ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಜ.೩ರಂದು ಕೋಲಾರ ಬಂದ್ ಗೆ ಕರೆ ನೀಡಿದ್ದ ನಾನಾ ಸಂಘಟನೆಗಳು ಅಂದು ಕೋಲಾರದ ಡಿಡಿಪಿಐ ಕಚೇರಿಯಲ್ಲಿ ಅಳವಡಿಸಿದ್ದ ಶ್ರೀ ಕೃಷ್ಣ ಸಂದೇಶದ ಗೀತಾ ಸಾರ ಫೋಟೋವನ್ನು ಹರಿದು ಅಪಮಾನ ಮಾಡಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ಪ್ರಮುಖ ವೃತ್ತಗಳಲ್ಲಿ ನೂರಾರು ಬೈಕ್‌ಗಳಲ್ಲಿ ಹಿಂದೂಪರ ಸಂಘಟನೆಗಳು ಬೈಕ್ ರ್‍ಯಾಲಿ ನಡೆಸಿ ಅಕೋಶ ವ್ಯಕ್ತಪಡಿಸಿದವು. ಬೈಕ್ ರ್‍ಯಾಲಿಯು ಡೂಂಲೈಟ್ ವೃತ್ತದಲ್ಲಿ ಪ್ರಾರಂಭವಾಗಿ ಟೇಕಲ್ ವೃತ್ತ, ಕಠಾರಿಪಾಳ್ಯ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಸ್ತೆ, ಶಾರದಾ ಟಾಕೀಸ್ ವೃತ್ತ, ಫಲಾಮೃತ ರಸ್ತೆ, ಹೊಸ ಬಸ್ಟ್ಯಾಂಡ್ ವೃತ್ತ, ಕೆ.ಆರ್.ಸಿ. ವೃತ್ತ, ಕಾಳಮ್ಮನಗುಡಿ ಬೀದಿ, ಎಲೆಪೇಟೆ ವೃತ್ತ, ಚಂಪಕ್ ವೃತ್ತ, ಎಂ.ಜಿ. ರಸ್ತೆ, ಕೆಇಬಿ ರಸ್ತೆ, ಬಂಗಾರಪೇಟೆ ವೃತ್ತದಲ್ಲಿ ಘೋಷಣೆಗಳನ್ನು ಕೂಗಿ, ಗೀತಾ ಸಾರವನ್ನು ಹರಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು ಕೋಲಾರ್ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.ಬೈಕ್ ರ್‍ಯಾಲಿಯಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರಾದ ರಮೇಶ್ ರಾಜ್, ಚಿನ್ಞಪ್ಪಿ, ಬಾಬು, ಅಡಿಕೆ ನಾಗರಾಜ್, ಓಂಪ್ರಕಾಶ್ ಇದ್ದರು.
ಎಡಿಸಿಗೆ ಮನವಿ ಸಲ್ಲಿಕೆನಗರದಲ್ಲಿ ಜ.೩ರಂದು ನಡೆದ ಕೋಲಾರ ಬಂದ್ ಸಂದರ್ಭದಲ್ಲಿ ಡಿಡಿಪಿಐ ಕಚೇರಿಗೆ ನುಗ್ಗಿ ಅಲ್ಲಿ ಗೋಡೆಗೆ ಹಾಕಿದ್ದ ಶ್ರೀಕೃಷ್ಣನ ಭಗವದ್ಗೀತೆ ಸಂದೇಶದ ಗೀತ ಸಾರ ಫೋಟೋವನ್ನು ಹರಿದು ಕಾಲಿನಲ್ಲಿ ತುಳಿದು ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬಜರಂಗದಳ ಹಾಗೂ ಶ್ರೀರಾಮಸೇನೆ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಎಡಿಸಿ ಮಂಗಳರಿಗೆ ಮನವಿ ಸಲ್ಲಿಸಿದರು. ಬಂದ್‌ಗೆ ಕರೆ ನೀಡಿದ್ದವರಿಗೆ ಪೊಲೀಸ್ ಇಲಾಖೆ ಅನುಮತಿ ನೀಡುವಾಗಲೇ ಸಾರ್ವಜನಿಕರಿಗೆ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತೊಂದರೆ ನೀಡಬಾರದು, ಬಲವಂತದ ಬಂದ್ ಮಾಡದಂತೆ ಸೂಚಿಸಿ ನೀಡಿದ್ದ ಸ್ಪಷ್ಟ ಆದೇಶವನ್ನು ಧಿಕ್ಕರಿಸಿ ಡಿಡಿಪಿಐ ಕಚೇರಿಗೆ ನುಗ್ಗಿ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಿದರು.ಹಿಂದೂ ದೇವರಿಗೆ ಅಪಮಾನ
ಪ್ರತಿಭಟನಾಕಾರರಾದ ಚಂದ್ರಮೌಳಿ, ನಗರಸಭೆ ಸದಸ್ಯ ಅಂಬರೀಷ್, ಪಂಡಿತ್ ಮುನಿವೆಂಕಟಪ್ಪ ಮತ್ತಿತರರು ಅಧಿಕಾರಿಗಳ ವಿರುದ್ಧ ಕೂಗಾಡಿ, ಕೆಲಸಕ್ಕೆ ಬಾರದ ಶ್ರೀಕೃಷ್ಣನ ಸಂದೇಶದ ಗೀತಸಾರ ಏಕೆ ಹಾಕಿದ್ದೀರಿ ಎಂದು ಪ್ರಶ್ನಿಸಿ ಹರಿದು ಹಾಕಿದ್ದಲ್ಲದೇ ತುಳಿದು ಹಿಂದೂ ದೇವರಿಗೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಇದರಿಂದ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿದೆ, ಇದು ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಮಾಡಿರುವ ಕೃತ್ಯವಾಗಿದೆ, ಸಮಾಜದಲ್ಲಿನ ಶಾಂತಿ ಕದಡಲು ನಡೆಸಿರುವ ಷಡ್ಯಂತ್ರವಾಗಿದೆ. ಹಿಂದೂ ದೇವರುಗಳಿಗೆ ಅಪಮಾನ ಮಾಡಿರುವ ಮತ್ತು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳೀಗೆ ಧಕ್ಕೆ ತಂದಿರುವವರ ವಿರುದ್ದ ಕೂಡಲೇ ಕಾನೂನು ರೀತ್ಯ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಬಜರಂಗದಳದ ಮುಖಂಡರಾದ ಬಾಲಾಜಿ, ಬಾಬು, ಶ್ರೀಧರ್, ವಿಶ್ವನಾಥ್, ರವಿ, ಮಹೇಶ್, ಗೋಕುಲ್, ಮಂಜು, ಭವಾನಿ, ಗೋಪಿ ಇದ್ದರು.
;Resize=(128,128))
;Resize=(128,128))