ಮಂಗಳೂರು: ಉಜಿರೆ ರಬ್ಬರ್ ಬೆಳೆಗಾರರ ಒಕ್ಕೂಟದ ಕೋರಿಕೆಯ ಮೇರೆಗೆ ಪುತ್ತೂರಿನ ಆರ್ಥಿಕ ತಜ್ಞ ಡಾ. ವಿಘ್ನೇಶ್ವರ ವರ್ಮಡಿ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಸಿದ್ಧಪಡಿಸಿದ ರಬ್ಬರ್ ಕ್ಷೇತ್ರದ ಆರ್ಥಿಕ ಸ್ಥಿತಿಗತಿ ಹಾಗೂ ಬೆಳೆಗಾರರ ಸಮಸ್ಯೆಗಳ ಕುರಿತ ಅಧ್ಯಯನ ವರದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ದೊರೆತಿದೆ.

ಕೇರಳ ಸರ್ಕಾರ ರಬ್ಬರ್‌ಗೆ ಬೆಂಬಲ ಬೆಲೆ ಘೋಷಣೆ ಮಾಡಿರುವ ಹಿಂದೆ ಡಾ.ವರ್ಮುಡಿ ಅವರ ರಬ್ಬರ್‌ ಕುರಿತ ವರದಿ ಅಂತಾರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿರುವುದನ್ನು ಪ್ರಸ್ತಾಪಿಸಿರುವುದು ಗಮನಾರ್ಹ. ರಬ್ಬರ್ ಕೃಷಿ ಎದುರಿಸುತ್ತಿರುವ ಆರ್ಥಿಕ ಸವಾಲುಗಳು, ಉತ್ಪಾದನಾ ವೆಚ್ಚದ ಹೆಚ್ಚಳ, ಜಾಗತಿಕ ಮಾರುಕಟ್ಟೆಯ ಬೆಲೆ ಏರಿಳಿತ, ಆಮದು ನೀತಿ ಹಾಗೂ ಬೆಳೆಗಾರರ ಆದಾಯದ ಮೇಲೆ ಅವು ಬೀರುತ್ತಿರುವ ಪರಿಣಾಮಗಳನ್ನು ವಿಶ್ಲೇಷಿಸಿರುವ ಈ ವರದಿ ಮಹತ್ವ ಪಡೆದುಕೊಂಡಿದೆ. ‘Natural Rubber Economy in Karnataka at Crossroads’ ಎಂಬ ಶೀರ್ಷಿಕೆಯ ಈ ಅಧ್ಯಯನ ವರದಿಯನ್ನು ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಸಮ್ಮೇಳನದಲ್ಲಿ ಮಂಡಿಸಲಾಗಿತ್ತು.

ಉಜಿರೆ ರಬ್ಬರ್ ಬೆಳೆಗಾರರ ಒಕ್ಕೂಟದ ಮನವಿಯಂತೆ ಸಿದ್ಧಪಡಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ, ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರಗಳಿಗೆ ಸಲ್ಲಿಸಲಾಗಿತ್ತು. ರಬ್ಬರ್ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉತ್ಪಾದನಾ ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕಹಾಕಿ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವ ಅಗತ್ಯವನ್ನು ವರದಿ ಪ್ರತಿಪಾದಿಸಿತ್ತು.

ವರದಿಯಲ್ಲಿ ಒಂದು ಕೆ.ಜಿ. ರಬ್ಬರ್ ಉತ್ಪಾದನೆಗೆ ತಗಲುವ ವೆಚ್ಚವನ್ನು 258 ರು. ಎಂದು ಅಂದಾಜಿಸಲಾಗಿತ್ತು. ಇದಕ್ಕೆ ಸೂಕ್ತ ಲಾಭಾಂಶ ಸೇರಿಸಿದರೆ ಬೆಳೆಗಾರರಿಗೆ ಕನಿಷ್ಠ 323 ರು. ದೊರೆಯಬೇಕು ಎಂದು ಶಿಫಾರಸು ಮಾಡಲಾಗಿತ್ತು.

ಈಗ ರಬ್ಬರ್‌ಗೆ ಕೇರಳ ಬೆಂಬಲ ಬೆಲೆ ಹೆಚ್ಚಳ ಪ್ರಸ್ತಾಪ:


ಈ ವರದಿಯನ್ನು ಕೇರಳ ಸರ್ಕಾರ ಪರಿಗಣಿಸಿದ್ದು, ವರದಿ ಹಾಗೂ ಸಮ್ಮೇಳನದ ಬಳಿಕ ಕೆಲವೇ ತಿಂಗಳಲ್ಲಿ ರಬ್ಬರ್‌ಗೆ ಪ್ರತಿ ಕೆ.ಜಿ.ಗೆ 250 ರು. ಬೆಂಬಲ ಬೆಲೆ ಘೋಷಿಸಿತ್ತು. ಇತ್ತೀಚೆಗೆ ಅಗತ್ಯ ಬಿದ್ದರೆ ಬೆಂಬಲ ಬೆಲೆಯನ್ನು 300 ರೂ.ಗೆ ಹೆಚ್ಚಿಸಲು ಸಿದ್ಧವಿರುವುದಾಗಿ ತಿಳಿಸಿತ್ತು. ಇದೀಗ ಮಾರುಕಟ್ಟೆಯಲ್ಲೇ ರಬ್ಬರ್ ಧಾರಣೆ 300 ರು. ಗಳ ಗಡಿ ದಾಟಿರುವುದು ಗಮನಾರ್ಹ.

ಪ್ರಮುಖ ರಬ್ಬರ್ ಉತ್ಪಾದಕ ರಾಷ್ಟ್ರಗಳಲ್ಲಿ ಉತ್ಪಾದನೆ ಕುಂಠಿತವಾಗಿರುವುದು, ಭಾರತಕ್ಕೆ ಆಗುತ್ತಿರುವ ಆಮದು ಪ್ರಮಾಣ ಕಡಿಮೆಯಾಗಿರುವುದು, ದೇಶೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿರುವುದು ಹಾಗೂ ಕೇರಳ ಮತ್ತು ಕರ್ನಾಟಕದ ಸಾಂಪ್ರದಾಯಿಕ ರಬ್ಬರ್ ಕೃಷಿ ಪ್ರದೇಶಗಳಲ್ಲಿ ಬೆಳೆಗಾರರ ಆಸಕ್ತಿ ಕುಸಿದು ಮರಗಳನ್ನು ಕಡಿಯುತ್ತಿರುವುದು ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಇದರೊಂದಿಗೆ ಕಾರ್ಮಿಕರ ವೇತನ ಹೆಚ್ಚಳವೂ ಉತ್ಪಾದನಾ ವೆಚ್ಚವನ್ನು ಹೆಚ್ಚಿಸಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳು ಹಾಗೂ ಸಿಂಥೆಟಿಕ್ ರಬ್ಬರ್ ಬೆಲೆಯಲ್ಲಿನ ಏರಿಕೆಯೂ ನೈಸರ್ಗಿಕ ರಬ್ಬರ್ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿವೆ. ಪ್ರಸ್ತುತ ಪೂರೈಕೆಯ ಕೊರತೆ ಮತ್ತು ಆಂತರಿಕ ಬೇಡಿಕೆಯ ಹೆಚ್ಚಳದಿಂದ ಧಾರಣೆ ಏರಿಕೆಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ರಬ್ಬರ್ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.

ರಾಜ್ಯ ಸರ್ಕಾರದ ಅಡಕೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಜಾರಿ ಹಿಂದೆ ಡಾ.ವಿಘ್ನೇಶ್ವರ ವರ್ಮುಡಿ ಅವರ ವರದಿ ಕಾರಣವಾಗಿತ್ತು.

------------------