ಮಡಿಕೇರಿ ; ಕೊಡಗು ಜಿಲ್ಲಾಡಳಿತ ವತಿಯಿಂದ 71 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯು ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಅರ್ಥಪೂರ್ಣವಾಗಿ ನಡೆಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.ಈ ಸಂದರ್ಭ ಮಾತನಾಡಿದ ಅವರು, ಕನ್ನಡ ಬರೀ ಭಾಷೆಯಲ್ಲ. ಅದು‌ ನಮ್ಮ ಉಸಿರು, ನಮ್ಮ ಸಂಸ್ಕೃತಿ. ಕಾವೇರಿಯಿಂದ ಗೋದಾವರಿವರೆಗೂ ವಿಸ್ತಾರವಾಗಿದ್ದ ನಾಡು. ಭಾಷಾವಾರು ಪ್ರಾಂತ್ಯಗಳ ಪುನರ್ ವಿಂಗಡಣೆ ಬಳಿಕ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು 1956 ನವೆಂಬರ್ 1 ರಂದು ಒಟ್ಟುಗೂಡಿಸಿ ಅಖಂಡ ಮೈಸೂರು ರಾಜ್ಯವನ್ನು ಅಸ್ತಿತ್ವಕ್ಕೆ ತರಲಾಯಿತು. ಅಂದು ಕನ್ನಡ ನಾಡು ಏಕೀಕರಣಗೊಂಡ ದಿನವನ್ನೇ ನಾವೀಗ ಕನ್ನಡ ನಾಡ ಹಬ್ಬವಾಗಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು. ಉತ್ಕೃಷ್ಟತೆ ಹಾಗೂ ಗರಿಮೆಗೆ ಸಾಕ್ಷಿ:

ಕನ್ನಡ ಸಾರಸ್ವತ ಲೋಕಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿರುವುದು ಕನ್ನಡ ಭಾಷೆಯ ಉತ್ಕೃಷ್ಟತೆ ಹಾಗೂ ಗರಿಮೆಗೆ ಸಾಕ್ಷಿಯಾಗಿದೆ. ನಾವು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಮ್ಮ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ಸಾಹಿತ್ಯದ ಕಂಪು ಪಸರಿಸಿದ ಆದಿಕವಿ ಪಂಪರಿಂದ ಹಿಡಿದು, ರಾಷ್ಟ್ರಕವಿ ಕುವೆಂಪು, ದ.ರಾ ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ.ಕೃ.ಗೋಕಾಕ್, ಬಿ.ಎಂ. ಶ್ರೀಕಂಠಯ್ಯ ಅವರಂತಹ ಅನೇಕ ಪ್ರಸಿದ್ಧ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದರು ಎಂದು ಹೇಳಿದರು.71ನೇ ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನಮ್ಮ ಸರ್ಕಾರ ಕೊಡಗಿನ ಇಬ್ಬರು ಸಾಧಕರ ಸೇವೆಯನ್ನು ಗುರುತಿಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಭಾರತ ಹಾಕಿ ತಂಡದ ಗೋಲ್ ಕೀಪರ್ ಆಗಿದ್ದ ಕೊಡಗಿನ ಡಾ.ಎ.ಬಿ.ಸುಬ್ಬಯ್ಯ ಹಾಗೂ ಪ್ರಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಸೇವೆ ಗುರುತಿಸಿ 2026 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.ಕೊಡಗಿನ ಕೊಡುಗೆ ಅಪಾರ: ಕನ್ನಡ ಭಾಷಾ ಜಾಗೃತಿಯಲ್ಲಿ ಕೊಡಗಿನ ಅನೇಕ ನಾಯಕರು ಮುಂಚೂಣಿಯಲ್ಲಿ‌ ನಿಂತು, ಕನ್ನಡ ನೆಲದ ಅಸ್ಮಿತೆಯನ್ನು ಎತ್ತಿಹಿಡಿದಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲೂ ಕೊಡಗಿನ ಕೊಡುಗೆ ಅಪಾರ. ಕನ್ನಡದ ಪ್ರಸಿದ್ಧ ಲೇಖಕಿಯಾಗಿದ್ದ ಕೊಡಗಿನ ಗೌರಮ್ಮನವರು ತಮ್ಮ ಕಥೆಗಳು ಮತ್ತು ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಕೊಡುಗೆ ನೀಡಿದ್ದರು. ಆಗಲೇ ಕೊಡಗು ಮತ್ತು ನವೋದಯ ಕನ್ನಡ ಸಾಹಿತ್ಯದ ನಡುವೆ ಗಟ್ಟಿ ಸೇತುವೆ ನಿರ್ಮಾಣವಾಯಿತು.

ಪಶ್ಚಿಮ ಘಟ್ಟದ ಸಾಲಿನಲ್ಲಿರುವ ಬ್ರಹ್ಮಗಿರಿ ತಪ್ಪಲಿನ ಪುಣ್ಯಭೂಮಿಯಲ್ಲಿ ತಾಯಿ ಕಾವೇರಿ ಮಾತೆ ಜನ್ಮ ತಾಳುವುದು ನಮ್ಮ ಪುಣ್ಯ. ಪ್ರಾಣಿ ಸಂಕುಲ, ಸಸ್ಯ ಸಂಕುಲವನ್ನು ಮಕ್ಕಳಂತೆ ಸಲಹುತ್ತಿರುವ ಕಾವೇರಿ ಮಾತೆಯ ಕರುಣೆಯಿಂದಲೇ ನಾವೆಲ್ಲರೂ ಧನ್ಯರು ಎಂದರು. ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಕೊಡಗಿನ ಜನತೆಗೆ ಭುವನೇಶ್ವರಿ ತಾಯಿ, ಕಾವೇರಿ ಮಾತೆ ಹಾಗೂ ಇಗ್ಗುತ್ತಪ್ಪ ದೇವರ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು. ಶಾಸಕರಾದ ಡಾ.ಮಂತರ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಹೆಚ್ಚುವರಿ ಜಿಲ್ಲಾಧಿಕಾರಿ ಜಯಲಕ್ಷ್ಮಿ, ತಹಸೀಲ್ದಾರರು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪದವಿ ಪೂರ್ವ ಶಿಕ್ಷಣ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿರುವ ವಿದ್ಯಾರ್ಥಿಗಳಿಗೆ ‘ಗ್ರಾಮಾನುಭವ’ ಪ್ರವಾಸ ಕಾರ್ಯಕ್ರಮಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರ ಸ್ವಾಮಿ ಅವರು ಇದೇ ಸಂದರ್ಭದಲ್ಲಿ ಹಸಿರು ನಿಶಾನೆ ತೋರಿದರು.ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ವೃತ್ತದಲ್ಲಿ ಮೆರವಣಿಗೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಜಯಲಕ್ಷ್ಮಿ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.ಮೆರವಣಿಗೆಯಲ್ಲಿ ಹಲವು ಕಲಾತಂಡದವರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕೃಷಿ, ತೋಟಗಾರಿಕೆ, ಪಶುಪಾಲನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅರಣ್ಯ ಇಲಾಖೆಗಳ ಸ್ತಬ್ಧಚಿತ್ರ ಪ್ರದರ್ಶನ ಗಮನ ಸೆಳೆಯಿತು