ಸಾರಾಂಶ
ಮಾಗಡಿ : ಗ್ರಾಮೀಣ ರೈತರ ಬದುಕು ಹಸನಾಗಬೇಕಾದರೆ ಹಾಲು ಉತ್ಪಾದನೆ ಹೆಚ್ಚಾಗಬೇಕು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಸಿ.ಎನ್.ಮಂಜುನಾಥ್ ಹೇಳಿದರು.
ತಾಲೂಕಿನ ಕಸಬಾ ಹೋಬಳಿ ಮೋಟೇಗೌಡನಪಾಳ್ಯ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡದಲ್ಲಿ ನೂತನವಾಗಿ ನಿರ್ಮಿಸಿರುವ ಮೇಲ್ಮಹಡಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಲು ಉತ್ಪಾದನೆ ಎನ್ನುವುದು ಅಕ್ಷಯಪಾತ್ರೆಯಿದ್ದಂತೆ, ಇದರಿಂದ ಗ್ರಾಮೀಣ ಪ್ರದೇಶದ ಜನರು ಬದುಕು ಕಟ್ಟಿಕೊಳ್ಳಬಹುದು, ರಾಜ್ಯದಲ್ಲಿ ಹಾಲು ಉತ್ಪಾದಿಸುತ್ತಿರುವ ರೈತರಿಗೆ ಸರಕಾರ 622 ಕೋಟಿ ರು. ಪ್ರೋತ್ಸಾಹಧನವನ್ನು ಬಾಕಿ ಉಳಿಸಿಕೊಂಡಿದ್ದು, ಶೀಘ್ರ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಾಲಿನ ಕ್ರಾಂತಿಯಾಗಲು ಎಚ್.ಡಿ.ದೇವೇಗೌಡರು ನೇರ ಕಾರಣರಾಗಿದ್ದಾರೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಗುಜರಾತ್‌ಗೆ ಭೇಟಿ ನೀಡಿದ್ದರು, ಆ ಸಮಯದಲ್ಲಿ ಕ್ಷೀರ ಪಿತಾಮಹ ಕೋರಿಯನ್ ಅವರನ್ನು ಭೇಟಿಯಾಗಿ ಗುಜರಾತ್ ಮಾದರಿಯಲ್ಲಿಯೇ ಬೆಂಗಳೂರಿನಲ್ಲಿ ಮೆಗಾ ಡೇರಿ ಪ್ರಾರಂಭಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಆನಂತರ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮುಂತಾದ ಜಿಲ್ಲೆಗಳಲ್ಲಿ ಮೆಗಾ ಡೇರಿ ಪ್ರಾರಂಭಿಸಿ ಹಾಲಿನ ಉತ್ಪಾದನೆಯನ್ನು ಹೆಚ್ಚು ಮಾಡಿದ್ದರು ಎಂದು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಸರಕಾರಗಳು ಕೈಗಾರಿಕೆಗಾಗಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ, ಇದರಿಂದ ಕೃಷಿ ಚಟುವಟಿಕೆಗೆ ಬಹಳಷ್ಟು ತೊಡಕಾಗುತ್ತಿದೆ, ಬಿಡದಿ, ಡಾಬಸ್‌ಪೇಟೆ, ಹಾರೋಹಳ್ಳಿ ಮುಂತಾದ ಕೈಗಾರಿಕಾ ಪ್ರದೇಶಗಳಲ್ಲಿ ಕೆಲವರು ಕೈಗಾರಿಕಾ ನಿವೇಶನವನ್ನು ಪಡೆದುಕೊಂಡು ಅಲ್ಲಿ ಯಾವುದೇ ಚಟುವಟಿಕೆಯನ್ನು ನಡೆಸುತ್ತಿಲ್ಲ, ಖಾಲಿ ಇರುವ ಕೈಗಾರಿಕಾ ನಿವೇಶನಗಳನ್ನು ಭರ್ತಿ ಮಾಡಬೇಕೇ ಹೊರತು ಸರಕಾರಗಳು ಹೊಸದಾಗಿ ಕೈಗಾರಿಕಾ ಪ್ರದೇಶ ನಿರ್ಮಿಸಲು ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಸಿ.ಎನ್.ಮಂಜುನಾಥ್ ಹೇಳಿದರು.
ಸೋಲೂರು ಹೋಬಳಿ ಮಾಗಡಿ ತಾಲೂಕಿನ ಅವಿಭಾಜ್ಯ ಅಂಗವಾಗಿದ್ದು, ಇದನ್ನು ನೆಲಮಂಗಲ ತಾಲೂಕಿಗೆ ಸೇರಿಸದೇ ಮಾಗಡಿ ತಾಲೂಕಿನಲ್ಲಿಯೇ ಉಳಿಸಬೇಕು, ಒಂದು ವೇಳೆ ಸೋಲೂರು ನೆಲಮಂಗಲ ತಾಲೂಕಿಗೆ ಸೇರ್ಪಡೆಯಾದರೆ ಇಲ್ಲಿನ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ದೇವನಹಳ್ಳಿಗೆ ತಿರುಗಾಡಬೇಕಾಗುತ್ತದೆ ಎಂದು ತಿಳಿಸಿದರು.
ಡಾಬಸ್‌ಪೇಟೆಯಿಂದ ತಮಿಳುನಾಡಿನ ಹೊಸೂರುವರೆಗೆ ಎಸ್‌ಟಿಆರ್‌ಆರ್ ವರ್ತುಲ ರಸ್ತೆ ನಿರ್ಮಿಸುವಂತೆ ತಾವು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿಶ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದು, ವರ್ತುಲ ರಸ್ತೆಗೆ ಅನುಮೋದನೆ ದೊರೆತಿದೆ, ದಾಬಸ್‌ಪೇಟೆಯಿಂದ ಮಾಗಡಿ, ರಾಮನಗರ, ಹಾರೋಹಳ್ಳಿ, ಹೊಸೂರು ಮಾರ್ಗವಾಗಿ ವರ್ತುಲ ರಸ್ತೆ ನಿರ್ಮಾಣಕ್ಕೆ 4750 ಕೋಟಿ ರು. ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ ಎಂದು ಸಂಸದರು ತಿಳಿಸಿದರು.
ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ನನ್ನ ಅವಧಿಯಲ್ಲಿ ಹಾಲಿನ ಡೇರಿಗೆ ಕಟ್ಟಡ ನಿರ್ಮಿಸಲು 3 ರಿಂದ 10 ಲಕ್ಷದ ವರೆಗೆ ಅನುದಾನ ನೀಡಿದ್ದು, ನಿವೇಶನಗಳು ಇಲ್ಲದ ಡೇರಿಗಳಿಗೆ ನಿವೇಶನ ಒದಗಿಸಿದ್ದೇನೆ, 15 ವರ್ಷಗಳ ಹಿಂದೆ ತಾಲೂಕಿನಲ್ಲಿ ಕೇವಲ 50 ರಿಂದ 70 ಡೇರಿಗಳಿದ್ದವು, ನರಸಿಂಹಮೂರ್ತಿ ಅವರು ಬಮುಲ್ ನಿರ್ದೇಶಕರಾದ ನಂತರ ತಾಲೂಕಿನಲ್ಲಿ ಈಗ 300 ಕ್ಕೂ ಹೆಚ್ಚು ಡೇರಿಗಳಿವೆ, ಇದಕ್ಕೆ ನರಸಿಂಹಮೂರ್ತಿ ಅವರ ಶ್ರಮ ಬಹಳಷ್ಟಿದೆ ಎಂದು ನರಸಿಂಹಮೂರ್ತಿ ಅವರನ್ನು ಮಾಜಿ ಶಾಸಕರು ಪ್ರಶಂಸಿದರು.
ಕಾರ್ಯಕ್ರಮದಲ್ಲಿ ತಗ್ಗೀಕುಪ್ಪೆ ಗ್ರಾಪಂ ಅಧ್ಯಕ್ಷೆ ತೇಜಸ್ವಿನಿ ರಾಮು, ತಾಪಂ ಮಾಜಿ ಅಧ್ಯಕ್ಷ ನಾರಾಯಣಪ್ಪ, ಧವಳಗಿರಿ ಚಂದ್ರಣ್ಣ, ತಮ್ಮಣ್ಣಗೌಡ ಹನುಮಾಪುರ ಚಿಕ್ಕಣ್ಣ, ರಾಮಣ್ಣ, ಕುಮಾರ್, ಹೊಸಳ್ಳಿ ರಂಗಣ್ಣಿ, ಮೂರ್ತಿ, ರಾಜಣ್ಣ, ಕೃಷ್ಣಮೂರ್ತಿ, ಮುನಿರಾಜು, ಹನುಮಾಪುರ ಕೃಷ್ಣ ಮತ್ತಿತರರು ಭಾಗವಹಿಸಿದ್ದರು.