ಕವಿ ಹೃದಯದ ಜನನಾಯಕ ಅಟಲ್ ಬಿಹಾರಿ ವಾಜಪೇಯಿ

| Published : Dec 26 2023, 01:31 AM IST / Updated: Dec 26 2023, 01:32 AM IST

ಸಾರಾಂಶ

ವಾಜಪೇಯಿ ಅವರ 99ನೇ ಜನ್ಮ ದಿನಾಚರಣೆ ಕಾರ್ಯಕ್ರಮ, ಚತುಷ್ಫಥ ರಸ್ತೆ ಕಲ್ಪನೆ ಅವರದ್ದಾಗಿದ್ದು, ದೇಶದಾದ್ಯಂತ ವಿಸ್ತೃತ ಸ್ವರೂಪದಲ್ಲಿ ಹರಡಿವೆ. ಭಾರತೀಯ ರಾಜಕಾರಣದ ಅಜಾತ ಶತೃ. ಕವಿ ಹೃದಯದ ಜನನಾಯಕ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತೀಯ ರಾಜಕಾರಣದ ಅಜಾತ ಶತೃ. ಕವಿ ಹೃದಯದ ಜನನಾಯಕ ಎಂದು ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಣ್ಣಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ವಾಜಪೇಯಿ ಅವರ 99ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಜಪೇಯಿರವರು ತಮ್ಮ ಅಧಿಕಾರದ ಸಮಯದಲ್ಲಿ ಉತ್ತಮವಾದ ಆಡಳಿತ ನೀಡಿದ್ದಲ್ಲದೆ, ದೇಶಕ್ಕೆ ಉತ್ತಮವಾದ ರಸ್ತೆಗಳ ಸೃಷ್ಠಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚತುಷ್ಫಥ ರಸ್ತೆ ಕಲ್ಪನೆ ಅವರದ್ದಾಗಿದ್ದು, ದೇಶದಾದ್ಯಂತ ವಿಸ್ತೃತ ಸ್ವರೂಪದಲ್ಲಿ ಹರಡಿವೆ ಎಂದರು.

ಸರ್ವ ಶಿಕ್ಷಾ ಅಭಿಯಾನಯಾನದಡಿಯಲ್ಲಿ ಉತ್ತಮವಾದ ಶಾಲಾ ಕೊಠಡಿ ನಿರ್ಮಾಣ ಮಾಡುವುದರ ಮೂಲಕ ಶೈಕ್ಷಣಿಕ ವ್ಯವಸ್ಥೆಗೆ ಬೇಕಾದ ಮೂಲ ಸೌಕರ್ಯಗಳಿಗೆ ಅಡಿಪಾಯ ಒದಗಿಸಿದರು. ರಸ್ತೆಗಳ ನಿರ್ಮಾಣದಲ್ಲಿ ಅವರು ಮಾಡಿದ ಕ್ರಾಂತಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಆಡಳಿತದಲ್ಲಿಯೂ ಹಲವಾರು ಸುಧಾರಣೆಗಳ ತಂದ ವಾಜಪೇಯಿ ಉತ್ತಮ ಆಡಳಿತಗಾರ ಎಂದು ಹೆಸರು ಪಡೆದಿದ್ದರು. ಸಂಸತ್ ಸದಸ್ಯರಾಗಿ ಆಜಾತ ಶತೃವಾಗಿ ಕೆಲಸವನ್ನು ಮಾಡಿದರು. ದೇಶದಲ್ಲಿ ಬಿಜೆಪಿ ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಬೆಳೆಯಲು ವಾಜಪೇಯಿ ಕೊಡುಗೆ ಅಪಾರವೆಂದರು.

ವಾಜೀಪೇಯಿಯವರ ತತ್ವ ಸಿದ್ದಾಂತವನ್ನು ಇಂದು ನಾವುಗಳು ಅಳವಡಿಸಿಕೊಳ್ಳಬೇಕಿದೆ. ಬಿಜೆಪಿ ಎಂದು ಸಹಾ ಅಧಿಕಾರಕ್ಕಾಗಿ ಹಾತೊರೆದಿಲ್ಲ. ಜನ ಸೇವೆಯನ್ನು ತನ್ನ ಗುರಿಯನ್ನಾಗಿ ಮಾಡಿಕೊಂಡು ಮುನ್ನಡಿ ಇಟ್ಟಿದೆ. ವಾಜಪೇಯಿಯವರು ಯಾವುದೇ ಉಚಿತ ಗ್ಯಾರೆಂಟಿ ನೀಡುವ ಬದಲು ಪ್ರಜೆಗಳಿಗೆ ಉಚಿತ ಶಿಕ್ಷಣ ಮತ್ತು ಆರೋಗ್ಯ ನೀಡುವಂತೆ ತಿಳಿಸಿದ್ದರು. ಅಂತಹದ್ದೊಂದು ಪ್ರಯತ್ನ ಆಳುವ ಸರ್ಕಾರಗಳು ಮಾಡಲಿ ಎಂದು ಮಲ್ಲಿಕಾರ್ಜುನ ಮನವಿ ಮಾಡಿದರು.

ಬಿಜೆಪಿ ಮುಖಂಡ ಡಾ.ಸಿದ್ದಾರ್ಥ ಮಾತನಾಡಿ, ವಾಜಪೇಯಿಯವರು ದೇಶದ ಪ್ರಧಾನ ಮಂತ್ರಿಗಳಾದ ಮೇಲೆ ಉತ್ತಮ ರಸ್ತೆ ನೀಡುವುದರ ಮೂಲಕ ಸಾರಿಗೆ ಸಂಪರ್ಕದಲ್ಲಿ ಸಾಧನೆ ಮಾಡಿದರು. ದೇಶದ ಬದಲಾವಣೆಯಲ್ಲಿ ಶಕ್ತಿ ತುಂಬಿದವರು ಎಂದರು.

ನಗರಾಧ್ಯಕ್ಷ ನವೀನ್ ಚಾಲುಕ್ಯ ಮಾತನಾಡಿ, ವಾಜಪೇಯಿಯವರು ಅಜಾತ ಶತೃಗಳಾಗಿದ್ದರು. ಯಾರನ್ನು ಕೀಳಾಗಿ ಕಾಣುತಿರಲಲ್ಲ. ಎಲ್ಲರನ್ನು ಸಮಾನವಾಗಿ ಕಂಡು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಿ ಬರಬೇಕಾದರೆ ಈ ಹಿಂದೆ ಹರ ಸಾಹಸ ಪಡಬೇಕಿತ್ತು. ಆದರೆ ಇಂದು ವಾಜಪೇಯಿರವರು ನೀಡಿದ ಉತ್ತಮವಾದ ರಸ್ತೆಯಿಂದಾಗಿ ಯಾವುದೇ ಅಫಘಾತ ಇಲ್ಲದೆ ಸುಗಮವಾಗಿ ಹೋಗಿ ಬರಲಾಗುತ್ತಿದೆ ಎಂದರು.

ಸಂಪತ್ ಕುಮಾರ್, ಶಿವಣ್ಣಚಾರ್ ಮಾತನಾಡಿದರು. ಗ್ರಾಮಾಂತರ ಘಟಕದ ಅಧ್ಯಕ್ಷ ಕಲ್ಲೇಶಯ್ಯ, ಕಾರ್ಯದರ್ಶಿ ಮೋಹನ್, ವಕ್ತಾರ ದಗ್ಗೆ ಶಿವಪ್ರಕಾಶ್, ಕಿರಣ್ ಕುಮಾರ್, ಭರತ್, ಸಂಜು, ಅರುಣಾ ಪರಶುರಾಮ್, ವಿರೂಪಾಕ್ಷಿ, ತಿಮ್ಮಣ್ಣ, ಅನೂಪ್ ಮಹಾಂತೇಶ್, ಪಾಪಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು. ನಾಗರಾಜ್ ಬೇದ್ರೇ ಸ್ವಾಗತಿಸಿದರು.ತಿಪ್ಪೇಸ್ವಾಮಿ ವಂದಿಸಿದರು.