ಸಾರಾಂಶ
ವಸಂತಕುಮಾರ್ ಕತಗಾಲ
ಕಾರವಾರ: ಗೇರುಸೊಪ್ಪದಲ್ಲಿ ನಡೆದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸಾರ್ವಜನಿಕ ಅಹವಾಲು ಸಭೆ 5 ಸಾವಿರಕ್ಕೂ ಹೆಚ್ಚು ಜನರ ತೀವ್ರ ಆಕ್ರೋಶದಿಂದಾಗಿ ಯೋಜನೆ ವಿರುದ್ಧ ಜನಾಂದೋಲನ ಸಭೆಯಂತೆ ಕಂಡುಬಂತು.ಗೇರುಸೊಪ್ಪಾದ ಗುತ್ತಿಕನ್ನಿಕಾ ದೇವಾಲಯದ ಸಭಾಂಗಣ ಭರ್ತಿಯಾಗಿ ಆವರಣವೂ ಯೋಜನಾ ವಿರೋಧಿಗಳಿಂದ ತುಂಬಿ ತುಳುಕಿತು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಿರಿಯ ಪರಿಸರ ಅಧಿಕಾರಿ ಸಂತೋಷ್ ಉಪಸ್ಥಿತಿಯಲ್ಲಿ ಕೆಪಿಸಿಯ ಎಂಜಿನಿಯರ್ ವಿಜಯ್ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.ಜನತೆಯ ಆಕ್ರೋಶ: ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ, ಈ ಯೋಜನೆಯ ಹಿಂದೆ ಕುರುಡು ಕಾಂಚಾಣ ಕೆಲಸ ಮಾಡುತ್ತಿದೆ. ಸ್ಥಳೀಯರ ಭಾವನೆಗಳನ್ನು ಹತ್ತಿಕ್ಕುವ ಕೆಲಸವನ್ನು ಕೆಪಿಸಿ ಮಾಡುತ್ತಿದೆ. 120 ಮಿಲಿಯನ್ ವರ್ಷಗಳ ಇತಿಹಾಸ ಇರುವ ಕಾಡಿನಲ್ಲಿ ಯಾವ ಪುರುಷಾರ್ಥಕ್ಕಾಗಿ ಯೋಜನೆ ಮಾಡುತ್ತೀರಿ ಎಂದು ಪ್ರಶ್ನಿಸಿ, ನಮ್ಮ ಎದೆಯ ಮೇಲೆ ಜೆಸಿಬಿ ಹತ್ತಿಸಿಕೊಂಡು ಹೋಗಿ ಹೊರತೂ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದರು.
ಸಾಗರದ ಅಖಿಲೇಶ ಚಿಪ್ಪಳಿ, ಯೋಜನೆಯಿಂದ 8 ಕುಟುಂಬಕ್ಕೆ ತೊಂದರೆ ಆಗಲಿದೆ ಎಂದು ಕೆಪಿಸಿ ಹೇಳುತ್ತಿದೆ. ಅದರೆ ವಾಸ್ತವವಾಗಿ 350 ಕುಟುಂಬಗಳಿಗೆ ತೊಂದರೆಯಾಗಲಿದೆ. ಆ ಕುಟುಂಬಗಳು ಎಲ್ಲಿಗೆ ಹೋಗಬೇಕು? ಸತ್ಯಕ್ಕೆ ಹರಿಶ್ಚಂದ್ರ ಆದರೆ ಸುಳ್ಳಿಗೆ ಕೆಪಿಸಿ ಉದಾಹರಣೆ ಎಂದರು.ಕುಮಟಾ ಶಾಸಕ ದಿನಕರ ಶೆಟ್ಟಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಾರ್ವಜನಿಕ ಸಭೆಯಲ್ಲಿ ಕಂಡುಬಂದ ವಿರೋಧದ ವಿಡಿಯೋವನ್ನು ಮುಖ್ಯಮಂತ್ರಿ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಕಳುಹಿಸಿಕೊಡಬೇಕು. ಇಲ್ಲಿನ ಜನತೆ ಯೋಜನೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೆಪಿಸಿ ಅಧಿಕಾರಿಗಳು ಹಾಗೂ ಪರಿಸರ ಅಧಿಕಾರಿಗಳು ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡು, ಯೋಜನೆ ನಿಲ್ಲುವ ತನಕ ನಮ್ಮ ಹೋರಾಟ ನಿರಂತರವಾಗಿ ಇರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೆಂಕಟ್ರಮಣ ಹೆಗೆಡೆ ಕವಲಕ್ಕಿ, ಯಾವುದೆ ಕಾರಣಕ್ಕೆ ಯೋಜನೆಯನ್ನು ಒಪ್ಪಲು ಸಾಧ್ಯವಿಲ್ಲ. ಶರಾವತಿಯಲ್ಲಿ ಮತ್ತೆ ಯೋಜನೆ ಬೇಡ. ಇಲ್ಲಿನ ಜನಜೀವನ, ಜೀವ ವೈವಿಧ್ಯತೆಗೆ ಮಾರಕವಾದ ಈ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿದರು.ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಈ ಯೋಜನೆ ವಿರುದ್ಧ ಕೇವಲ ಶರಾವತಿ ನದಿ ತೀರದ ಜನರಷ್ಟೇ ಅಲ್ಲ, ರಾಜ್ಯದ ಲಕ್ಷಾಂತರ ರೈತರು ನಿಮ್ಮೊಂದಿಗಿದ್ದಾರೆ. ಯೋಜನೆ ಯಾವುದೆ ಕಾರಣಕ್ಕೂ ಜಾರಿಯಾಗಬಾರದು. ಸರ್ಕಾರ ಕೂಡಲೇ ಯೋಜನೆ ಕೈಬಿಡಬೇಕು. ಇಲ್ಲದಿದ್ದಲ್ಲಿ ಯಾವುದೆ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ, ಅರಣ್ಯ ಪ್ರದೇಶದಲ್ಲಿ ಒಂದು ಬೇಲಿ ಗುಟ್ಟ ಕಡಿದರೂ ಇಲಾಖೆಯವರು ಕ್ರಮ ಕೈಗೊಳ್ಳುತ್ತಾರೆ. ಆದರೆ ಈ ಯೋಜನೆಗೆ 16 ಸಾವಿರ ಮರ ಕಡಿಯಲು ಮುಂದಾದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ನಾವು ಯೋಜನೆ ನಿಲ್ಲಿಸಲು ಪ್ರಾಣತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಗುಡುಗಿದರು.ಯೋಜನಾ ಪ್ರದೇಶದ ರೈತ ಮಂಜುನಾಥ ಹೆಗಡೆ, ನ್ಯಾಯವಾದಿ ಎ. ರವೀಂದ್ರ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮುಂತಾದವರು ಈ ಯೋಜನೆಯ ಅವಶ್ಯಕತೆಯೇ ಇರುವುದಿಲ್ಲ ಎಂದು ಪ್ರತಿಪಾದಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಶ್ರೀಜಾ ಚಕ್ರವತಿ, ಉತ್ತರ ಕನ್ನಡದ ಪರಿಸರದ ಮೇಲೆ ಇಂತಹ ಯೋಜನೆಗಳಿಂದ ಆಗುತ್ತಿರುವ ದುಷ್ಪರಿಣಾಮ ಆತಂಕಕಾರಿಯಾಗಿದೆ ಎಂದರು.ಪರಿಸರ ಬರಹಗಾರ ಶಿವಾನಂದ ಕಳವೆ, ಶರಾವತಿ ತೀರದಲ್ಲಿ 1979ರಲ್ಲಿ ಕೊನೆಯ ಎರಡು ಆನೆ ಮೃತಪಟ್ಟಿತ್ತು. ಈಗ ಸಿಂಗಳೀಕಗಳ ಸಾವಿಗೆ ಈ ಯೋಜನೆ ಕಾರಣವಾಗಲಿದೆ. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಇಂತಹ ಯೋಜನೆ ಜಾರಿಯಾಗಬಾರದು ಎಂದರು.
6 ಸಾವಿರಕ್ಕೂ ಹೆಚ್ಚು ಅರ್ಜಿ: ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ 6 ಸಾವಿರಕ್ಕೂ ಹೆಚ್ಚು ಅರ್ಜಿಯನ್ನು ಸಭೆಯಲ್ಲಿ ಸಲ್ಲಿಸಲಾಗಿದೆ. ಯೋಜನೆಯ ವಿವರಗಳನ್ನು ಕನ್ನಡದಲ್ಲಿ ಮುಂಚಿತವಾಗಿಯೇ ಜನತೆಗೆ ನೀಡಿ ಸಭೆ ನಡೆಸಬೇಕಿತ್ತು. ಈಗ ಏಕಾಏಕಿ ವಿವರ ನೀಡಿದರೆ ಹೇಗೆ ಎಂದು ಕೆಲವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ವರದಿ ಪ್ರದರ್ಶನ: ಹಸಿರು ಪೀಠದ ವರದಿಯಂತೆ ಶರಾವತಿ ಅಭಯಾರಣ್ಯ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಏನೂ ಮಾಡುವಂತಿಲ್ಲ ಎಂದು ವರದಿಯನ್ನು ವಿಜ್ಞಾನಿ ಡಾ. ಎಂ.ಡಿ. ಸುಭಾಷಚಂದ್ರನ್ ಪ್ರದರ್ಶಿಸಿದರು. ಮಾಜಿ ಸಚಿವ ಶಿವಾನಂದ ನಾಯ್ಕ, ಬಾಲಚಂದ್ರ ಹೆಗಡೆ ಸಾಯೀಮನೆ ಮತ್ತಿತರು ಇದ್ದರು.