ಕನ್ನಡಪ್ರಭ ವಾರ್ತೆ ಮಂಗಳೂರು

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಹೆಗ್ಗುರುತಾಗಿದ್ದ ಕೊಟ್ಟಾರದ ಇನ್ಫೋಸಿಸ್ ಟೆಕ್ ಪಾರ್ಕ್ ಇದೀಗ ಮುಕುಂದ್ ರಿಯಾಲ್ಟಿ ಸಂಸ್ಥೆಯ ಪಾಲಾಗಿದೆ. ಶುಕ್ರವಾರ ಸಂಜೆ ಈ ಕಟ್ಟಡವನ್ನು ಮುಕುಂದ್ ರಿಯಾಲ್ಟಿ ಬ್ರಾಂಡ್‌ ನೇಮ್‌ನೊಂದಿಗೆ ಕರ್ಣಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಚಂದ್ರಶೇಖರ್ ಅನಾವರಣಗೊಳಿಸಿದರು.

ಇನ್ಫೋಸಿಸ್ ಲಿಮಿಟೆಡ್‌ಗೆ ಸೇರಿದ ಸುಮಾರು 2.75 ಎಕರೆ ವಿಸ್ತೀರ್ಣದ ಆಸ್ತಿಯ ಖರೀದಿ ಹಾಗೂ ಹಸ್ತಾಂತರ ಪ್ರಕ್ರಿಯೆ ಅ.23ರಂದು ಪೂರ್ಣಗೊಂಡಿದೆ.

ಮಂಗಳೂರಿನ ಉದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಈ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ನಗರದಲ್ಲಿ ಹೊಸ ಉದ್ಯಮಗಳ ಸ್ಥಾಪನೆ, ಉದ್ಯಮಶೀಲತೆಗೆ ಉತ್ತೇಜನ ಹಾಗೂ ಸ್ಥಳೀಯ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಮುಕುಂದ್ ರಿಯಾಲ್ಟಿ ವ್ಯವಸ್ಥಾಪಕ ಪಾಲುದಾರ ಗುರುದತ್ ಶೆಣೈ ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ), ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಹಾಗೂ ವಿವಿಧ ಕಂಪನಿಗಳ ತಂತ್ರಜ್ಞಾನ ಕಾರ್ಯಾಚರಣೆಗಳಿಗೆ ಮಂಗಳೂರಿನಲ್ಲಿ ಉತ್ತಮ ಅವಕಾಶಗಳಿವೆ. ಕೊಟ್ಟಾರದ ಆಸ್ತಿಯ ಅಭಿವೃದ್ಧಿ ಮೂಲಕ ಇಂತಹ ಸಂಸ್ಥೆಗಳನ್ನು ಆಕರ್ಷಿಸುವ ಉದ್ದೇಶ ಹೊಂದಲಾಗಿದೆ. ಆದರೆ, ಆಸ್ತಿಯ ಮುಂದಿನ ಬಳಕೆ ಹಾಗೂ ಅಭಿವೃದ್ಧಿ ಯೋಜನೆಗಳ ವಿವರಗಳನ್ನು ಅಂತಿಮಗೊಳಿಸಿದ ಬಳಿಕ ಪ್ರಕಟಿಸಲಾಗುವುದು ಎಂದರು.


5,500 ವರ್ಕ್‌ಸ್ಟೇಷನ್‌ಗಳ ಸೌಲಭ್ಯ:

ಮುಕುಂದ್ ರಿಯಾಲ್ಟಿ ಈಗಾಗಲೇ ಅಜಂತಾ ಮತ್ತು ಅಶೋಕ ಬಿಸಿನೆಸ್ ಸೆಂಟರ್‌ಗಳ ಮೂಲಕ ವಾಣಿಜ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆಯ ಅಂಗಸಂಸ್ಥೆಯಾದ ವೆರ್ಟೆಕ್ಸ್ ವರ್ಕ್‌ಸ್ಪೇಸ್‌ಸ್ ಮಂಗಳೂರಿನಲ್ಲಿ ನಿರ್ವಹಣಾ ಕಾರ್ಯಸ್ಥಳಗಳ ಸೌಲಭ್ಯ ಒದಗಿಸುತ್ತಿದೆ. ಈವರೆಗೆ 5,500ಕ್ಕೂ ಅಧಿಕ ವರ್ಕ್‌ಸ್ಟೇಷನ್‌ಗಳನ್ನು ನಿರ್ಮಿಸಿದ್ದು, 55ಕ್ಕೂ ಹೆಚ್ಚು ಕಾರ್ಪೊರೇಟ್ ಕಂಪನಿಗಳು ಮಂಗಳೂರಿನಲ್ಲಿ ತಮ್ಮ ಕಾರ್ಯಚಟುವಟಿಕೆ ಆರಂಭಿಸಲು ನೆರವಾಗಿದೆ ಎಂದರು.

14 ಯೋಜನೆಗಳ ಅನುಷ್ಠಾನ:

ಮಂಗಳೂರಿನಲ್ಲಿ ನೆಲೆಗೊಂಡಿರುವ ಮುಕುಂದ್ ರಿಯಾಲ್ಟಿ 2014ರಿಂದ ಈವರೆಗೆ ವಸತಿ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ 14 ಯೋಜನೆಗಳನ್ನು ಪೂರ್ಣಗೊಳಿಸಿದ್ದು, 800 ಗ್ರಾಹಕರಿಗೆ ಸೇವೆ ಒದಗಿಸಿದೆ ಎಂದರು.

ಮುಕುಂದ್ ರಿಯಾಲ್ಟಿಯ ಮ್ಯಾನೇಜಿಂಗ್ ಪಾಲುದಾರರಾದ ಮಹೇಶ್ ಶೆಟ್ಟಿ ಮತ್ತು ಮಂಗಳದೀಪ್ ಎ.ಆರ್. ಇದ್ದರು.

ಮಂಗಳೂರಿನ ಮುಂದಿನ ಹಂತದ ಬೆಳವಣಿಗೆಗೆ ಕೊಡುಗೆ ನೀಡುವ ಅವಕಾಶವಾಗಿ ಇನ್ಫೋಸಿಸ್ ಟೆಕ್ ಪಾರ್ಕ್‌ನ್ನು ಖರೀದಿಸಿದ್ದೇವೆ. ಉದ್ಯಮಗಳು ಬೆಳೆಯಲು, ಪ್ರತಿಭಾವಂತರು ವಿದೇಶಕ್ಕೆ ಹೋಗದಂತೆ ಮಾಡಲು ಹಾಗೂ ಉದ್ಯಮಿಗಳು ತಮ್ಮ ಭವಿಷ್ಯವನ್ನು ಇಲ್ಲಿಯೇ ರೂಪಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಿಸುವುದು ನಮ್ಮ ಆಶಯ.

-ಗುರುದತ್ ಶೆಣೈ, ವ್ಯವಸ್ಥಾಪಕ ಪಾಲುದಾರರು, ಮುಕುಂದ್ ರಿಯಾಲ್ಟಿ

-----------------