ದಾಳಿ ಮಾಡಿದಾಗಲೆ ಲೋಕಾಯುಕ್ತ ಡಿವೈಎಸ್ಪಿ ಕೈ ಸೇರಿದ ವರ್ಗಾವಣೆ ಆದೇಶ

| Published : Sep 19 2025, 01:01 AM IST

ದಾಳಿ ಮಾಡಿದಾಗಲೆ ಲೋಕಾಯುಕ್ತ ಡಿವೈಎಸ್ಪಿ ಕೈ ಸೇರಿದ ವರ್ಗಾವಣೆ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಕೊಪ್ಪಳ ನಗರಸಭೆಯಲ್ಲಿ 33 ಕಾಮಗಾರಿ ಮಾಡದೆಯೇ ₹ 10 ಕೋಟಿ ಎತ್ತಿ ಹಾಕಿರುವ ಕುರಿತು ಲಿಖಿತ ದೂರು ಆಧರಿಸಿ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ತಮ್ಮ ತಂಡದೊಂದಿಗೆ ನಗರಸಭೆ ಮತ್ತು ನಗರಸಭೆ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದರು.

ಕೊಪ್ಪಳ:

ಕೊಪ್ಪಳ ನಗರಸಭೆಯಲ್ಲಿ ಕೋಟಿ ಕೋಟಿ ಲೂಟಿಯಾಗಿದ್ದನ್ನು ತನಿಖೆ ನಡೆಸುತ್ತಿದ್ದ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ಅವರು ದಾಳಿ ನಡೆಸಿರುವಾಗಲೇ ವರ್ಗಾವಣೆ ಆದೇಶ ಅವರ ಕೈ ಸೇರಿದೆ. ಈ ಮೂಲಕ ಅಕ್ರಮದ ಬೃಹತ್ ಭೇಟಿಯಾಡಲು ಮುಂದಾಗಿದ್ದ ಅವರನ್ನು ಎತ್ತಂಗಡಿ ಮಾಡುವಲ್ಲಿ ಪ್ರಭಾವಿಗಳ ಕೈಮೇಲಾಗಿದ್ದು, ಭ್ರಷ್ಟರು ನಿಟ್ಟುಸಿರು ಬಿಟ್ಟಿದ್ದಾರೆ.

ವರ್ಗಾವಣೆ ಆದೇಶ ಜಾರಿಗೊಳಿಸುವ ಜತೆಗೆ ತಕ್ಷಣ ಬಿಡುಗಡೆಗೂ ಒತ್ತಡ ಹಾಕಲಾಗಿದೆ. ಪರಿಣಾಮ ಬುಧವಾರ ರಾತ್ರಿಯೇ ಡಿವೈಎಸ್ಪಿ ವಸಂತಕುಮಾರ ಅವರು ಕರ್ತವ್ಯದಿಂದ ಬಿಡುಗಡೆ ಹೊಂದಿದ್ದಾರೆ. ಅವರಿಗೆ ಬೇರೆಡೆ ಸ್ಥಳವನ್ನು ತೋರಿಸಿಲ್ಲ ಎನ್ನುವುದು ಗಮನಾರ್ಹ.

ಆಗಿದ್ದೇನು?

ಕೊಪ್ಪಳ ನಗರಸಭೆಯಲ್ಲಿ 33 ಕಾಮಗಾರಿ ಮಾಡದೆಯೇ ₹ 10 ಕೋಟಿ ಎತ್ತಿ ಹಾಕಿರುವ ಕುರಿತು ಲಿಖಿತ ದೂರು ಆಧರಿಸಿ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ತಮ್ಮ ತಂಡದೊಂದಿಗೆ ನಗರಸಭೆ ಮತ್ತು ನಗರಸಭೆ ಜೆಇ ಸೋಮಲಿಂಗಪ್ಪ, ಕಂದಾಯ ಅಧಿಕಾರಿ (ಕೊಪ್ಪಳ ನಗರಸಭೆ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು) ಉಜ್ವಲ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸಹೋದರ ಹಾಗೂ ಗುತ್ತಿಗೆದಾರ ಶಕೀಲ್ ಪಟೇಲ್, ಗುತ್ತಿಗೆದಾರ ಪ್ರವೀಣ ಕಂದಾರಿ ಅವರ ನಿವಾಸದ ಮೇಲೆ ಸೆ. 16ರಂದು ದಾಳಿ ನಡೆಸಿದ್ದರು.

ಎರಡನೇ ದಿನವೂ ದಾಳಿ ನಡೆಸಿದಾಗ ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. ಜತೆಗೆ ದಾಳಿಯ ವೇಳೆ ದೊಡ್ಡ ಅಕ್ರಮವೂ ಬಯಲಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ. ಹೀಗಾಗಿ, ಎರಡು ದಿನವಾದರೂ ತಪಾಸಣೆ ಮುಗಿದಿರಲಿಲ್ಲ. ಇದು ಪ್ರಭಾವಿಗಳ ಬುಡಕ್ಕೆ ಬರುವ ಸಾಧ್ಯತೆ ದಟ್ಟವಾಗಿತ್ತು. ತನಿಖೆಗೆ ಒಳಪಟ್ಟವರು ಮಾತ್ರವಲ್ಲದೆ ಪ್ರಭಾವ ಬೀರಿದವರು ಸಹ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇರುವ ಮಾಹಿತಿ ಅರಿತ ಪ್ರಭಾವಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಡಿವೈಎಸ್ಪಿ ವಸಂತಕುಮಾರ ಅವರನ್ನು ಎತ್ತಂಗಡಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಈಗ ತನಿಖೆಯು ಹಳ್ಳಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರದ್ಧತಿಗೆ ಆಗ್ರಹ:

ತನಿಖೆಯೊಂದು ನಡೆದಿರುವಾಗಲೇ ಡಿವೈಎಸ್ಪಿ ವಸಂತಕುಮಾರ ಅವರನ್ನು ವರ್ಗಾವಣೆ ಮಾಡಿರುವದು ಸರಿಯಲ್ಲ. ತಕ್ಷಣ ಅವರ ವರ್ಗಾವಣೆಯನ್ನು ರದ್ಧು ಮಾಡಿ, ತನಿಖೆಗೆ ಅವಕಾಶ ನೀಡುವಂತೆ ಸಾರ್ವಜನಿಕವಾಗಿ ಆಗ್ರಹ ಕೇಳಿ ಬಂದಿದೆ.ಬೋಗಸ್ ಬಿಲ್:

ಕೊಪ್ಪಳ ನಗರಸಭೆಯಲ್ಲಿ ಬೋಗಸ್ ಬಿಲ್‌ಗಳದ್ದೆ ಹಾವಳಿ. ಸರ್ಕಾರಕ್ಕೂ ಸಲ್ಲಬೇಕಾದ ತೆರಿಗೆ ಸೇರಿದಂತೆ ಅನೇಕ ಅವ್ಯವಹಾರ ಆಗಿರುವ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ. ಕಳೆದ 10 ವರ್ಷಗಳಲ್ಲಿ ನಗರಸಭೆಯಲ್ಲಿ ಭಾರಿ ಗೋಲ್‌ಮಾಲ್ ನಡೆಯುತ್ತಿದ್ದು, ಸಮಗ್ರ ತನಿಖೆಯಾಗಬೇಕು ಎಂದು ನಗರಸಭೆ ಸದಸ್ಯರೇ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ.ವರ್ಗಾವಣೆಗೆ ಖಂಡನೆ:ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಬಯಲಿಗೆ ಬಂದಿದ್ದು, ಪರಿಶೀಲನೆ ಮಾಡುತ್ತಿದ್ದ ಅಧಿಕಾರಿಯನ್ನೇ ವರ್ಗಾವಣೆ ಮಾಡಿಸಿರುವ ಕೊಪ್ಪಳ ಶಾಸಕ, ಸಂಸದರ ನಡೆ ಖಂಡನಿಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆ ಅಭಿವೃದ್ಧಿಯಿಂದ ವಂಚಿತವಾಗುತ್ತಿದೆ. ಆಡಳಿತದಲ್ಲಿರುವ ಪಕ್ಷದ ಜನಪ್ರತಿನಿಧಿಗಳು, ಅವರ ಬೆಂಬಲಿಗರು ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ ನಗರಸಭೆ ಹಾಗೂ ಅಲ್ಲಿಯ ಅಧಿಕಾರಿ ಮತ್ತು ಗುತ್ತಿಗೆದಾರರ ಮೇಲೆ ಮೂರು ದಿನಗಳಿಂದ ನಡೆದ ನಿರಂತರ ದಾಳಿ ಹಾಗೂ ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡ ಭ್ರಷ್ಟಾಚಾರದ ಅತ್ಯಮೂಲ್ಯ ದಾಖಲೆಗಳೇ ಸಾಕ್ಷಿಯಾಗಿದೆ. 2023-24ನೇ ಸಾಲಿನಲ್ಲಿ 336 ಕಾಮಗಾರಿಗಳಲ್ಲಿ ಕಾಮಗಾರಿ ಮಾಡದೇ ಬಿಲ್ ಎತ್ತಿರುವುದು ಸೇರಿ ವಿವಿಧ ಪ್ರಕರಣಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಕುರಿತು ಲೋಕಾಯುಕ್ತ ಅಧಿಕಾರಿಗಳು ದೂರು ಆಧರಿಸಿ, ದಾಳಿ ಮಾಡಿ, ದಾಖಲೆ ಸಂಗ್ರಹಿಸುತ್ತಲೇ ಭ್ರಷ್ಟರಿಗೆ ನಡುಕ ಹುಟ್ಟಿದೆ. ಹೀಗಾಗಿ ಇನ್ನೂ ದಾಖಲಾತಿ ಪರಿಶೀಲನೆ ನಡೆಯುತ್ತಿರುವಾಗಲೇ ಲೋಕಾಯುಕ್ತ ದಾಳಿ ನಡೆಸಿದ್ದ ಡಿಎಸ್ಪಿ ವಸಂತಕುಮಾರ ಅವರನ್ನು ಎತ್ತಂಗಡಿ ಮಾಡಿರುವ ಖಂಡನೀಯ ಎಂದು ಹೇಳಿದ್ದಾರೆ.ಕೊಪ್ಪಳ ನಗರಸಭೆ ಜೆಇ ಸೋಮಲಿಂಗಪ್ಪ, ಕಂದಾಯ ಅಧಿಕಾರಿ ಉಜ್ವಲ್, ಗುತ್ತಿಗೆದಾರರಾದ ಶಕೀಲ್, ಪ್ರವೀಣ್ ಕಂದಾರಿ ಮನೆ ಮೇಲೆ ಹಾಗೂ ನಗರಸಭೆ ಮೇಲೆ ದಾಳಿ ನಡೆಸಿ, ಅಧಿಕಾರಿಗಳು ಕ್ರಮಕೈಗೊಳ್ಳುವವರಿದ್ದರು. ಆದರೆ, ದಾಳಿ ಮಾಡಿದ ಅಧಿಕಾರಿಯನ್ನೇ ದಿಢೀರ್ ಎತ್ತಂಗಡಿ ಮಾಡಿಸುವ ಮೂಲಕ ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಸಂಸದ ರಾಜಶೇಖರ ಹಿಟ್ನಾಳ್ ತಮ್ಮ ಬೆಂಬಲಿಗರ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.ಭ್ರಷ್ಟತೆ ಉತ್ತುಂಗಕ್ಕೆ:ಕೊಪ್ಪಳ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟತೆ ಉತ್ತುಂಗಕ್ಕೆ ತಲುಪಿದೆ ಎಂಬುದನ್ನು ಲೋಕಾಯುಕ್ತ ಡಿವೈಎಸ್‌ಪಿ ವಸಂತಕುಮಾರ ಅವರ ದಿಢೀರ್ ವರ್ಗಾವಣೆ ಸಾಬೀತುಪಡಿಸಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ ಆರೋಪಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಭ್ರಷ್ಟ ವ್ಯವಸ್ಥೆಯ ಪೋಷಕರಿಗೆ, ಅಕ್ರಮ ಮರಳು ಮಾಫಿಯಾ ನಿಯಂತ್ರಕರಿಗೆ, ಸರ್ಕಾರಿ ಕಾಮಗಾರಿಗಳ ಲೂಟಿಕೋರರಿಗೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಸಿಂಹ ಸ್ವಪ್ನವಾಗಿದ್ದಾರೆ. ಆದ್ದರಿಂದಲೇ ದಕ್ಷ ಅಧಿಕಾರಿಗಳನ್ನು ಕೊಪ್ಪಳದಿಂದ ವರ್ಗಾಯಿಸಲಾಗುತ್ತಿದೆ. ದಕ್ಷತೆ, ಅಭಿವೃದ್ಧಿ, ಪ್ರಾಮಾಣಿಕತೆ ಹಾಗೂ ಮೌಲ್ಯಗಳ ಬಗ್ಗೆ ಶಾಸಕರಿಗೆ ಕಿಂಚತ್ತಾದರೂ ಗೌರವ ಇದ್ದರೆ ಈ ಕೂಡಲೇ ವರ್ಗಾವಣೆ ಆದೇಶ ರದ್ದುಪಡಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.2023-24ನೇ ಸಾಲಿನಲ್ಲಿ 336 ಕಾಮಗಾರಿಗಳಲ್ಲಿ ₹10 ಕೋಟಿ ದುರ್ಬಳಕೆಯಾಗಿದೆ ಎಂಬ ಆರೋಪಗಳಿವೆ. ಅದರ ಕುರಿತು ದಾಖಲೆಗಳ ಪರಿಶೀಲನೆ ನಡೆಯುತ್ತಿರುವ ಸಂದರ್ಭದಲ್ಲಿಯೇ ದಕ್ಷ ಅಧಿಕಾರಿಯ ವರ್ಗಾವಣೆ ಮೂಲಕ ಶಾಸಕರು ಏನು ಸಂದೇಶ ಕೊಡಲು ಹೊರಟಿದ್ದಾರೆ? ಪರಿಸ್ಥಿತಿ ಗಮನಿಸಿದರೆ ಭ್ರಷ್ಟತೆಯ ಸಿಂಡಿಕೇಟ್‌ಗೆ ಶಾಸಕರ ಆಶೀರ್ವಾದ ಇದ್ದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.