ಸಾಣಾಪುರ ಗ್ರಾಮದ ನ್ಯಾಯವಾದಿ ಬೆಟ್ಟಪ್ಪ ಹನುಮಂತಪ್ಪ ಅವರು ಪಿಡಿಒ ವತ್ಸಲಾ ವಿರುದ್ಧ ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ಸಲ್ಲಿಸಿದ್ದರು.

ಗಂಗಾವತಿ: ತಾಲೂಕಿನ ಸಾಣಾಪುರ ಗ್ರಾಮ ಪಂಚಾಯಿತಿ ಪಿಡಿಒ ವತ್ಸಲಾ ಅವರ ವಿರುದ್ಧ ಸರ್ಕಾರಿ ಅನುದಾನ ದುರುಪಯೋಗ ಹಾಗೂ ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ವಾಸ್ತವಾಂಶ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವ ಕುರಿತಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ನಾಲ್ವರು ಅಧಿಕಾರಿಗಳ ತನಿಖಾ ತಂಡವನ್ನು ರಚಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಸಿದ್ದಾರೆ.

ಸಾಣಾಪುರ ಗ್ರಾಮ ಪಂಚಾಯಿತಿ ಅವ್ಯವಹಾರ ಕುರಿತು ಸಾರ್ವಜನಿಕರು ನೀಡಿದ ದೂರಿನ ಆಧಾರದ ಮೇಲೆ ಕನ್ನಡಪ್ರಭ ಪತ್ರಿಕೆಯಲ್ಲಿ ಅ.1ರಂದು ‘ಅನುದಾನ ದುರುಪಯೋಗ: ಪಿಡಿಒ ಮೇಲೆ ಕ್ರಮಕ್ಕೆ ಆಗ್ರಹ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ. ವೈಷ್ಣವಿ ಅವರು ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಳಿಗೆ ಪತ್ರ ಬರೆದು ಪ್ರಕರಣದ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಇದೀಗ ಕೊಪ್ಪಳ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಕೊಪ್ಪಳ ತಾಪಂ ಸಹಾಯಕ ನಿರ್ದೇಶಕ ಮಹೇಶ, ಕೊಪ್ಪಳ ಸಾಮಾಜಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಎಂ., ಕೊಪ್ಪಳ ಜಿ.ಪಂ. ಲೆಕ್ಕಾಧಿಕಾರಿ ರಫೀಕ್‌ ಮತ್ತು ಜಿಲ್ಲಾ ಪಂಚಾಯತಿಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಜೇಶ್‌ ಅವರನ್ನು ಒಳಗೊಂಡ ತಂಡವನ್ನು ರಚಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಆದೇಶಿದ್ದಾರೆ.

ಸಾಣಾಪುರ ಗ್ರಾಮದ ನ್ಯಾಯವಾದಿ ಬೆಟ್ಟಪ್ಪ ಹನುಮಂತಪ್ಪ ಅವರು ಪಿಡಿಒ ವತ್ಸಲಾ ವಿರುದ್ಧ ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ಸಲ್ಲಿಸಿದ್ದರು. ಸರ್ಕಾರಿ ಅನುದಾನದ ದುರುಪಯೋಗ ಹಾಗೂ ವಿವಿಧ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದರು.

ಗ್ರಾಮದ ಒಂದನೇ ವಾರ್ಡ್‌ನಲ್ಲಿ ರಸ್ತೆ ಒತ್ತುವರಿ ಮಾಡಿಕೊಂಡು ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಪಿಡಿಒ ಅವರು ಕುಮ್ಮಕ್ಕು ನೀಡಿದ್ದಾರೆ. ಕುಡಿಯುವ ನೀರಿನ ಪೈಪ್‌ಲೈನ್ ಸ್ವಚ್ಛತೆ ಕೈಗೊಳ್ಳದಿರುವುದು ಹಾಗೂ ಗ್ರಾಮದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸದಿರುವ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿದ್ದರು.

ಇದಲ್ಲದೆ, ಪಿಡಿಒ ವತ್ಸಲಾ ಅವರು ಸಾಣಾಪುರ ಗ್ರಾಮದಲ್ಲಿ ವಾಸವಾಗಿರುವುದಾಗಿ ಸುಳ್ಳು ಮಾಹಿತಿ ನೀಡಿ ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪವನ್ನೂ ಮಾಡಲಾಗಿತ್ತು. ಈ ಎಲ್ಲ ಆರೋಪಗಳ ಕುರಿತು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸರ್ಕಾರ ಸೂಚಿಸಿದೆ.