತ್ತಿದೆ. ಬೆರಳೆಣಿಕೆಯಷ್ಟು ಸದಸ್ಯರನ್ನು ಹೊಂದಿದ್ದ ಸಂಘವು ಇಂದು ಅನೇಕ ಹಿರಿಯ ಅಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಹೆಮ್ಮರವಾಗಿ ಬೆಳೆದಿದೆ. ಅಲ್ಲದೇ ಸಭೆ, ಸಮಾರಂಭ ಹಾಗೂ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಶಕ್ತಿಯುತವಾಗುತ್ತಿದೆ ಎಂದು ತಿಳಿಸಿದರು.ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸಾವಿರಾರು ಮೈಲುಗಳಲ್ಲಿ ಗಡಿಯ ವಿಸ್ತಾರ ಹಂಚಿಕೊಂಡಿದೆ. ಗಡಿರೇಖೆಯಲ್ಲಿ ಭಾರತೀಯ ನೆಲವನ್ನು ಕಾಪಾಡಿಕೊಳ್ಳಲು ನಮ್ಮ ಸೈನಿಕರು ಚಳಿ, ಬಿಸಿಲೆನ್ನದೇ ಹಗಲು ರಾತ್ರಿಯಲ್ಲೂ ಕಾದು ದೇಶವನ್ನು ರಕ್ಷಿಸುವುದನ್ನು ಮರೆಯಬಾರದು ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರವು ಅನೇಕ ಯುದ್ಧಗಳನ್ನು ಎದುರಿಸಿತು. ಆದರೆ, ಇಂಡೋ-ಪಾಕ್ ಯುದ್ಧವು ಭಾರತೀಯ ಸೈನ್ಯಕ್ಕೆ ಮನ್ನಣೆ ತಂದುಕೊಟ್ಟಿದೆ. 1971 ರಲ್ಲಿ ನಡೆದ 13 ದಿನಗಳ ಯುದ್ಧವು ಪಾಕಿಸ್ತಾನದೊಂದಿಗೆ ನಡೆದಿದ್ದು, ಇದು ಬಾಂಗ್ಲಾದೇಶ ಯುದ್ಧವೆಂದೇ ಪ್ರತೀಕವಾಗಿದೆ. ಈ ಯುದ್ಧವು ಭಾರತದ ಇತಿಹಾಸದಲ್ಲಿ ಸದಾ ನೆನಪಿಸಲಿದೆ ಎಂದು ಹೇಳಿದರು.ಇದೇ ವೇಳೆ ರೋಟರಿ ಕ್ಲಬ್‌ನಿಂದ ಮಾಜಿ ಸೈನಿಕರ ಸಂಘಕ್ಕೆ ಉಚಿತವಾಗಿ ಕಂಪ್ಯೂಟರ್ ಕೊಡುಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಪ್ರದೀಪ್ ಕೋಟೆ, ಖಜಾಂಚಿ ರಾಜೇಗೌಡ, ಮಾಜಿ ಅಧ್ಯಕ್ಷ ನಾಗರಾಜ್, ರೋಟರಿ ಕ್ಲಬ್ ಅಧ್ಯಕ್ಷ ಲಿಖಿತ್ ಉಪಸ್ಥಿತರಿದ್ದರು.