ನಾಲೆಗೆ ನೀರು ಹರಿಸಲು ಸಿದ್ಧತೆಗೆ ಸೂಚನೆ

| Published : Jun 20 2024, 01:02 AM IST

ಸಾರಾಂಶ

ಮುಂಗಾರು ಹಂಗಾಮಿಗೆ ನಾಲೆಗಳಿಗೆ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಂಗಾರು ಹಂಗಾಮಿಗೆ ನಾಲೆಗಳಿಗೆ ನೀರು ಹರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ಶ್ರೀರಂಗಪಟ್ಟಣ ತಾಲೂಕು ಕೆಆರ್‌ಎಸ್‌ನಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ವಿಶ್ವೇಶ್ವರಯ್ಯ ನಾಲಾ ಆಧುನೀಕರಣ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಜೂನ್ ತಿಂಗಳಲ್ಲಿ ನಾಲೆಗೆ ನೀರು ಬಿಟ್ಟಿರುವ ನಿದರ್ಶನಗಳಿಲ್ಲ. ಮುಂದಿನ ಒಂದೆರಡು ದಿನಗಳಲ್ಲಿ ಒಳ್ಳೆಯ ಮಳೆಯಾಗಲಿದೆ ಎಂಬ ವರದಿಗಳಿವೆ. ಮಳೆ ನೋಡಿಕೊಂಡು ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗುವುದು. ನಾಲೆಗಳಿಗೆ ನೀರು ಬಿಡುವ ಬಗ್ಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ಮುಂದಿನ ಒಂದು ವಾರದೊಳಗೆ ನಾಲೆಗಳಿಗೆ ನೀರು ಹರಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಯಾವುದೇ ಕಾರಣಕ್ಕೂ ಕಾಮಗಾರಿಯಿಂದ ನೀರು ನಿಲ್ಲಿಸಲಾಯಿತು ಎಂಬ ಭಾವನೆ ರೈತರಿಗೆ ಬರಬಾರದು. ಅದಕ್ಕಾಗಿ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವುದಕ್ಕೆ ಸೂಚಿಸಿರುವುದಾಗಿ ಹೇಳಿದರು.ನಾಲೆ ಆಧುನೀಕರಣ ವಿಚಾರದಲ್ಲಿ ಜನರಿಗೆ ಸಮರ್ಪಕ ಮಾಹಿತಿ ಕೊಡುವುದರಲ್ಲಿ ನಾವು ವಿಫಲರಾಗಿದ್ದೇವೆ ಎನಿಸುತ್ತಿದೆ ಅಥವಾ ವಿರೋಧಪಕ್ಷದವರು ನಮ್ಮನ್ನು ಟೀಕೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೋ ಗೊತ್ತಿಲ್ಲ. ಯಾರಾದರೂ ಸರಿ ನಮ್ಮನ್ನು ಬೈದುಕೊಳ್ಳಲಿ ಅಥವಾ ಟೀಕೆ ಮಾಡಲಿ, ಇದಕ್ಕೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ವಿರೋಧ ಪಕ್ಷದವರಿಗೆ ನಮ್ಮನ್ನು ಟೀಕಿಸಿಕೊಂಡು ರಾಜಕಾರಣ ಮಾಡೋದೇ ಮುಖ್ಯ ಎಂದಾದರೆ ನಮಗೆ ನಮ್ಮ ಜನರ ಹಿತ ಅಷ್ಟೇ ಮುಖ್ಯ. ನಾಳೆಯೇ ನಾಲೆಗೆ ನೀರು ಬಿಡಬೇಕು ಎಂಬ ಒತ್ತಡ ಬಂದರೆ ಬಿಡಲು ನಾವು ಸಿದ್ಧ. ಆದರೆ ಇಲ್ಲಿ ಬಿಡಲ್ಲ ಎನ್ನುವ ಮಾತೇ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಪಿ. ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳೀಗೌಡ, ಮಧು ಜಿ. ಮಾದೇಗೌಡ, ಜಿಲ್ಲಾಕಾರಿ ಡಾ. ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇದ್ದರು. ಜಿಲ್ಲೆಗೆ ಡಬಲ್ ಅಭಿವೃದ್ಧಿ ಮಾಡ್ತೇವೆಲೋಕಸಭೆ ಚುನಾವಣೆ ಫಲಿತಾಂಶದಿಂದ ಜಿಲ್ಲೆಯ ಅಭಿವೃದ್ಧಿಯಲ್ಲಿ ವ್ಯತ್ಯಾಸವಾಗಲಿದೆ ಎಂಬ ಅನುಮಾನಗಳು ಬೇಡ. ಅದಕ್ಕೆ ಡಬಲ್ ಅಭಿವೃದ್ಧಿ ಮಾಡಿ ತೋರಿಸುತ್ತೇವೆ. ಕುಮಾರಸ್ವಾಮಿ ಬುದ್ದಿವಂತ, ಅನುಭವಸ್ಥ, ಎರಡು ಬಾರಿ ಸಿಎಂ ಆಗಿದ್ದವರು. ಈಗ ಕೇಂದ್ರ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿದ್ದಾರೆ. ಕೇಂದ್ರದಿಂದ ಮೈಷುಗರ್‌ಗೆ ಅನುದಾನ ಕೊಡಿಸಲಿ. ಜಿಲ್ಲೆಯ ಯುವಕರಿಗೆ ಉದ್ಯೋಗ ಕೊಡಿಸೋದಾದರೆ ಸಂತೋಷ. ಸ್ವಾಗತ ಮಾಡುತ್ತೇನೆ, ಮಂಡ್ಯ ಜಿಲ್ಲೆಯ ನೀರಾವರಿಗೆ ವಿಶೇಷವಾಗಿ ೫ ಸಾವಿರ ಕೋಟಿ ರು. ಅನುದಾನ ಕೊಡಿಸಲಿ. ಕಾವೇರಿ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ನಾನೂ ಪತ್ರ ಬರೆಯುತ್ತೇನೆ. ಅವರಿಗೆ ರಾಜ್ಯ ಸರ್ಕಾರದಿಂದ ಸಹಕಾರ ಕೊಡಿಸುತ್ತೇವೆ. ಅಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಕ್ಕೆ ನಾವು ಸಿದ್ದ. ಚುನಾವಣೆ ಮುಗಿದಿದೆ ಟೀಕೆ, ಟಿಪ್ಪಣಿಗಳು ಬೇಡ. ಅಭಿವೃದ್ಧಿ ಅಷ್ಟೇ ಬೇಕು ಎಂದರು.ಡಿಕೆ ಸ್ಪರ್ಧೆ ಅವಶ್ಯಕತೆಯೇ ಇಲ್ಲ ಚನ್ನಪಟ್ಟಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಪರ್ಧೆ ಮಾಡೋ ಅವಶ್ಯಕತೆಯೇ ಇಲ್ಲ. ಅವರು ಶಾಸಕರಾಗಿ ಉಪಮುಖ್ಯಮಂತ್ರಿ ಆಗಿದ್ದಾರೆ. ಅವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡೋ ಅವಶ್ಯಕತೆ ಏನಿದೆ. ಸ್ಪರ್ಧೆ ಮಾಡುತ್ತಾರೆ ಎನ್ನುವುದೆಲ್ಲಾ ಊಹಾಪೋಹಾ ಅಷ್ಟೇ. ಡಿ.ಕೆ.ಸುರೇಶ್ ಸಂಸತ್ ಚುನಾವಣೆಯಲ್ಲಿ ಸೋತಿರುವುದರಿಂದ ಅವರು ಅಲ್ಲಿ ಸ್ಪರ್ಧೆ ಮಾಡುವರೆಂಬ ಮಾತಿದೆ. ಡಿ.ಕೆ.ಸುರೇಶ್ ಅವರ ಸ್ಪರ್ಧೆ ಬಗ್ಗೆ ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ನಿರ್ಧಾರ ಮಾಡುತ್ತಾರೆ ಎಂದರು.ದರ್ಶನ್ ಬಿಡುಗಡೆಗೆ ಒತ್ತಡ ಹಾಕಿಲ್ಲಕಾಂಗ್ರೆಸ್ ಸರ್ಕಾರದ ಯಾವ ಸಚಿವರೂ ನಟ ದರ್ಶನ್ ಬಿಡುಗಡೆಗೆ ಒತ್ತಡ ಹಾಕಿಲ್ಲ, ನಮ್ಮ ಮುಖ್ಯಮಂತ್ರಿ ಒತ್ತಡಕ್ಕೆ ಮಣಿಯುವವರೂ ಅಲ್ಲ, ದರ್ಶನ್ ಪ್ರಕರಣದಲ್ಲಿ ಕಾನೂನು ಪ್ರಕಾರ ಕ್ರಮ ಆಗಿದೆ. ಆತ್ಮೀಯತೆ ಇರಬಹುದು ಆದರೆ ಆತ್ಮೀಯತೆ ಬೇರೆ, ವಿಶ್ವಾಸವೇ ಬೇರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತನಿಖೆ ನಡೆಯುತ್ತಿದೆ. ಎಲ್ಲವೂ ನ್ಯಾಯಾಲಯದಲ್ಲಿ ತೀರ್ಮಾನವಾಗುತ್ತದೆ. ಕಲಾವಿದರಾಗಿರುವುದರಿಂದ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯ ಇರುತ್ತಾರೆ. ಹಾಗಂತ ತನಿಖೆ ಹಳ್ಳ ಹಿಡಿಯುತ್ತದೆ ಎನ್ನುವುದು ಸರಿಯಲ್ಲ. ನಮ್ಮ ಸರ್ಕಾರ ನೂರಕ್ಕೆ ನೂರು ನಿಷ್ಪಕ್ಷಪಾತ ತನಿಖೆಗೆ ಬದ್ದವಾಗಿದೆ ಎಂದು ತಿಳಿಸಿದರು.ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ಬದಲಾವಣೆ ಮಾಡಿದರೆ ತಪ್ಪೇನು ಎಂಬ ಗೃಹ ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಚಿವಾಲಯ, ಮುಖ್ಯಮಂತ್ರಿಗಳು ಪರಾಮರ್ಶೆ ಮಾಡಿ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ, ಬದಲಾವಣೆ ಮಾಡಿದರೆ ಮುಖ್ಯಮಂತ್ರಿ ಅಥವಾ ಗೃಹ ಸಚಿವರಿಗೆ ವರದಿ ಸಿಗುತ್ತದೆ, ಮಾಹಿತಿ ಇಲ್ಲದೇ ನಾನು ಮಾತನಾಡುವುದು ಸೂಕ್ತವಲ್ಲ, ಬದಲಾವಣೆ ಮಾಡುವ ವಿಚಾರ ಚರ್ಚೆಯಲ್ಲಿದೆ ಎಂದಷ್ಟೇ ಉತ್ತರಿಸಿದರು.

ತೈಲ ಬೆಲೆ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ : ಸಿಆರ್‌ಎಸ್

ಸರ್ಕಾರ ದಿವಾಳಿಯಾಗಿದೆ ಎನ್ನುವ ಅಶೋಕ್‌ಗೆ ತಿಳಿವಳಿಕೆ ಕಡಿಮೆ

ಪೆಟ್ರೋಲ್-ಡೀಸೆಲ್ ಬಗ್ಗೆ ಮಾತನಾಡುವುದಕ್ಕೆ ಬಿಜೆಪಿಯವರಿಗೆ ಯಾವ ನೈತಿಕ ಹಕ್ಕಿದೆ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇದೆಯಾ, ಪೆಟ್ರೋಲ್ ೭೦ ರಿಂದ ೧೦೦ರು.ಗೆ ಹೆಚ್ಚಾದಾಗ ಏನು ಮಾಡುತ್ತಿದ್ದರು, ಮನಮೋಹನ್‌ ಸಿಂಗ್ ೧ ಲಕ್ಷ ಕೋಟಿ ರು. ಕೊಟ್ಟು ಸಬ್ಸಿಡಿ ನೀಡಿ ತೈಲ ಬೆಲೆ ಕಡಿಮೆ ಮಾಡಿದ್ದರು. ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಲ್ಲಿ ಬೆಲೆ ಎಷ್ಟಿದೆ. ರೈತರಿಗೆ ಅನುಕೂಲ ಮಾಡಬೇಕು. ಅಭಿವೃದ್ದಿ ಮಾಡಬೇಕು ಎಂದಾಗ ಬೆಲೆ ಏರಿಕೆ ಮಾಡಬೇಕಾಗುತ್ತದೆ. ತೆರಿಗೆ ಇಲ್ಲದೆ ಸರ್ಕಾರ ನಡೆಸೋಕೆ ಸಾಧ್ಯವೇ. ಆಗ ಎರಡು ಲಕ್ಷ ಕೋಟಿ ಬಜೆಟ್ ಆಗುತ್ತಿತ್ತು, ಬಿಜೆಪಿಯವರ ರೀತಿ ಅಬ್‌ನಾರ್ಮಲ್ ಆಗಿ ನಾವು ಬೆಲೆ ಏರಿಕೆ ಮಾಡಿಲ್ಲ. ಇತಿಮಿತಿಯಲ್ಲಿ ಬೆಲೆ ಏರಿಕೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ಸರ್ಕಾರ ದಿವಾಳಿಯಾಗಿದೆ ಎನ್ನುವ ವಿಪಕ್ಷ ನಾಯಕ ಅಶೋಕ್‌ಗೆ ತಿಳಿವಳಿಕೆ ಕಡಿಮೆ. ಸರ್ಕಾರದಿಂದ ಯಾವುದಾದರೂ ಚೆಕ್ ಬೌನ್ಸ್ ಆಗಿದೆಯಾ ಅಥವಾ ನೌಕರರ ಸಂಬಳ ನಿಲ್ಲಿಸಿದ್ದೇವಾ, ಸಾರ್ವಜನಿಕರಿಗೆ ಕೊಡುವ ಸೇವೆ ಸ್ಥಗಿತಗೊಂಡಿದೆಯೇ. ಸಿದ್ದರಾಮಯ್ಯ ಅವರ ರೀತಿ ಗುಡ್ ಗೌರ್ನಮೆಂಟ್ ಕೊಡುವವರು ಮತ್ತೊಬ್ಬರಿಲ್ಲ. ದಿವಾಳಿ ಎಂದರೇ ಏನರ್ಥ? ಅಶೋಕ್ ಅವರಿಗೆ ಯಾರು ವಿಪಕ್ಷ ನಾಯಕ ಸ್ಥಾನ ಕೊಟ್ಟರೋ, ವಿಪಕ್ಷ ಸ್ಥಾನ ಸಿಎಂಗೆ ಸಮವಾಗಿರುವ ಹುದ್ದೆ. ಆದ್ದರಿಂದ ಆ ಸ್ಥಾನದ ಬಗ್ಗೆ ಗಾಂಭೀರ್ಯತೆ ಇರಬೇಕು. ಮಾತನಾಡುವಾಗ ತೂಕ ಇರಬೇಕು. ಅಶೋಕನ ವಿಚಾರಕ್ಕೆ ಕೌಂಟರ್ ಕೊಡೋದು ಅನವಶ್ಯಕ. ಸಿಎಂ ಹೇಳಿದಂತೆ ಅಶೋಕ್‌ಗೆ ತಿಳವಳಿಕೆ, ಮಾಹಿತಿ ಕಡಿಮೆ ಎಂದು ವ್ಯಂಗ್ಯವಾಡಿದರು.