ಕನ್ನಡಪ್ರಭ ವಾರ್ತೆ ಯಾದಗಿರಿ
ಕಾಂಗ್ರೆಸ್ ಪಕ್ಷ ಕುರುಬ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ಧೀಮಂತ ನಾಯಕರನ್ನು ಅವಮಾನಿಸುವ ಮೂಲಕ ಇಡೀ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಪ್ರೊ. ಎಂ.ಎನ್. ನಾಗರಾಜ್ ತೀವ್ರ ಬೇಸರ ವ್ಯಕ್ತಪಡಿಸಿದರು.ಜಿಲ್ಲೆಯ ಶಹಾಪುರದ ಚಾಂದ್ ಪ್ಯಾಲೇಸ್ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ದೇಶದ ವಿವಿಧ ರಾಜ್ಯಗಳಿಂದ ಕುರುಬ ಸಮುದಾಯದ ಐವರಿಗೆ ರಾಜ್ಯಸಭಾ ಸ್ಥಾನಮಾನ ನೀಡಿದೆ. ಕರ್ನಾಟಕ, ಗುಜರಾತ್, ಉತ್ತರ ಪ್ರದೇಶ ಹಾಗೂ ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಮುದಾಯದವರಿಗೆ ರಾಜಕೀಯ ಅವಕಾಶ ಕಲ್ಪಿಸಿದೆ. ಆದರೆ, ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದರು.
2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರು ರೋಸಿ ಹೋಗಿದ್ದಾರೆ. ಗ್ಯಾರಂಟಿಗಳ ನೆಪದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಕಡೆಗಣಿಸಲಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಬಿಜೆಪಿಯ ಹಿರಿಯ ಮುಖಂಡ ಅಮಿನರೆಡ್ಡಿ ಯಾಳಗಿ ಮಾತನಾಡಿ, ಪ್ರೊ. ನಾಗರಾಜ್ ಅವರು ಶಿಕ್ಷಣ ತಜ್ಞರು ಹಾಗೂ ರಾಷ್ಟ್ರೀಯ ವಿಚಾರಧಾರೆಯ ನಾಯಕರು. ಎಬಿವಿಪಿ ಮೂಲಕ ಸಾರ್ವಜನಿಕ ಜೀವನ ಆರಂಭಿಸಿ, ಆರ್ಎಸ್ಎಸ್ನಲ್ಲಿ ಬೆಳೆದು ಬಿಜೆಪಿಯಲ್ಲಿ ತಳಮಟ್ಟದಿಂದ ಕೆಲಸ ಮಾಡಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಬಿಜೆಪಿ ಕಚೇರಿಗಳ ಸ್ಥಾಪನೆಗೆ ಅವರ ಕೊಡುಗೆ ಮಹತ್ವದ್ದಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸೂಕ್ತ ಸ್ಥಾನಮಾನ ನೀಡಿದೆ ಎಂದರು.
ಪ್ರೊ. ನಾಗರಾಜ್ ಅವರು ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕರ್ನಾಟಕ ಕುರುಬರ ಸಂಘದ ವತಿಯಿಂದ ಕುರಿಮರಿ ನೀಡಿ ಕಂಬಳಿ ಹೊದಿಸಿ ಅವರನ್ನು ಗೌರವಿಸಲಾಯಿತು. ತಿಂಥಣಿ ಬ್ರೀಜ್ ಕನಕ ಗುರು ಪೀಠದ ಲಿಂಗ ಬೀರದೇವರು ಸಾನ್ನಿಧ್ಯ ವಹಿಸಿದ್ದರು. ಗುಂಡಗುರ್ತಿ ಪೂಜ್ಯರಾದ ನಾಗಯ್ಯ ತಾತ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂತಿಹಳ್ಳಿ, ಮುಖಂಡರಾದ ಡಾ. ಚಂದ್ರಶೇಖರ್ ಸುಬೇದಾರ್ ಮುಂತಾದವರಿದ್ದರು.