ಮಂಜುನಾಥ ಕೆ.ಎಂ. ಬಳ್ಳಾರಿ

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷ ಗಾದಿಗೇರಲು ಗ್ರಾಮೀಣ ಶಾಸಕ ಬಿ. ನಾಗೇಂದ್ರ ಅವರ ಬೆಂಬಲಿಗರ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿದ್ದು, ರಾಜಕೀಯ ಕಸರತ್ತು ಶುರುವಾಗಿದೆ.

ಕಳೆದ ಮೇ ತಿಂಗಳಲ್ಲಿಯೇ ಬುಡಾ ಅಧ್ಯಕ್ಷರ ಎರಡು ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡಿದೆ. ಆದರೆ ಹೊಸ ಅಧ್ಯಕ್ಷರ ನೇಮಕವಾಗದ ಹಿನ್ನೆಲೆ ಹಿಂದಿನ ಅಧ್ಯಕ್ಷರನ್ನೇ ಮುಂದುವರಿಸಲಾಗಿದೆ. ಇದೀಗ ಹೊಸ ಅಧ್ಯಕ್ಷರ ನೇಮಕದ ನಿರೀಕ್ಷೆ ಹೆಚ್ಚಾಗಿದ್ದು, ಕಾಂಗ್ರೆಸ್ಸಿನ ಹಲವು ಮುಖಂಡರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ವಿಶೇಷವೆಂದರೆ ಬುಡಾ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಬಹುತೇಕರು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರೇ ಆಗಿದ್ದಾರೆ. ಹೀಗಾಗಿ ಅಧ್ಯಕ್ಷ ಗಾದಿಯ ಪೈಪೋಟಿ ಕಾಂಗ್ರೆಸ್ಸಿನ ಎರಡು ಬಣಗಳ ನಡುವಿನ ಸಂಘರ್ಷಕ್ಕಿಂತಲೂ ನಾಗೇಂದ್ರ ಬೆಂಬಲಿಗರ ನಡುವಿನ ಆಂತರಿಕ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ಏಳೆಂಟು ಮಂದಿ ಆಕಾಂಕ್ಷಿಗಳು: ಬುಡಾ ಅಧ್ಯಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳ ಸಾಲಿನಲ್ಲಿ ಶಾಸಕ ನಾಗೇಂದ್ರ ಆಪ್ತರಾದ ಸಿದ್ದಮ್ಮನಹಳ್ಳಿ ತಿಮ್ಮನಗೌಡ, ಬೆಣಕಲ್ ಬಸವರಾಜಗೌಡ, ಗೋವರ್ಧನ ರೆಡ್ಡಿ, ಗುಂಡ್ಲು ರವಿಕುಮಾರ್ ಹಾಗೂ ರಾಕೇಶ್ ಕುಮಾರ್ (ರಾಕಿ) ಹೆಸರುಗಳು ಕೇಳಿಬರುತ್ತಿವೆ.

ಇವರಲ್ಲದೆ ಇನ್ನೂ ಕೆಲ ಕಾಂಗ್ರೆಸ್ ಮುಖಂಡರು ಅಧ್ಯಕ್ಷ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದು, ಒಟ್ಟಾರೆ ಏಳೆಂಟು ಮಂದಿ ಆಕಾಂಕ್ಷಿಗಳಿದ್ದಾರೆ ಎನ್ನಲಾಗಿದೆ. ಆಕಾಂಕ್ಷಿಗಳೆಲ್ಲರೂ ತಮ್ಮದೇ ಆದ ರಾಜಕೀಯ ಸಂಪರ್ಕ ಹಾಗೂ ಪಕ್ಷದಲ್ಲಿನ ಸೇವೆ ಮುಂದಿಟ್ಟುಕೊಂಡು ಅಧ್ಯಕ್ಷ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದ್ದಾರೆ.


ಕೆಲವರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವುದನ್ನು ಪ್ರಮುಖ ಅರ್ಹತೆಯಾಗಿ ಪ್ರತಿಪಾದಿಸುತ್ತಿದ್ದರೆ ಮತ್ತೆ ಕೆಲವರು ಶಾಸಕರೊಂದಿಗಿನ ದೀರ್ಘಕಾಲದ ಒಡನಾಟ ಹಾಗೂ ನಿಷ್ಠೆ ಮುಂದಿಟ್ಟುಕೊಂಡು ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಬುಡಾ ಅಧ್ಯಕ್ಷರ ಆಯ್ಕೆಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ನಿರ್ಧಾರವೇ ಅಂತಿಮ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಎಷ್ಟೇ ಮಂದಿ ಇದ್ದರೂ ಶಾಸಕ ನಾಗೇಂದ್ರ ಯಾರ ಹೆಸರನ್ನು ಶಿಫಾರಸು ಮಾಡುತ್ತಾರೋ ಅವರಿಗೇ ಅಧ್ಯಕ್ಷ ಗಾದಿ ಒಲಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿಯೇ ಆಕಾಂಕ್ಷಿಗಳ ದೃಷ್ಟಿ ಪಕ್ಷದ ವರಿಷ್ಠರಿಗಿಂತಲೂ ಹೆಚ್ಚಾಗಿ ಶಾಸಕರ ನಿರ್ಧಾರದತ್ತ ನೆಟ್ಟಿದೆ.

ಆದರೆ ತಮ್ಮ ಬೆಂಬಲಿಗರಲ್ಲಿಯೇ ಏಳೆಂಟು ಮಂದಿ ಆಕಾಂಕ್ಷಿಗಳಿರುವುದರಿಂದ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಶಾಸಕರ ಪಾಲಿಗೂ ರಾಜಕೀಯವಾಗಿ ಸೂಕ್ಷ್ಮ ವಿಚಾರವಾಗಿದೆ. ಒಬ್ಬರಿಗೆ ಅವಕಾಶ ನೀಡಿದರೆ ಉಳಿದವರಲ್ಲಿ ಅಸಮಾಧಾನ ಮೂಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹೀಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭ್ಯರ್ಥಿ ಸೂಚಿಸುವ ಸವಾಲು ಶಾಸಕರ ಮುಂದಿದೆ.

ಬುಡಾ ಅಧ್ಯಕ್ಷ ಮಹತ್ವದ ಹುದ್ದೆ: ಬಳ್ಳಾರಿ ನಗರದ ಅಭಿವೃದ್ಧಿ ಯೋಜನೆಗಳು, ಬಡಾವಣೆಗಳ ಅಭಿವೃದ್ಧಿ, ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ಪ್ರಮುಖ ಜವಾಬ್ದಾರಿ ಹೊಂದಿರುವ ಬುಡಾ ಅಧ್ಯಕ್ಷ ಸ್ಥಾನಕ್ಕೆ ರಾಜಕೀಯವಾಗಿಯೂ ಮಹತ್ವವಿದೆ. ನಗರಾಭಿವೃದ್ಧಿಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಭಾಗಿಯಾಗುವ ಅವಕಾಶದ ಜತೆಗೆ ಸಾರ್ವಜನಿಕ ಸಂಪರ್ಕ ವಿಸ್ತರಿಸಿಕೊಳ್ಳಲು ಈ ಹುದ್ದೆ ಸಹಕಾರಿಯಾಗಲಿದೆ. ಹೀಗಾಗಿಯೇ ಕಾಂಗ್ರೆಸ್ ಮುಖಂಡರಲ್ಲಿ ಬುಡಾ ಅಧ್ಯಕ್ಷ ಸ್ಥಾನ ಪಡೆಯಲು ಹೆಚ್ಚಿನ ಆಸಕ್ತಿ ಕಂಡು ಬರುತ್ತಿದೆ.

ಅಧ್ಯಕ್ಷ ಸ್ಥಾನ ಕೇವಲ ಅಧಿಕಾರದ ಹುದ್ದೆಯಾಗಿ ಉಳಿದಿಲ್ಲ. ಮುಂದಿನ ರಾಜಕೀಯ ಬೆಳವಣಿಗೆಗಳಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಬಯಸುವ ಮುಖಂಡರ ಪಾಲಿಗೆ ಇದೊಂದು ಮಹತ್ವದ ಅವಕಾಶವಾಗಿಯೂ ಕಾಣಿಸಿಕೊಂಡಿದೆ. ಬುಡಾ ಅಧ್ಯಕ್ಷರ ಅಧಿಕಾರಾವಧಿ ಪೂರ್ಣಗೊಂಡು ಐದು ತಿಂಗಳು ಕಳೆದಿದ್ದರೂ ಹೊಸ ಅಧ್ಯಕ್ಷರ ಆಯ್ಕೆ ಅಂತಿಮವಾಗದಿರುವುದು ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹಾಗೂ ಆತಂಕ ಎರಡನ್ನೂ ಹೆಚ್ಚಿಸಿದೆ.

ಒಂದೆಡೆ ಅಧ್ಯಕ್ಷ ಸ್ಥಾನಕ್ಕಾಗಿ ಆಕಾಂಕ್ಷಿಗಳ ಪೈಪೋಟಿ ತೀವ್ರಗೊಂಡಿದ್ದರೆ ಮತ್ತೊಂದೆಡೆ ಶಾಸಕ ನಾಗೇಂದ್ರ ಮುಂದಿನ ನಡೆ ಏನಿರಬಹುದು ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.