ಉದ್ದೇಶಪೂರ್ವಕ ಹಿಜಾಬ್‌ ವಿಷಯ ಮುನ್ನೆಲೆಗೆ: ಜೋಶಿ ಆರೋಪ

| Published : Dec 26 2023, 01:31 AM IST / Updated: Dec 26 2023, 01:32 AM IST

ಉದ್ದೇಶಪೂರ್ವಕ ಹಿಜಾಬ್‌ ವಿಷಯ ಮುನ್ನೆಲೆಗೆ: ಜೋಶಿ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಎಲ್ಲೂ ಹಿಜಾಬ್‌ ನಿಷೇಧ ಆಗಿಲ್ಲ. ಕೇವಲ ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಕಾಪಾಡುವ ನಿಟ್ಟಿನಲ್ಲಿ ಹಿಜಾಬ್‌ ಧರಿಸದಂತೆ ಆದೇಶಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಸಮಾಜದಲ್ಲಿ ವಿವಾದ ಹುಟ್ಟು ಹಾಕುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎತ್ತಿದ ಕೈ. ಉದ್ದೇಶ ಪೂರ್ವಕವಾಗಿಯೇ ಹಿಜಾಬ್‌ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಇದು ಮುಖ್ಯಮಂತ್ರಿಗೆ ಶೋಭೆ ತರುವಂತದ್ದಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಎಲ್ಲೂ ಹಿಜಾಬ್‌ ನಿಷೇಧ ಆಗಿಲ್ಲ. ಕೇವಲ ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಕಾಪಾಡುವ ನಿಟ್ಟಿನಲ್ಲಿ ಹಿಜಾಬ್‌ ಧರಿಸದಂತೆ ಆದೇಶಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಟೀಕಿಸಿದರು.

ಸಿದ್ಧಾಂತ (ಸ್ಟ್ಯಾಂಡ್‌)ಗಳ ಬಗ್ಗೆ ಕಾಂಗ್ರೆಸ್‌ಗೆ ಸ್ಪಷ್ಟ ನಿಲುವಿಲ್ಲ. ಅದರ ಮನಸ್ಥಿತಿ ಬಸ್‌ಸ್ಟ್ಯಾಂಡಿನಂತಾಗಿದೆ. ಸಮಯಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ಕುಟುಕಿದ ಸಚಿವ ಜೋಶಿ, ಈ ಹಿಂದೆ ರಾಹುಲ್‌ ಗಾಂಧಿ ಮಧ್ಯಪ್ರದೇಶದಲ್ಲಿ ಹಿಂದೂ ಎಂದು ಹೇಳಿಕೊಂಡು ಜನಿವಾರ ಪ್ರದರ್ಶಿಸಿದರು. ಹನುಮಾನ ಚಾಲೀಸ್‌ ಮಾಡಲು ಮುಂದಾದರು. ದೇಶದ ಬಜೆಟ್‌ನಲ್ಲಿ ಮುಸಲ್ಮಾನರಿಗೆ ಮೊದಲ ಹಕ್ಕಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಹೇಳಿದ್ದರು. ಈಗ ಸಿದ್ದರಾಮಯ್ಯ ಮುಸ್ಲಿಮರಿಗೆ ₹10 ಸಾವಿರ ಕೋಟಿ ಅನುದಾನ ಕೊಡುವುದಾಗಿ ಹೇಳುತ್ತಾರೆ. ಇದೆಲ್ಲವೂ ಓಲೈಕೆಗಾಗಿ ಮಾತ್ರ ಎಂದು ವಾಗ್ದಾಳಿ ನಡೆಸಿದರು.

ಕ್ಷಮೆ ಕೇಳಲಿ

ಬರ ವಿಚಾರದಲ್ಲಿ ರೈತರ ಬಗ್ಗೆ ಕೀಳಾಗಿ ಮಾತನಾಡಿರುವ ಜವಳಿ ಸಚಿವ ಶಿವನಾಂದ ಪಾಟೀಲ್‌ರದ್ದು ಅತ್ಯಂತ ಬೇಜಾವಾಬ್ದಾರಿಯ ಮಾತು. ದೊಡ್ಡ ಸ್ಥಾನದಲ್ಲಿ ಇದ್ದವರು ಹೀಗೆ ಮಾತಾಡಬಾರದು. ಮಳೆ ಬರಬೇಕು. ಬೆಳೆ ಸಮೃದ್ಧವಾಗಿ ಬೇಕು. ಆಗ ಅವರು ಯಾರ ಹತ್ತಿರ ಕೈಚಾಚುವುದಿಲ್ಲ. ಸಚಿವ ಶಿವಾನಂದ ಪಾಟೀಲ್‌ ತಮ್ಮ ಹೇಳಿಕೆ ವಾಪಸ್‌ ಪಡೆದು ಕ್ಷಮೆ ಕೇಳಬೇಕು ಎಂದು ಜೋಶಿ ಆಗ್ರಹಿಸಿದರು.