ಇಂದಿನಿಂದ ಅಂತರ ಗ್ರಾಮ ಹಾಕಿ ಪಂದ್ಯಾವಳಿ, ಹಗ್ಗಜಗ್ಗಾಟ ಸ್ಪರ್ಧೆ

| Published : Oct 29 2024, 01:02 AM IST

ಸಾರಾಂಶ

ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಗಳು ಅ. 29ರಿಂದ ನಡೆಯಲಿದೆ. 16 ತಂಡಗಳು ಭಾಗವಹಿಸಲಿದೆ.

ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು

ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ಅ. 29ರಿಂದ ನಡೆಯಲಿದೆ. ಟೂರ್ನಿಯನ್ನು ವ್ಯವಸ್ಥಿತವಾಗಿ ಸಂಘಟಿಸಲು ನಾಲ್ನಾಡ್ ಹಾಕಿ ಕಪ್ ಕ್ಲಬ್ ನ ಪದಾಧಿಕಾರಿಗಳು ಸಿದ್ಧರಾಗಿದ್ದಾರೆ.ಹಾಕಿ ಪಂದ್ಯಾವಳಿಯಲ್ಲಿ ನಾಲ್ನಾಡ್ ವ್ಯಾಪ್ತಿಯ ಬಲ್ಲಮಾವಟಿ, ನಾಫೋಕ್ಲು, ಕಕ್ಕಬೆ-ಕುಂಜಿಲ, ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ 16 ತಂಡಗಳು ಭಾಗವಹಿಸಲಿವೆ. ಅಂತರ ಪ್ರೌಢಶಾಲಾ ಹಾಕಿ ಪಂದ್ಯಾವಳಿಯಲ್ಲಿ ಐದು ತಂಡಗಳು ಪಾಲ್ಗೊಳ್ಳಲಿವೆ. ಮಹಿಳೆಯರಿಗಾಗಿ ಆಯೋಜಿಸಲಾಗಿರುವ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಹತ್ತು ತಂಡಗಳು ಪಾಲ್ಗೊಳ್ಳಲಿವೆ ಎಂದು ಕ್ರೀಡಾ ಕೂಟ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ತಿಳಿಸಿದರು.ಪುರುಷರಿಗೆ ಹಾಕಿ ಟೂರ್ನಿ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆ ಆಯೋಜಿಸಲಾಗಿದ್ದು ಗ್ರಾಮೀಣ ಕ್ರೀಡಾಕೂಟಗಳು ಮತ್ತೆ ಕ್ರೀಡಾಪ್ರಿಯರಿಗೆ ರಸದೌತಣ ನೀಡಲಿವೆ. ಆಟಕ್ಕೆ ಇನ್ನಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೇಸಿಗೆ ರಜೆ ಸಂದರ್ಭ ಮಕ್ಕಳಿಗೆ ನುರಿತ ತರಬೇತುದಾರರಿಂದ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲು ಹಾಕಿ ಕ್ಲಬ್ ಯೋಜನೆ ರೂಪಿಸಿದೆ.ಹಲವು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದ್ದ ನಾಲ್ ನಾಡ್ ಹಾಕಿ ಟೂರ್ನಿ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಅದಕ್ಕೆ ಮತ್ತೆ ಪುನಶ್ಚೇತನ ನೀಡಲಾಗಿದೆ. ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಟೂರ್ನಿ ಪ್ರಯೋಜಕರಾಗಿದ್ದು ವಿಜೇತರಿಗೆ ಬಹುಮಾನಗಳನ್ನು, ಟ್ರೋಫಿಗಳನ್ನು ವಿತರಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಕ್ಲಬ್ ಕಾರ್ಯದರ್ಶಿ ಚಂಗೇಟಿರ ಸೋಮಣ್ಣ ಹೇಳಿದರು.

ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್, ಖಜಾಂಚಿ ಚೀಯಂಡಿರ ದಿನೇಶ್, ಸಹಕಾರ್ಯದರ್ಶಿ ಮಚ್ಚುರ ಯದುಮಾರ್, ಕ್ಲಬ್

ಪದಾಧಿಕಾರಿಗಳು, ಸಹ ಸದಸ್ಯರೊಂದಿಗೆ ಗ್ರಾಮಾಂತರ ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಬಹುಮಾನಗಳ ವಿವರ: ಅಂತರ ಗ್ರಾಮ ಹಾಕಿ ಟೂರ್ನಿಯಲ್ಲಿ ವಿಜೇತ ತಂಡಕ್ಕೆ 30,000 ರು. ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ 20, 000 ರು. ನಗದು ಹಾಗೂ ಟ್ರೋಫಿ ಹಾಗೂ ರನ್ನರ್ ಅಪ್ ತಂಡಗಳಿಗೆ ತಲಾ 10,000 ರು. ಮತ್ತು ಟ್ರೋಫಿ ವಿತರಿಸಲಾಗುವುದು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 20000 ರು. ಮತ್ತು ಟ್ರೋಫಿ , ರನ್ನರ್ ಅಪ್ ಪ್ರಶಸ್ತಿ ಪಡೆದವರಿಗೆ 15, 000 ರು. ಮತ್ತು ಟ್ರೋಫಿ ವಿತರಿಸಲಾಗುವುದು.ಹಾಕಿ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಮಾಳೆಯಂಡ ಬಿನು ಭೀಮಯ್ಯ ಮತ್ತು ಪೊನ್ನಣ್ಣ ಟ್ರೋಫಿಯನ್ನು ಪ್ರಾಯೋಜಿಸಿದ್ದರೆ ರನ್ನರ್ ಅಪ್ ತಂಡಕ್ಕೆ ಮೂವೇರ ವಿಜು ಮಂದಣ್ಣ ಟ್ರೋಫಿ ಪ್ರಾಯೋಜಿಸಿದ್ದಾರೆ. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಚೀಯಂಡಿರ ದಿನೇಶ್ ಗಣಪತಿ ಹಾಗೂ ರನ್ನರ್ ಅಪ್ ತಂಡಕ್ಕೆ ಮಚ್ಚುರ ಯದು ಮಂದಣ್ಣ ಟ್ರೋಫಿಯನ್ನು ಪ್ರಾಯೋಜಿಸಿದ್ದಾರೆ.ಉದ್ಘಾಟನೆ: ನಾಲ್ನಾಡ್ ಕಪ್ ಹಾಕಿ ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಅ. 29 ರಂದು (ಮಂಗಳವಾರ)ನಡೆಯಲಿದೆ. ಅಪ್ಪಚೆಟ್ಟೋಳಂಡ ಕುಟುಂಬದ ಉಪಾಧ್ಯಕ್ಷ ಅಪ್ಪಚೆಟ್ಟೋಳಂಡ ಭೀಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಟಿ ಸುರೇಶ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚೋಕಿರ ಬಾಬಿ ಭೀಮಯ್ಯ, ನಾಪೋಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ, ನೇತಾಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೂವೆರ ನಾಣಪ್ಪ, ಕಾಫಿ ಬೆಳೆಗಾರ ಅಪ್ಪುಮಣಿಯಂಡ ರಘು ಸುಬ್ಬಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ನಾಲ್ನಾಡ್ ಕಪ್ ಹಾಕಿ ಟೂರ್ನಿಗೆ ಪುನಶ್ಚೇತನ ನೀಡಲಾಗಿದೆ. ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಒಳಪಟ್ಟ ಗ್ರಾಮಗಳ ನಡುವೆ ಮೂರು ಸ್ಪರ್ಧೆಗಳು ನಡೆಯಲಿವೆ. ಹಾಕಿ ಕರ್ನಾಟಕದ ನಿಯಮದ ಪ್ರಕಾರ ತೀರ್ಪು ನೀಡಲು ಹಾಕಿ ಕೂರ್ಗ್ ಸಂಸ್ಥೆ ಸಿದ್ಧವಾಗಿದೆ. ಪಂದ್ಯಾವಳಿ ಐದು ದಿನಗಳ ಕಾಲ ನಡೆಯಲಿದೆ ಎಂದು ಟೂರ್ನಮೆಂಟ್ ಡೈರೆಕ್ಟರ್ ಕರವಂಡ ಅಪ್ಪಣ್ಣ ಹೇಳಿದರು.